ಸುಳ್ಯ ತಾ.ಪಂ ಕಚೇರಿಯಲ್ಲಿ ನ.೨೫ರಂದು ನಡೆದ ಕೆಡಿಪಿ ಸಭೆಯಲ್ಲಿ ಈ ಭಾರಿ ಹಲವು ಮೂಲಭೂತ ಸಮಸ್ಯೆಗಳ ಕುರಿತು ಪ್ರಶ್ನೋತ್ತರಗಳು ಹಾಗೂ ಪ್ರಗತಿ ಪರಿಶೀಲನಾ ಸಭೆ, ಚರ್ಚೆ ಇಂದು ನಡೆಯಿತು . ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದಂತೆ ಅಧಿಕಾರಿಗಳ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ವಿವಿಧ ಸಮಸ್ಯೆಗಳ ಪರಿಶೀಲನಾ ಸಭೆಯು ನಡೆದು ಕಳೆದ ಎರಡು ವರ್ಷಗಳಿಂದ ಮಂಡೆಕೋಲು ಬೈಲಿನಲ್ಲಿ ಕುಡಿಯುವ ನೀರಿನ ಟ್ಯಾಂಕಿಗೆ ವಿದ್ಯುತ್ ಕಲೆಕ್ಷನ್ ಕೊಡಿಸಲು ಕೇವಲ ಮೂರು ವಿದ್ಯುತ್ ಕಂಬಗಳಿಂದ ಆಗುವ ಕೆಲಸಕ್ಕೆ ಅರಣ್ಯ ಪ್ರದೇಶದ ಮಧ್ಯಭಾಗದಿಂದ ೨೫ ಕಂಬಗಳನ್ನು ಕೊಟ್ಟು ಇಲ್ಲಿಯವರೆಗೆ ಅರಣ್ಯ ಇಲಾಖೆಯವರು ಅನುಮತಿ ನೀಡುತ್ತಿಲ್ಲ ಎಂದು ದೂರಿಕೊಂಡು ಕಾಲ ಕಳೆಯುತ್ತಿದ್ದೀರಿ. ಇದೀಗ ಸ್ವಂತಃ ನಾನೇ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದೇನೆ. ಕಡಿಮೆ ಸಮಯದಲ್ಲಿ ಆಗಬೇಕಾದ ಕೆಲಸವು ವಿನಃಕಾರಣ ಹೆಚ್ಚಿನ ಸಮಯ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಡುವಂತೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ಸಭೆಯಲ್ಲಿಸೂಚನೆ ನೀಡಿದರು.
ಹಾಡಿಕಲ್ಲು ಸ.ಹಿ.ಪ್ರಾ ಶಾಲೆಯ ಜಮೀನಿನ ಗಡಿಗುರುತನ್ನು ಮಾಡಿ ಕೊಡಿಸುವ ಬಗ್ಗೆ ಕಳೆದ ಸಭೆಯಲ್ಲಿ ಮಂಡಿಸಿದ ವಿಷಯದ ಬಗ್ಗೆ ಉತ್ತರಿಸಿದ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ್ “ಈ ಸ್ಥಳದಲ್ಲಿ ಒಂದು ಎಕ್ರೆ ಅರಣ್ಯ ಪ್ರದೇಶ ನಮೂದಾಗಿದ್ದು ಶಾಲೆಗೆ ಸಂಬಂಧಿಸಿದಂತೆ ೦.೬೩ ಎಕ್ರೆ ಆರ್.ಟಿ.ಸಿಗೆ ಬೇರ್ಪಡಿಸಿ ಕಂದಾಯ ಇಲಾಖೆಯವರು, ಅರಣ್ಯ ಇಲಾಖೆಯವರು ಸರಿಪಡಿಸಿದದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆಯವರು ಇದು ನಮ್ಮ ವ್ಯಾಪ್ತಿಗೆ ಬರುವ ವಿಷಯವಲ್ಲ. ಸರಕಾರದಿಂದ ನಡೆಯಬೇಕಾದ ಕಾರ್ಯವಾಗಿದೆ ಎಂದು ಹೇಳಿದರು. ತಾಲೂಕಿನಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳ ಬಗ್ಗೆ ಚರ್ಚೆ ನಡೆದು ಸುಳ್ಯ ಸುಬ್ರಹ್ಮಣ್ಯ ಭಾಗಗಲ್ಲಿ ಸುಮಾರು ೨೭೯ ಮನೆಗಳು ಈಗಾಗಲೇ ಅರ್ಜಿಗಳು ಬಂದಿದ್ದು, ಕೆಲವು ಮನೆಗಳ ಸಂಪೂರ್ಣ ವಿವರಗಳು ದಾಖಲೆಗಳು ಸರಿಯಾಗದ ಕಾರಣ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಿ ಹೊಸ ಯೋಜನೆಯ ಅನುಸಾರ ವಿದ್ಯುತ್ ಸಂಪರ್ಕ ನೀಡುವ ಕುರಿತು ಕಾರ್ಯಯೋಜನೆಯನ್ನು ರೂಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. ನಿಂತಿಕಲ್ಲು ಬಳಿ ರಸ್ತೆಗೆ ಹೆಚ್.ಟಿ ವಿದ್ಯುತ್ ಲೈನ್‌ಗಳಿಂದ ಸಮಸ್ಯೆ ಉಂಟಾಗಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಕಳೆದ ಸಭೆಗಳಲ್ಲಿ ಚರ್ಚಿಸಲಾಗಿದ್ದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಲಿಲ್ಲವೆಂದು ತುರ್ತಾಗಿ ಪರಿಶೀಲನೆ ನಡೆಸಿ ಅಗತ್ಯಕ್ರಮ ಕೈಗೊಳ್ಳಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಈಗಾಗಲೇ ಕಂಬಗಳ ಅಂತರವನ್ನು ಕಡಿಮೆಗೊಳಿಸಿ, ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೇವೆ. ಹೆಚ್ಚುವರಿ ಕಂಬಗಳನ್ನು ಆಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಪಾಯಗಳು ಸಂಭವಿಸದಂತೆ ಮಾಡಿಕೊಡಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು. ಭವಾನಿಶಂಕರ ಸ್ವಾಗತಿಸಿ, ವಂದಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಮುಖ ಆದರೂ ಮೈಮರೆಯುವಂತಿಲ್ಲ ಕೆಡಿಪಿ ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ. ಸುಬ್ರಹ್ಮಣ್ಯ
ರಾಜ್ಯದಾದ್ಯಂತ ಕೋರೋನಾ ಪೀಡಿತ ಸಂಖ್ಯೆ ಇಳಿಮುಖಗೊಳ್ಳುತ್ತಿದ್ದು, ತಾಲೂಕಿನಲ್ಲಿ ಕನಿಷ್ಠ ಶೇಕಡಾ ೧ ಇರಬೇಕಾದ್ದಲ್ಲಿ ಸುಳ್ಯ ತಾಲೂಕು ಶೇ.೩ರಲ್ಲಿ ಇದ್ದು, ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಗೊಂಡಿರುತ್ತದೆ. ಇದೀಗ ೨೦೦ರಿಂದ ೩೦೦ ಟೆಸ್ಟ್‌ಗಳು ನಡೆಸಿದರೇ ಕೇವಲ ೧, ೨ ಮಾತ್ರ ಸೋಂಕಿತರು ಕಂಡುಬರುತ್ತಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಲಸಿಕೆಗಳು ಬರುವ ಸಾಧ್ಯತೆಯಿದ್ದು ಜನಸಾಮಾನ್ಯರು ಇನ್ನೂ ಕೂಡಾ ಮೈಮರೆಯುವಂತಿಲ್ಲ. ಮುಂಜಾಗ್ರತೆ ಅಗತ್ಯವಾಗಿದೆ. ಸಾಮಾಜಿ ಕ ಅಂತರವನ್ನು ಕಾಪಾಡಿಕೊಳ್ಳುವುದು. ಕೈ-ಕಾಲುಗಳನ್ನು ಪದೇ ಪದೇ ಸಾಬೂನುಗಳಿಂದ ತೊಳೆದುಕೊಳ್ಳುವುದು ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಅವರು ಹೇಳಿದರು. ಈಗಾಗಲೇ ಕಾಲೇಜುಗಳು ಪ್ರಾರಂಭಗೊಂಡಿದ್ದರು. ಒಟ್ಟು ೫,೧೬೫ಜನ ಶಿಕ್ಷಕರು ವಿದ್ಯಾರ್ಥಿಳು ಇದ್ದರೆ ಇವರಲ್ಲಿ ಈಗಾಗಲೇ ೧೭೯೯ ಜನರನ್ನು ಪರೀಕ್ಷೆ ಮಾಡಿದ್ದು, ಇವರಲ್ಲಿ ೪ಮಂದಿಗೆ ಪಾಸಿಟೀವ್ ಕಂಡುಬಂದಿದೆ. ಇವರನ್ನು ಕ್ವಾರಂಟೈಲ್‌ನಲ್ಲಿ ಇಡಲಾಗಿದೆ. ಎಂದು ಆರೋಗ್ಯಾಧಿಕಾರಿ ತಿಳಿಸಿದರು.
ಸುಳ್ಯ ತಾಲೂಕು ಕಚೇರಿಯ ಮೂರನೇ ಅಂತಸ್ತಿನಲ್ಲಿ ಸರ್ವೇ ಇಲಾಖೆ ಕಾರ್ಯಾಚರಿಸುತ್ತಿದ್ದು, ಈ ವಿಭಾಗದಲ್ಲಿ ಹೆಚ್ಚು ಶಬ್ಧಮಾಲಿನ್ಯಗಳು ಉಂಟಾಗುತ್ತಿದ್ದು, ಫಾಲ್‌ಸೀಲಿಂಗ್ ನಡೆಸಿ ಇದಕ್ಕೆ ಮುಕ್ತಿ ಕಲ್ಪಿಸಿಕೊಡುವಂತೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಕಿಟಕಿಗಳ ಮೂಲಕ ಮಳೆನೀರು ಒಳಗೆ ಬಂದು ಕಡತಗಳು ನೀರಿನಿಂದ ಒದ್ದೆಯಾಗುತ್ತಿದ್ದು ಸೂಕ್ತ ಪರಿಹಾರವನ್ನು ಕಲ್ಪಿಸಿಕೊಂಡುವಂತೆ ಎ.ಡಿ.ಎಲ್.ಆರ್ ವೆಂಕಟೇಶ್ ಅಧ್ಯಕ್ಷರಿಗೆ ಮನವಿ ಮಾಡಿಕೊಂಡರು.
ಎಚ್ಚರ ವಹಿಸದಿದ್ದರೆ ಪ್ರಾಥಮಿ ಶಾಲಾ ಕಟ್ಟಡ ಬೀಳುವ ಹಂತದಲ್ಲಿ : ಜಾಹ್ನವಿ
ಬಂಗ್ಲೆಗುಡ್ಡೆ ಶಾಲೆಯ ಅಭಿವೃದ್ಧಿ ಸಮಿತಿಯು ಶಾಲಾ ಪರಿಸರದಲ್ಲಿ ಕಾಮಗಾರಿ ಆರಂಭಿಸಿದ್ದು, ಜೆಸಿಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಗೆದಿರುವುದರಿಂದ ಮೇಲ್ಭಾಗದ ಕಟ್ಟಡವಾಗಿರುವ ಪ್ರಾಥಮಿಕ ಶಾಲಾ ಕಟ್ಟಡ ಮುಂದಿನ ದಿನದಲ್ಲಿ ಬೀಳುವ ಹಂತಕ್ಕೆ ಬರಬಹುದು ಆದ್ದರಿಂದ ಶಿಕ್ಷಣಾಧಿಕಾರಿಗಳು ಕೂಡಲೇ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಹೇಳಿದರು.