ಇರುವಂಬಳ್ಳ ಅಂಗನವಾಡಿಯಲ್ಲಿ ಬಾಲವಿಕಾಸ ಸಮಿತಿ ಹಾಗೂ ಪೋಷಕರ ಸಭೆ

ಸುಳ್ಯ: ಮಂಡೆಕೋಲು ಗ್ರಾಮದ ಇರುವಂಬಳ್ಳ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಸಭೆ ಹಾಗೂ ಪೋಷಕರ ಸಭೆಯು ಆ.18ರಂದು ನಡೆಯಿತು.

. . . . . . . . .

ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಬಿ., ವಲಯ ಮೇಲ್ವಿಚಾರಕಿ ಶ್ರೀಮತಿ ವಿಜಯ ಜೆ.ಡಿ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮುಭೀನ, ಸಮಿತಿ ಸದಸ್ಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

. . . . . . .

ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ 2025ರ ಮಾರ್ಚ್‌ನಲ್ಲಿ ನರೇಗಾ ಒಗ್ಗೂಡಿಸುವಿಕೆಯಡಿ ಅನುದಾನ ಮಂಜೂರಾಗಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ನರೇಗಾ ಯೋಜನೆಯು ವಿ.ಬಿ.ಜಿ. ರಾಮ್‌ಜೀ ಎಂದು ಬದಲಾವಣೆಯಾಗಿದ್ದು, ಪ್ರಸ್ತುತ ಕ್ರಿಯಾ ಯೋಜನೆ ಮಂಜೂರಾಗಿದೆ. ಈ ವಾರದಲ್ಲೇ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಸಭೆಗೆ ಮಾಹಿತಿ ನೀಡಿದರು.

ಮಕ್ಕಳ ಸುರಕ್ಷತೆ ಹಾಗೂ ಅಂಗನವಾಡಿ ಕೇಂದ್ರದಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಸ್ತುತ ತಾತ್ಕಾಲಿಕ ಕಟ್ಟಡದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಿದ್ದು, ಮುಂಭಾಗದಲ್ಲಿ ಬಾಗಿಲಿನ ವ್ಯವಸ್ಥೆ ಮಾಡುವುದು ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪೋಷಕರು ಮನವಿ ಮಾಡಿದರು.

ಪ್ರಸ್ತುತ ಅಂಗನವಾಡಿ ಕೇಂದ್ರದಲ್ಲಿ 19 ಮಕ್ಕಳು ಹಾಜರಾಗುತ್ತಿದ್ದು, ಮಕ್ಕಳಿಗೆ ನೀಡಲಾಗುತ್ತಿರುವ ಸೇವೆ, ಸಿಬ್ಬಂದಿಯ ಕಾರ್ಯನಿರ್ವಹಣೆ, ಕಟ್ಟಡ ಹಾಗೂ ಇತರ ಸೌಕರ್ಯಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಸಭೆಯ ಗಮನಕ್ಕೆ ತರಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಬಿ. ತಿಳಿಸಿದರು. ಪೋಷಕರು ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರದಲ್ಲಿ ಯಾವುದೇ ನ್ಯೂನತೆ ಅಥವಾ ಸಮಸ್ಯೆ ಕಂಡುಬಂದಲ್ಲಿ ಮೊದಲು ಬಾಲವಿಕಾಸ ಸಮಿತಿಯ ಗಮನಕ್ಕೆ, ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಅಥವಾ ನೇರವಾಗಿ ದೂರವಾಣಿ ಮೂಲಕ ಇಲಾಖೆಯ ಗಮನಕ್ಕೆ ತರಬೇಕು. ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading