Ad Widget

ಸಚಿವ ಅಂಗಾರರ ಯಶೋಗಾಥೆ – ಒಬ್ಬ ಸಂಘದ ಸಾಮಾನ್ಯ ಸ್ವಯಂ ಸೇವಕನಿಂದ ಶಾಸಕನವರೆಗೆ – ಒಬ್ಬ ಕೂಲಿ ಕಾರ್ಮಿಕನಿಂದ ರಾಜ್ಯ ಸಂಪುಟ ದರ್ಜೆಯ ಸಚಿವನವರೆಗೆ


ಸುಳ್ಯ ವಿಧಾನ ಸಭಾ ಕ್ಷೇತ್ರದ ಯಾವುದೋ ಒಂದು ಮೂಲೆಯಲ್ಲಿ ಅತ್ಯಂತ ನಿಷ್ಠೆಯಿಂದ ಸಂಘದ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ, ಹೊಟ್ಟೆ ಪಾಡಿಗಾಗಿ ಮನೆ ನಿರ್ವಹಣೆಗೆ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿನಗೂಲಿ ಕಾರ್ಮಿಕನಾಗಿ ದುಡಿದು ಇಂದು ತನ್ನ ನಿಸ್ವಾರ್ಥ ಸೇವೆಯಿಂದ ಆರು ಬಾರಿ ಸುಳ್ಯ ಕ್ಷೇತ್ರದ ಶಾಸಕನಾಗಿ , ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಳ್ಯದ ಬಂಗಾರ ಶಾಸಕರಾದ ಎಸ್ ಅಂಗಾರ ಅವರ ಜೀವನದ ಯಶೋಗಾಥೆ. ೧೯೬೪ರ ಜುಲೈ ೧ ರಂದು ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಎಂಬ ಪುಟ್ಟ ಹಳ್ಳಿಯ ಸಣ್ಣ ಗುಡಿಸಲಿನಲ್ಲಿ ಚನಿಯ ಮತ್ತು ಶ್ರೀಮತಿ ಹುಕ್ರು ದಂಪತಿಗಳ ಮಗನಾಗಿ ಹುಟ್ಟಿದ ಅಂಗಾರರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ತನ್ನ ಹುಟ್ಟೂರಿನಲ್ಲಿಯೇ ಪಡೆದು ಮುಂದಕ್ಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕಾರ್ಮಿಕನಾಗಿ ವೃತ್ತಿಯನ್ನು ಆರಂಭಿಸುತ್ತಾರೆ. ಬಾಲ್ಯದಲ್ಲಿಯೇ ಬಹಳ ಸೌಮ್ಯ ಸ್ವಭಾವದ ಮೃದು ವ್ಯಕ್ತಿತ್ವವನ್ನು ಹೊಂದಿದ್ದ ಅಂಗಾರರು ತನ್ನ ಕೆಲಸ ಕಾರ್ಯಗಳನ್ನು ಬಹಳ ಅಚ್ಚು ಕಟ್ಟಾಗಿ ನಿಷ್ಠೆಯಿಂದ ಮಾಡಿ ಮುಗಿಸುತ್ತಿದ್ದರು. ಅವರ ಈ ಸ್ವಭಾವವು ಮುಂದೆ ಅವರನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಡೆಗೆ ಆಕರ್ಷಿತನಾಗುವಂತೆ ಮಾಡುತ್ತದೆ. ಇವರಲ್ಲಿದ್ದ ಕ್ರೀಯಾ ಶೀಲತೆಯನ್ನು ಗುರುತಿಸಿದ ಸಂಘದ ಹಿರಿಯರಾದ ದಿ.ಜನಾರ್ಧನ ಪ್ರಭು ಕುಂಟಿಹಿತ್ಲು ಮತ್ತು ತಳೂರು ಚಂದ್ರಶೇಖರರವರು ಉತ್ತಮ ಪ್ರೋತ್ಸಾಹ ನೀಡುತ್ತಾರೆ. ಸಂಘವು ನಿಷ್ಠೆ ಹಾಗೂ ಶಿಸ್ತಿನ ಪ್ರತಿರೂಪವಾಗಿರುತ್ತದೆ. ಮುಂದೆ ಅಂಗಾರರು ಸಂಘದ ಬೈಠಕ್ ಹಾಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಅಲ್ಲದೇ, ತನ್ನ ಶಿಸ್ತು ಮತ್ತು ನಿಷ್ಠೆಯಿಂದ ಸಂಘದ ಒಬ್ಬ ಸಕ್ರೀಯ ಸ್ವಯಂ ಸೇವಕರಾಗುತ್ತಾರೆ. ಅಂಗಾರರದ್ದು ಬಹಳ ಬಡ ಕುಟುಂಬದ ಹಿನ್ನೆಲೆ ಆದುದರಿಂದ ತನ್ನ ವಿದ್ಯಾಭ್ಯಾಸವನ್ನು ಪ್ರೌಢ ಶಿಕ್ಷಣದಲ್ಲಿಯೇ ಮೊಟಕುಗೊಳಿಸಿ ಕುಟುಂಬದ ಜವಾಬ್ದಾರಿ ಹೊತ್ತು ಜೀವನ ನಿರ್ವಹಣೆಗೆ ಕೂಲಿ ಕಾರ್ಮಿಕನಾಗಿ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಆದರೆ ಅಂಗಾರರು ಯಾವುದೇ ಪದವಿಯನ್ನು ಪಡೆಯದಿದ್ದರೂ ಸಹ ಸಂಘವು ಅದಕ್ಕಿಂತ ಉತ್ತಮವಾದ ಜೀವನದ ಮೌಲ್ಯಗಳನ್ನು ಧಾರೆ ಎರೆಯುತ್ತದೆ. ಈ ವ್ಯಕ್ತಿತ್ವವೇ ಮುಂದೆ ಕರ್ನಾಟಕದ ಮೂಲೆಯಲ್ಲಿರುವ ಒಂದು ಪುಟ್ಟ ತಾಲೂಕು ಸುಳ್ಯ ಎಂಬ ಹೆಸರನ್ನು ವಿಶ್ವದ ಭೂಪಟದಲ್ಲಿ ರಾಜಕೀಯ ಹಾಗೂ ರಾಜಕೀಯೇತರವಾಗಿ ಮಾದರಿ ಕ್ಷೇತ್ರವಾಗಿ ಗುರುತಿಸಲ್ಪಡುವಂತೆ ಮಾಡುತ್ತದೆ.
ಸಂಘದ ಶಿಸ್ತಿನ ಸಿಪಾಯಿಯಾಗಿದ್ದ ಅಂಗಾರರು ಮುಂದೆ ೧೯೭೯ರಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅವರ ಪ್ರೋತ್ಸಾಹದಿಂದ ಮತ್ತು ಸಂಘದ ಹಿರಿಯರ ಅಣತಿಯಂತೆ ಭಾರತೀಯ ಜನತಾ ಪಾರ್ಟಿಯನ್ನು ಸೇರುತ್ತಾರೆ. ೧೯೮೯ರ ವಿಧಾನ ಸಭಾ ಚುಣಾವಣೆಯಲ್ಲಿ ಮೊದಲ ಬಾರಿ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಾಗಿದ್ದ ಅಂಗಾರರು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೀಸಲು ಪರಿಶಿಷ್ಟ ಜಾತಿ ಖೋಟದಡಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆದರೆ ಕೇವಲ ೫ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ ಕುಶಲ ಅವರ ಎದುರು ಪರಾಭವಗೊಳ್ಳುತ್ತಾರೆ. ಮುಂದುವರೆದು ಬಹಳ ಸರಳ ವ್ಯಕ್ತಿತ್ವದ ಅಂಗಾರರು ಸೋಲಿನಿಂದ ಯಾವುದೇ ರೀತಿಯಲ್ಲಿಯು ಕುಗ್ಗದೆ ತನ್ನ ಚಾಣಾಕ್ಷತೆಯನ್ನು ಬಳಸಿ ಹಿರಿಯರ ಮಾರ್ಗದರ್ಶನದಂತೆ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೆ. ಮುಂದಿನ ೧೯೯೪ರ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಹಣದ ಪ್ರಭಾವವಿಲ್ಲದೆ ತನ್ನ ಸರಳ ವ್ಯಕ್ತಿತ್ವ ಹಾಗೂ ಕ್ಷೇತ್ರದ ಜನತೆಯೊಂದಿಗಿನ ಉತ್ತಮ ಒಡನಾಟದಿಂದ ಪ್ರಚಂಡ ಬಹುಮತಗಳಿಂದ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗುತ್ತಾರೆ. ಜೊತೆಗೆ ೯೪ರ ನಂತರ ತಮ್ಮ ಕ್ಷೇತ್ರದಲ್ಲಿ ನಡೆದ ಪ್ರತಿಯೊಂದು ಜಿ.ಪಂ, ತಾ.ಪಂ, ಗ್ರಾ.ಪಂ ಹೀಗೆ ಎಲ್ಲಾ ಚುನಾವಣೆಯಲ್ಲಿಯು ಭಾರತೀಯ ಜನತಾ ಪಾರ್ಟಿಯೇ ಮುನ್ನಡೆ ಗಳಿಸಿ ಅಧಿಕ್ಕಾರದ ಚುಕ್ಕಾಣಿ ಹಿಡಿಯುತ್ತದೆ. ಆದರೂ ಅಧಿಕಾರದಿಂದ ಹಿಗ್ಗದ ಅಂಗಾರರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವನವನ್ನು ನಡೆಸುತ್ತಾ ತಮ್ಮ ಬಿಡುವಿನ ಸಮಯದಲ್ಲಿ ಒಬ್ಬ ರೈತನಾಗಿ ತಮ್ಮ ತೋಟದ ಕೆಲಸವನ್ನು ತಾವೇ ನಿರ್ವಹಿಸುತ್ತಾ ಜನ ಮನ್ನಣೆ ಗಳಿಸುತ್ತಾರೆ. ತನ್ನ ಸ್ವಾರ್ಥಕ್ಕೆ ಏನನ್ನೂ ಬಯಸದ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಮೂಲೆ ಮೂಲೆಗೆ ಪರ್ಯಟಣೆ ಮಾಡಿ ಅಭಿವೃದ್ದಿಯ ಮಂತ್ರವನ್ನು ಪಠಿಸುತ್ತಾರೆ. ಉತ್ಸಾಹಿ ಯುವಕರ ನೆಚ್ಚಿನ ಕಣ್ಮಣೆಯಾಗುತ್ತಾರೆ. ಒಬ್ಬ ಹಿರಿಯ ರಾಜಕಾರಣಿಯಾಗಿದ್ದರೂ ತನ್ನೆಲ್ಲಾ ತುರ್ತು ಕೆಲಸ ಕಾರ್ಯಗಳ ನಡುವೆಯು ತನ್ನ ಮುಂದೆ ಬಂದ ಎಳೆಯ ಮಗುವನ್ನು ಸಹ ಬಹಳ ಪ್ರೀತಿಯಿಂದ ಗೌರವಯುತವಾಗಿ ಮಾತನಾಡಿಸುವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುತ್ತಾರೆ. ಅವರ ಈ ತರಹದ ನಡವಳಿಕೆಗಳು ಕ್ಷೇತ್ರದ ಜನರಲ್ಲಿ ಅಗಾಧವಾಗಿ ಅವರ ಬಗ್ಗೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಮುಂದೆ ಇದು ರಾಜಕಾರಣಿ ಎಂದರೆ ಅಂಗಾರರಂತಿರಬೇಕು. ಅಂಗಾರ ಎಂದರೆ ಸರಳತೆ, ನಿಷ್ಠೆ ಎನ್ನುವ ಹಂತಕ್ಕೆ ಬೆಳೆದು ನಿಲ್ಲುತ್ತದೆ. ಈ ನಡುವೆ ತಮ್ಮ ರಾಜಕೀಯ ಜೀವನದ ಮಧ್ಯೆ ೧೯೯೯ರಲ್ಲಿ ಉಡುಪಿಯ ವೇದಾವತಿ ಎಂಬವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಈ ದಂಪತಿಗಳಿಗೆ ಪೂಜಾಶ್ರೀ ಮತ್ತು ಗೌತಮ್ ಎಂಬ ಎರಡು ಮಕ್ಕಳಿದ್ದಾರೆ.
ಅಂಗಾರರು ಒರ್ವ ಸರ್ವ ಧರ್ಮ ಪ್ರೇಮಿಯಾಗಿದ್ದೂ, ಕ್ಷೇತ್ರದ ಎಲ್ಲಾ ಧರ್ಮದ ಬಾಂಧವರಲ್ಲಿ ಉತ್ತಮ ಒಡನಾಟವನ್ನು ಇಟ್ಟುಕೊಂಡು , ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಾ ಸರ್ವರನ್ನೂ ಪ್ರೀತಿಸುವ ಒಬ್ಬ ಧೀಮಂತ ವ್ಯಕ್ತಿಯಾಗುತ್ತಾರೆ. ಸಾಮಾನ್ಯವಾಗಿ ಒಬ್ಬ ಉನ್ನತ ಮಟ್ಟದ ರಾಜಕಾರಣಿಯ ಟ್ರೇಡ್ ಮಾರ್ಕ್ ರಾಯಲ್ ಜೀವನ ಆದ್ರೆ ಅಂಗಾರರದ್ದು ಅದಕ್ಕೆ ತದ್ವಿರುದ್ಧ ವ್ಯಕ್ತಿತ್ವ. ಅವರು ಸರಳ ಜೀವನವನ್ನು ನಡೆಸುತ್ತಾ ತನ್ನ ಕೆಲಸ ಕಾರ್ಯಗಳನ್ನು ತಾನೇ ಮಾಡುತ್ತಾ ಒಬ್ಬ ಮಾದರಿ ರಾಜಕಾರಣಿಯಾಗುತ್ತಾರೆ. ಅಂಗಾರರು ಕ್ಷೇತ್ರದ ಜನತೆಯ ಮೇಲೆ ಎಷ್ಟು ಪ್ರಭಾವ ಬೀರಿದ್ದರು ಎಂಬುದಕ್ಕೆ ನೈಜ ಉದಾಹರಣೆ ೨೦೧೪ರ ವಿಧಾನಸಭಾ ಚುನಾವಣೆ. ರಾಜ್ಯದಲ್ಲಿ ಬಿಜೆಪಿ ಬಂಡಾಯದ ಕಾರಣಕ್ಕಾಗಿ ಅಧಃ ಪತನವಾದರೆ, ಕರಾವಳಿಯ ಫಲಿತಾಂಶ ಶೋಚನೀಯ. ಕರಾವಳಿಯ ಒಟ್ಟು ೮ ಸ್ಥಾನಗಳಲ್ಲಿ ೭ ಸ್ಥಾನವು ಕಾಂಗ್ರೆಸ್ ಪಾಲಾಗುತ್ತದೆ. ಆದರೆ ಅಂಗಾರರು ಜನತೆಗೆ ನೀಡಿದ ನಿಸ್ವಾರ್ಥ ಸೇವೆ ಹಾಗೂ ತನ್ನ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಅವರನ್ನು ಮತ್ತೆ ಅಧಿಕ್ಕಾರಕ್ಕೆ ತಂದು ನಿಲ್ಲಿಸುತ್ತದೆ. ಆ ಮೂಲಕ ಸುಳ್ಯ ಬಿಜೆಪಿಯ ಭದ್ರ ಕೋಟೆಯಾಗುತ್ತದೆ. ಆದರೆ ಇನ್ನೊಂದು ಸಂತಸದ ವಿಷಯವೆಂದರೆ ಅಂಗಾರರು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದಾಗಿನಿಂದ ಹಲವು ಧರ್ಮಿಯರು ವಾಸಿಸುವ ಈ ಕ್ಷೇತ್ರದಲ್ಲಿ ಯಾವುದೇ ರೀತಿಯ ದೊಂಬಿ ಗಲಭೆಗಳಾಗಲೀ, ಕೋಮು ಪ್ರಚೋದಿತ ಅಹಿತಕರ ಘಟನೆಗಳಾಗಲೀ, ಅಮಾನುಷ ಅತ್ಯಾಚಾರದಂತಹ ದುಷ್ಕೃತ್ಯಗಳಾಗಲೀ ಈ ಕ್ಷೇತ್ರದ ಜನತೆಯನ್ನು ಕಾಡಿರುವುದಿಲ್ಲ. ಕರ್ನಾಟಕದಲ್ಲಿ ಅತೀ ಹೆಚ್ಚು ಕೋಮು ಗಲಾಭೆ ನಡೆಯುವ ಪ್ರದೇಶವೆಂದರೆ ಕರಾವಳಿ, ಆದರೆ ಕರಾವಳಿಯ ಈ ಒಂದು ಕ್ಷೇತ್ರಕ್ಕೆ ಅದ್ಯಾವುದರ ವಾಸನೆಯು ಬಡಿಯಲಿಲ್ಲ. ಈ ಕ್ಷೇತ್ರದ ಎಲ್ಲಾ ಧರ್ಮಿಯರು ಪರಸ್ಪರ ಸಹೋದರತ್ವದಿಂದ ಜೀವನ ನಡೆಸುತ್ತಿದ್ದಾರೆ. ಈ ಎಲ್ಲಾ ಉತ್ತಮವಾದ ಬೆಳವಣಿಗೆಗಳು ನಡೆದಿರುವುದು ನಮ್ಮ ಪ್ರೀತಿಯ ಶಾಸಕರಾದ ಎಸ್ ಅಂಗಾರ ಅವರ ಆಡಳಿತ ಅವಧಿಯಲ್ಲಿ ಎನ್ನುವುದು ಶ್ಲಾಘನೀಯ.
ಮುಂದುವರೆದು ಇದೀಗ ಕ್ಷೇತ್ರದ ಜನತೆ ಕಂಡ ಒಂದು ಕನಸು ಸುಳ್ಯ ಎಂಬ ಪುಟ್ಟ ಕ್ಷೇತ್ರವನ್ನು ಪ್ರಪಂಚದ ಭೂಪಟದಲ್ಲಿ ಮಾದರಿ ಕ್ಷೇತ್ರವಾಗಿ ಗುರುತಿಸುವಂತೆ ಮಾಡಿದ ಸುಳ್ಯದ ಬಂಗಾರ ಎಸ್ ಅಂಗಾರರವರು ರಾಜ್ಯ ಸಂಪುಟ ದರ್ಜೆಯ ಸಚಿವರಾಗುವುದು ಎಲ್ಲರ ಶುಭ ಹಾರೈಕೆಯಿಂದ ಸಾಕಾರ ಗೊಂಡಿದೆ. ತನ್ನ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರವಿಲ್ಲದೆ, ಅಧಿಕಾರದ ಅಹಂ ಇಲ್ಲದೆ, ಅಧಿಕ್ಕಾರಕ್ಕಾಗಿ ಲಾಭಿ ಮಾಡದೆ, ತಮ್ಮ ಕ್ಷೇತ್ರದ ಜನರ ಹಿತ ಕಾಯುತ್ತಾ, ತನ್ನ ಪಕ್ಷ ನಿಷ್ಠೆ, ನಿಸ್ವಾರ್ಥ ಸೇವೆ, ಸರಳ ಮನೋಭಾವದಿಂದ ಪಕ್ಷದ ಮುಖಂಡರ ಗಮನ ಸೆಳೆದು , ಯಾವುದೇ ತರಹದ ಕಪ್ಪು ಚುಕ್ಕಿ ಇಲ್ಲದೆ ರಾಜ್ಯ ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ. ಮುಂದೆಯು ತುಳುನಾಡಿನ ಆರಾಧ್ಯ ದೇವರಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಮಾನ್ಯ ಸಚಿವರಿಗೆ ಉತ್ತಮ ಆರೋಗ್ಯ ಮತ್ತು ಆಯುಸ್ಸು ನೀಡಿ ರಾಜ್ಯದ ಜನತೆಯ ಸೇವೆಯನ್ನು ಮಾಡುವ ಅವಕಾಶವನ್ನು ಕರುಣಿಸಲಿ ಎಂಬುದೇ ಹಾರೈಕೆ.
📝ಪೂರ್ಣಿಮಾ ಸಚಿನ್ ಕಣ್ಕಲ್, ಸುಬ್ರಹ್ಮಣ್ಯ

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!