ಮುಕ್ಕೂರು : ಎಲ್ಲ ವರ್ಗದ, ಪ್ರದೇಶದ ಜನರನ್ನು ಬೇಧಭಾವ ಇಲ್ಲದೆ ಸಾಮರಸ್ಯದ ಮನೋಭಾವದಿಂದ ಒಂದುಗೂಡಿಸುವ ಸಾಮರ್ಥ್ಯ ಇರುವುದು ಕ್ರೀಡೆಗೆ ಮಾತ್ರ ಎಂದು ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು.
ಯುವ ಸೇನೆ ಮುಕ್ಕೂರು ಇದರ ಆಶ್ರಯದಲ್ಲಿ ಮುಕ್ಕೂರು ಶಾಲಾ ಕ್ರೀಡಾಂಗಣದಲ್ಲಿ ನ.8 ರಂದು ನಡೆದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುವಸೇನ ಟ್ರೋಫಿ-2020 ಹಾಗೂ ಕೊರೊನಾ ವಾರಿಯರ್ಸ್ ಗಳಿಗೆ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊರೊನಾ ಕಾಲಘಟ್ಟದಲ್ಲಿ ನಾವಿದ್ದೇವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರ, ಆರೋಗ್ಯ ಇಲಾಖೆಯ ಪಾತ್ರದ ಜತೆಗೆ ಜನರ ಸಹಕಾರವು ಸ್ಮರಣೀಯ. ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಅದರಿಂದ ಸಕರಾತ್ಮಕ ಫಲಿತಾಂಶ ಕಾಣಲು ಸಾಧ್ಯ ಎಂದರು.
ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ನೆರವೇರಿಸಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಸಂಘಟಿತವಾಗಿ, ಶಿಸ್ತುಬದ್ಧವಾಗಿ ಸ್ಪರ್ದೆ ನಡೆದಿದೆ. ಅದಕ್ಕೊಂದು ಉತ್ತಮ ಅವಕಾಶವನ್ನು ಯುವಸೇನೆ ಒದಗಿಸಿದೆ. ಕೊರೊನಾ ವಾರಿಯರ್ಸ್ ಗಳ ಸೇವೆ ಗುರುತಿಸಿರುವುದು ಪ್ರಶಂನೀಯ ಎಂದರು.
ನೇಸರ ಯುವಕ ಮಂಡಲ ಹಾಗೂ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಯಾವುದೇ ಕಾರ್ಯಕ್ರಮವನ್ನು ಸಂಘಟಿಸುವುದು ಸುಲಭ ಅಲ್ಲ. ಅದರ ಹಿಂದೆ ಅಪಾರ ಶ್ರಮ ಇದೆ. ಅದು ಯಶಸ್ವಿಯಾಗಿ ಪೂರ್ಣಗೊಂಡಾಗ ಸಂಘಟಕರ ಶ್ರಮವು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಯುವಸೇನೆಯ ಪ್ರಯತ್ನ ಉತ್ತಮವಾದದು ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ ಮಾತನಾಡಿ, ಎಲ್ಲರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಆಯೋಜಿಸಿದಾಗ ಅದರಿಂದ ಊರಿಗೂ ಒಳ್ಳೆಯ ಹೆಸರು ಬರಲು ಸಾಧ್ಯವಾಗುತ್ತದೆ. ತಂಡವಾಗಿ ಸಕರಾತ್ಮಕ ಚಟುವಟಿಕೆಯಲ್ಲಿ ತೊಡಗಿದಾಗ ಆಗ ನಿರೀಕ್ಷಿತ ಫಲಿತಾಂಶ ದೊರೆಯತ್ತದೆ ಎಂದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪಾಲ್ತಾಡಿ ಭಾರತೀ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಮಾತನಾಡಿ, ಉತ್ತಮ ಉದ್ದೇಶ, ಗುರಿ ಇಟ್ಟುಕೊಂಡ ಸಂಘಟನೆಗಳು ಕಾರ್ಯಪ್ರವೃತವಾದಾಗ ಆಗ ಸಮಾಜದ ವಿಶ್ವಾಸಕ್ಕೆ ಪಾತ್ರವಾಗುತ್ತದೆ ಎಂದರು.
ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಯುವ ಉದ್ಯಮಿ ಮನೋಜ್ ರೈ ವಿಟ್ಲ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಅಧ್ಯಕ್ಷ ಹರೀಶ್ ರೈ, ಯುವಸೇನೆಯ ಸಂಚಾಲಕ ನವೀನ್ ಶೆಟ್ಟಿ ಬರಮೇಲು ಮೊದಲಾದವರು ಉಪಸ್ಥಿತರಿದ್ದರು. ನಿತಿನ್ ಕಾನಾವು ಸ್ವಾಗತಿಸಿ, ಜಯಂತ ಕುಂಡಡ್ಕ ವಂದಿಸಿದರು. ಶರತ್ ನೀರ್ಕಜೆ ನಿರೂಪಿಸಿದರು.
ಕೊರೊನಾ ವಾರಿಯರ್ಸ್ ಗೆ ಗೌರವಾರ್ಪಣೆ
ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಬೆಳ್ಳಾರೆ ಠಾಣಾ ಎಸ್ಐ ಆಂಜನೇಯ ರೆಡ್ಡಿ, ಹೆಡ್ ಕಾನ್ ಸ್ಟೇಬಲ್ ಬಾಲಕೃಷ್ಣ, ಪೆರುವಾಜೆ ಬೀಟ್ ಪೊಲೀಸ್ ವಿನಾಯಕ ಸಿ.ಕೆ., ಆಶಾ ಕಾರ್ಯಕರ್ತೆಯರಾದ ರಾಗಿಣಿ, ದೇವಕಿ ಅವರನ್ನು ಗೌರವಿಸಲಾಯಿತು. ಶರತ್ ನೀರ್ಕಜೆ ಅವರು ಕೊರೊನಾ ವಾರಿಯರ್ಸ್ ಕುರಿತು ಅಭಿನಂದನಾ ಮಾತುಗಳನ್ನಾಡಿದರು.
ಸೈಲೆಂಟ್ ಸವಣೂರು (ಪ್ರ)
ಸಿಟಿ ಸಿಕ್ಸರ್ ಬೆಳ್ಳಾರೆ(ದ್ವಿ)
ಪಂದ್ಯಾಕೂಟದಲ್ಲಿ ಒಟ್ಟು 22 ತಂಡಗಳು ಭಾಗವಸಿದ್ದವು. ಸೈಲೆಂಟ್ ಸವಣೂರು (ಪ್ರ), ಸಿಟಿ ಸಿಕ್ಸರ್ ಬೆಳ್ಳಾರೆ (ದ್ವಿ) ಅಮೈ ಬ್ರದರ್ (ತೃ) ಸ್ಥಾನ ಪಡೆಯಿತು. ಹೈದರ್ ಬೆಳ್ಳಾರೆ(ಸರಣಿ ಶ್ರೇಷ್ಠ) ಮಸೂದ್ (ಪಂದ್ಯ ಶ್ರೇಷ್ಠ), ನಾಸಿರ್ (ಬೆಸ್ಟ್ ಬ್ಯಾಟ್ಸಮೆನ್) ಅವಿನಾಶ್ (ಬೆಸ್ಟ್ ಬೌಲರ್) ಪ್ರಶಸ್ತಿ ಪಡೆದುಕೊಂಡರು. ತೀರ್ಪುಗಾರರಾಗಿ ವಿಖ್ಯಾತ್ ರೈ ಪುಣ್ಚಪ್ಪಾಡಿ, ಪುರುಷೋತ್ತಮ ಕುಂಡಡ್ಕ, ವೀಕ್ಷಕ ವಿವರಣೆಗಾರರಾಗಿ ರಮೇಶ್ ಅಗಲ್ಪಾಡಿ ಅವರು ಸಹಕರಿಸಿದರು.