ಮೂರು ವರ್ಷಗಳಿಂದ ಬಾಕಿಯುಳಿದಿದ್ದ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಾದ ಏಕಲವ್ಯ, ಕರ್ನಾಟಕ ಕ್ರೀಡಾರತ್ನ, ಜೀವಮಾನ ಸಾಧನೆ ಮತ್ತು ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ರಾಜ್ಯದ ಕ್ರೀಡಾ ಇಲಾಖೆ ಸಚಿವರಾದ ಸಿ.ಟಿ.ರವಿ ಅವರು ನ.೧ರಂದು ಬಿಡುಗಡೆಗೊಳಿಸಿದ್ದರು. ನಂತರ ನ. ೨ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ೨೦೧೭, ೨೦೧೮, ೨೦೧೯ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಕರಾವಳಿ ಭಾಗದ ಕ್ರೀಡಾರತ್ನಗಳಿಗೆ, ಕಂಬಳ ಸಾಧಕರಿಗೆ ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೂ ಪುರಸ್ಕಾರ ಲಭಿಸಿತು.
ಮಂಗಳೂರು ಮೂಲದ ಕ್ರಿಕೆಟ್ ಆಟದ ಪ್ರದರ್ಶನ ನೀಡುತ್ತಿರುವ ಆಟಗಾರ ಕೆ.ಎಲ್. ರಾಹುಲ್‌ರವರಿಗೆ ಏಕಲವ್ಯ ಪ್ರಶಸ್ತಿ, ಕಡಬ ತಾಲೂಕು ಸವಣೂರುನ ಡೆಕತ್ಲಾನ್ ಸ್ಪರ್ಧೆಯಲ್ಲಿ ಸಾಧನೆ ಮಾಡಿರುವ ಹಾಗೂ ಸದ್ಯ ರೈಲ್ವೇ ಉದ್ಯೋಗಿಯಾಗಿರುವ ಅಭಿಷೇಕ್ ಎನ್. ಶೆಟ್ಟಿಗೆ ಏಕಲವ್ಯ ಪ್ರಶಸ್ತಿ, ಎತ್ತರ ಜಿಗಿತ ಸಾಧಕಿಯಾಗಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಅಭಿನಯ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿ ಬಾಂಧವ್ಯರಿಗೆ ೨೦೧೮ರ ಏಕಲವ್ಯ ಪ್ರಶಸ್ತಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಜಯಲಕ್ಷ್ಮೀಗೆ ೨೦೧೭ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಲಾವಣ್ಯ ಬಿ.ಡಿ ಯವರಿಗೆ ೨೦೧೮ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಪಲ್ಲವಿ ಎಸ್.ಕೆ ಗೆ ೨೦೧೯ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಕಬ್ಬಡಿ ಆಟಗಾರ ಆಗಿರುವ ಎಸ್.ರಕ್ಷಿತ್‌ಗೆ ೨೦೧೯ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಮತ್ತು ಕುಸ್ತಿಪಟು ಅನುಶ್ರೀಗೆ ೨೦೧೭ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಲಭಿಸಿತು. ಕಂಬಳದಲ್ಲಿ ಮಿಂಚಿನ ಓಟಗಾರರಾಗಿ ಪ್ರಸಿದ್ಧಿ ಪಡೆದ ಬೆಳ್ತಂಗಡಿ ತಾಲೂಕಿನ ಸುರೇಶ್ ಶೆಟ್ಟಿ, ಕಂಬಳದ ಚಿನ್ನದ ಓಟಗಾರ ಉಸೇನ್ ಬೋಲ್ಟ್ ಖ್ಯಾತಿ ಹೊಂದಿರುವ ಅಶ್ವತ್ಥಪುರ ಶೀನಿವಾಸ ಗೌಡ, ಕೋಣಗಳನ್ನು ಓಡಿಸಿ ಸರಣಿ ಶ್ರೇಷ್ಠ ಎಂದೆನಿಸಿಕೊಂಡ ಪ್ರವೀಣ್ ಕೋಟ್ಯಾನ್, ಕೃಷಿ ಹಾಗೂ ಕಂಬಳದ ಆಯೋಜನೆಯಲ್ಲಿ ಅದ್ವಿತೀಯ ಸಾಧನೆಗೈದ ಸುರತ್ಕಲ್‌ನ ಗೋಪಾಲಕೃಷ್ಣ ಪ್ರಭು ಮೊದ ಲಾದವರು ಕ್ರೀಡಾ ರತ್ನ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡಿದ್ದಾರೆ.
ಅದೇ ರೀತಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಕ್ರೀಡಾ ಅಭಿ ವೃದ್ಧಿಗೆ ನೆರವು ನೀಡಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳನ್ನು ರಾಜ್ಯಕ್ಕೆ ಕೊಡುಗೆ ನೀಡಿದ ಮಂಗಳೂರು ವಿಶ್ವವಿದ್ಯಾ ನಿಲಯಕ್ಕೆ ೨೦೧೯-೨೦ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಲಭಿಸಿದೆ.
ಪ್ರತಿಯೊಬ್ಬರ ಜೀವನದಲ್ಲಿ ಅವಕಾಶಗಳು ಮತ್ತು ಆಯ್ಕೆಗಳು ಎದುರಾಗುತ್ತದೆ, ಮುಂಜಾನೆ ಎದ್ದ ತಕ್ಷಣ ಸ್ನಾನಕ್ಕೆ ಬಿಸಿನೀರು ಅಥವಾ ತಣ್ಣಿರು, ಧರಿಸಲು ರೇಶಿಮೆ ವಸ್ತ್ರ ಅಥವಾ ಹತ್ತಿಯ ಬಟ್ಟೆ, ಊಟಕ್ಕೆ ಗಂಜಿಯೋ, ಚಪಾತಿ ಪಲ್ಯವೋ ಹೀಗೆ ಅನೇಕ ಆಯ್ಕೆಗಳನ್ನು ಎದುರಿಸುತ್ತ ಮುಂದೆ ಯುವ ಜೀವನದಲ್ಲಿ ಯೌನದಲ್ಲಿ ನಾನಾ ರೀತಿಯ ಅವಕಾಶಗಳು ದೊರೆತಾಗ ಆಯ್ಕೆ ಯನ್ನು ಮಾಡಿ ಆ ಕ್ಷೇತ್ರದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಡು ಸಾಧನೆ ಮಾಡಿದವರು ಹಲವಾರು ಮಂದಿ ಇದ್ದಾರೆ.
ಹೀಗೆ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯನ್ನು ಆಯ್ದುಕೊಂಡು ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕರಾವಳಿ ಭಾಗದ ಹೆಸರನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ಪಡುವಂತೆ ಮಾಡಿದೆ. ಇಂಥ ಕ್ರೀಡಾ ಸಾಧಕರಿಗರ ನಮ್ಮದೊಂದು ಸಲ್ಯೂಟ್ ಇರಲಿ.
📝ಜಯದೀಪ್ ಕುದ್ಕುಳಿ