ನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನ
ಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತು
ಅಗ್ನಿ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಸುಳ್ಯದ ಅಗ್ನಿ ಶಾಮಕ ಠಾಣೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಶ್ರೀಮತಿ ರತ್ನಾವತಿ ಡಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಇಂತಹ ಮಾಹಿತಿಗಳ ಅಗತ್ಯ ಇಂದಿನ ದಿನಗಳಲ್ಲಿ ಬಹಳಷ್ಟಿದೆ. ಇಲ್ಲಿ ಸಿಕ್ಕಂತಹ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಯು ಬಿ ರಾಜಗೋಪಾಲ್ ಮಾತನಾಡಿ ಇಂತಹ ಕಾರ್ಯಕ್ರಮಗಳ ಮೂಲಕ ಯುವಜನತೆ ಎಚ್ಚೆತ್ತುಕೊಂಡಾಗ ಅಗ್ನಿ ಅನಾಹುತಗಳನ್ನು ತಡೆಗಟ್ಟಲು ಸಾಧ್ಯ ಮತ್ತು ಇಂತಹ ಅವಘಡಗಳಿಂದ ಸಮಾಜವನ್ನು ರಕ್ಷಿಸಬಹುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಲ್ಲಪ್ಪ ಅವರು ಮಾತನಾಡಿ, ಯಾವುದೇ ಆಸ್ತಿಪಾಸ್ತಿಗೆ ಹಾನಿ ಉಂಟಾದಾಗ ಯುವಜನತೆ ಒಂದಾಗಿ ಅನಾಹುತಗಳನ್ನು ತಡೆಗಟ್ಟುವಲ್ಲಿ ಕೈಜೋಡಿಸಬೇಕು ಎಂದು ಪ್ರಾಯೋಗಿಕವಾಗಿ ಕೆಲವೊಂದು ಮಾಹಿತಿ ನೀಡಿದರು. ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಕೃತಿಯ ಮುಂದೆ ಮನುಷ್ಯನ ಯಾವುದೇ ಆಟಗಳು ನಡೆಯುವುದಿಲ್ಲ. ಹಾಗಾಗಿ ಬೆಂಕಿ ಗಾಳಿ ನೀರಿನಿಂದ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ ಆದ್ದರಿಂದ ಇಂತಹ ಕಾರ್ಯಕ್ರಮಗಳು ಅಗತ್ಯ ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಆರಂಭದಲ್ಲಿ ವಿದ್ಯಾರ್ಥಿಗಳಾದ ಅಕ್ಷತಾ, ಅನಘಾ, ಮೌನ, ಮೌನವಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕೃತಿಕಾ ಕೆ ಜೆ ಸ್ವಾಗತಿಸಿ, ಅಶ್ವಿತಾ ಬಿ ಸಿ ವಂದಿಸಿದರು. ತ್ರಿಶಾಲಿ ಕಾರ್ಯಕ್ರಮ ನಿರೂಪಿಸಿದರು
ವೇದಿಕೆಯಲ್ಲಿ ಯುವ ರೆಡ್ ಕ್ರಾಸ್ ಘಟಕದ ನಾಯಕರುಗಳುು ಹಾಗ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಮೈದಾನದಲ್ಲಿ ಅಗ್ನಿ ಶಮನ ಪ್ರಾತ್ಯಕ್ಷಿಕೆ ನಡೆಯಿತು.