ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇವರು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಿಗೆ ನೀಡುತ್ತಿರುವ ಪ್ರಶಸ್ತಿ ಹಾಗೂ ಗೌರವಧನಕ್ಕೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ದ.ಕ.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆಯ್ಕೆಯಾಗಿದೆ.ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಅಪೆಕ್ಸ್ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ಸಂಪಾಜೆ ಸಹಕಾರಿ ಸಂಘವನ್ನು ಸನ್ಮಾನಿಸಲಾಗುವುದು ಎಂದು ತಿಳಿದುಬಂದಿದೆ.
ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನ ಪ್ರಶಸ್ತಿಗೆ ಸಂಪಾಜೆ ಸಹಕಾರಿ ಸಂಘ ಆಯ್ಕೆಯಾಗಿರುವುದಕ್ಕೆ ಜಿಲ್ಲಾ ಬ್ಯಾಂಕಿನ ವತಿಯಿಂದ ನ.27 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ರವರನ್ನು ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾದ ಡಾ|ಯಂ. ಯನ್. ರಾಜೇಂದ್ರ ಕುಮಾರ್ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ನಿರ್ದೇಶಕರಾದ ಜಗದೀಶ ರೈ , ಜಾನಿ ಕೆ. ಪಿ. , ಜಿಲ್ಲಾ ಬ್ಯಾಂಕಿನ ನಿರ್ದೇಶಕರು, ಸಹಕಾರ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಪುತ್ಯರವರು ಉಪಸ್ಥಿತರಿದ್ದರು.