ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲಕ್ಕೆ ಬಿ ಎಸ್ ಎನ್ ಎಲ್ ಮಹಾಪ್ರಬಂಧಕ ಜಿ ಆರ್ ರವಿ ಅವರು ಸೋಮವಾರ ಭೇಟಿ ನೀಡಿದರು. ಕಮಿಲದಲ್ಲಿ ನೂತನವಾಗಿ ಆರಂಭವಾಗಿರುವ ವೇಗದ ಇಂಟರ್ನೆಟ್ ಸೇವೆ ಭಾರತ್ ಏರ್ ಫೈಬರ್ ವೀಕ್ಷಣೆ ಮಾಡಿದರು.
ಈಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ ಎಸ್ ಎನ್ ಎಲ್ ವತಿಯಿಂದ ಆರಂಭಗೊಂಡಿರುವ ವೇಗದ ಇಂಟರ್ನೆಟ್ ಸೇವೆ ಭಾರತ್ ಏರ್ ಫೈಬರ್ ಸೇವೆಗೆ ಸುಳ್ಯದಲ್ಲಿ ಚಾಲನೆ ನೀಡಲಾಗಿತ್ತು. ಸುಳ್ಯದ ದೊಡ್ಡತೋಟ, ಕಮಿಲ ಹಾಗೂ ತೊಡಿಕಾನದಲ್ಲಿ ಈ ಸೇವೆ ಆರಂಭಗೊಂಡಿದೆ. ಸೇವೆಯನ್ನು ವೀಕ್ಷಣೆ ಮಾಡಲು ಬಿ ಎಸ್ ಎನ್ ಎಲ್ ಮಹಾಪ್ರಬಂಧಕ ಜಿ ಆರ್ ರವಿ ಅವರು ಸುಳ್ಯ ತಾಲೂಕಿಗೆ ಮಾ.15 ರಂದು ಭೇಟಿ ನೀಡಿದ್ದರು. ತೊಡಿಕಾನ, ದೊಡ್ಡತೋಟ ಭೇಟಿ ಬಳಿಕ ಕಮಿಲಕ್ಕೆ ಆಗಮಿಸಿದ ಅವರು ಸೇವೆಯ ಬಗ್ಗೆ ಗ್ರಾಹಕರಿಂದ ಮಾಹಿತಿ ಪಡೆದರು. ಇದೇ ಸಂದರ್ಭ ಗ್ರಾಮೀಣ ಭಾಗದ ಟವರ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಬ್ಯಾಟರಿ ವ್ಯವಸ್ಥೆ, ಜನರೇಟರ್ ಗೆ ಡೀಸೆಲ್ ಸೇರಿದಂತೆ ವ್ಯವಸ್ಥಿತ ಇಂಟರ್ನೆಟ್ ಬಗ್ಗೆ ಚರ್ಚಿಸಿದರು. ಗ್ರಾಮೀಣ ಭಾಗಕ್ಕೆ ತಕ್ಷಣವೇ ಬ್ಯಾಟರಿ ವ್ಯವಸ್ಥೆ ಬಗ್ಗೆ ಗಮನಹರಿಸುವುದಾಗಿ ಹೇಳಿದರು. ಜನರೇಟರ್ ಗೆ ಡೀಸೆಲ್ ಸೇರಿದಂತೆ ವ್ಯವಸ್ಥೆ ಬಗ್ಗೆ ತಕ್ಷಣವೇ ಪೂರೈಕೆಗೆ ಕ್ರಮ ಕೈಗೊಳ್ಳಲು ತಿಳಿಸುವುದಾಗಿ ಹೇಳಿದರು.ಬಿಎಸ್ ಎನ್ ಎಲ್ ಸೇವೆಯ ಬಗ್ಗೆ ಯಾವುದೇ ಋಣಾತ್ಮಕ ಅಭಿಪ್ರಾಯಗಳು ಬೇಡ. ಸರ್ಕಾರ ಈಗಾಗಲೇ ಎಲ್ಲಾ ವ್ಯವಸ್ಥೆಗೆ ಮುಂದಾಗಿದೆ, ಎಲ್ಲಾ ಅದಿಕಾರಿಗಳೂ ಸೇವೆಗೆ ಬದ್ಧರಾಗಿದ್ದಾರೆ. ಅದರ ಜೊತೆಗೆ ಗುತ್ತಿಗೆ ಆಧಾರದಲ್ಲಿಯೂ ಕೆಲಸ ನಡೆಯುತ್ತಿದೆ. ಹೀಗಾಗಿ ಬಿ ಎಸ್ ಎನ್ ಎಲ್ ಬಗ್ಗೆ ಯಾವುದೇ ಋಣಾತ್ಮಕ ಅಭಿಪ್ರಾಯಗಳು ಇನ್ನು ಬೇಕಾಗಿಲ್ಲ ಗ್ರಾಹಕರ ಸೇವೆಗೆ ಸದಾ ಬದ್ದವಾಗಿದೆ ಎಂದು ಭರವಸೆ ನೀಡಿದರು.ಇದೇ ವೇಳೆ ಸುಳ್ಯ ತಾಲೂಕಿನಲ್ಲಿ ಭಾರತ್ ಏರ್ ಫೈಬರ್ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭ ಕಮಿಲ ನಾಗರಿಕರ ವತಿಯಿಂದ ಮಹಾಪ್ರಬಂಧಕ ಜಿ ಆರ್ ರವಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಬಿಎಸ್‌ಎನ್ ಎಲ್ ಡಿಜಿಎಂ ಆನಂದ , ಎಸ್ ಡಿ ಇ ಗೋಪಾಲಕೃಷ್ಣ ಭಟ್ , ಸೆಲ್ ಟೋನ್ ಸಂಸ್ಥೆಯ ಮುಖ್ಯಸ್ಥ ವಿಷ್ಣುಪ್ರಸಾದ್ ಬಾಯಾರು, ಗ್ರಾಪಂ ಸದಸ್ಯರುಗಳಾದ ಶಾರದಾ ಎಂಕೆ, ಲತಾಕುಮಾರಿ ಕಮಿಲ, ಭರತ್ ಕೆವಿ ಹಾಗೂ ಪ್ರಮುಖರಾದ ಗಂಗಾಧರ ಭಟ್ ಪುಚ್ಚಪ್ಪಾಡಿ, ಸುಧಾಕರ ಮಲ್ಕಜೆ, ಮುಳಿಯ ಕೇಶವ ಭಟ್ , ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಉಬರಡ್ಕ, ಸಾಯಿರಂಜನ್ ಕಲ್ಚಾರು, ಸದಾಶಿವ ಕೊಡಪ್ಪಾಲ, ಬಾಬು ಕಮಿಲ , ಹರ್ಷಿತ್ ಕಾಂತಿಲ, ಮಹೇಶ್ ಪುಚ್ಚಪ್ಪಾಡಿ, ಉದಯ ಶಂಕರ್ ಕಮಿಲ, ಸೆಲ್ ಟೋನ್ ಸಂಸ್ಥೆಯ ಅನಂತಕೃಷ್ಣ, ನಿರಂಜನ ಕಾಂತಿಲ, ಅಶೋಕ್ ಮುತ್ಲಾಜೆ, ಯುವರಾಜ್ ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024