ಮಂಡೆಕೋಲು : ಇರುವಂಬಳ್ಳ ಅಂಗನವಾಡಿ ಕೇಂದ್ರದ ದುಸ್ಥಿತಿ – ಮಕ್ಕಳ ಜೀವಕ್ಕೆ ಅಪಾಯದ ಆತಂಕ – ಗುದ್ದಲಿಪೂಜೆಗೆ ಸೀಮಿತಗೊಂಡ ಹೊಸ ಕಟ್ಟಡ

ಸುಳ್ಯ: ಮಂಡೆಕೋಲು ಗ್ರಾಮದ ಇರುವಂಬಳ್ಳದಲ್ಲಿರುವ ಅಂಗನವಾಡಿ ಕೇಂದ್ರದ ದುಸ್ಥಿತಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸುಮಾರು 25ರಿಂದ 30 ಮಕ್ಕಳು ಕಲಿಯುತ್ತಿರುವ ಈ ಅಂಗನವಾಡಿಯಲ್ಲಿ ಮಳೆ ಹಾಗೂ ಗಾಳಿಯ ನಡುವೆ ಭಯದ ವಾತಾವರಣದಲ್ಲಿ ಕಾಲ ಕಳೆಯವಂತಾಗಿದೆ.
ಅಂಗನವಾಡಿಯ ಸುತ್ತಮುತ್ತಲಿನ ಮರಗಳು ಅಪಾಯಕಾರಿಯಾಗಿದ್ದು, ಗಾಳಿ ಬೀಸುವ ಸಂದರ್ಭದಲ್ಲಿ ಮರಗಳು ಹಾಗೂ ಕೊಂಬೆಗಳು ಕಟ್ಟಡದ ಮೇಲೆ ಬೀಳುವ ಆತಂಕವಿದೆ. ಹೀಗಾಗಿ ಶಿಕ್ಷಕರು ಮತ್ತು ಮಕ್ಕಳು ಭಯದಿಂದಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ಕಟ್ಟಡದೊಳಗೆ ಇರಲು ಸಾಧ್ಯವಾಗದೆ ಮಕ್ಕಳು ಪಕ್ಕದ ಕಟ್ಟಡಕ್ಕೆ ತೆರಳಬೇಕಾದ ಸ್ಥಿತಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಂದೆಡೆ ದೇಶವು 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಮತ್ತೊಂದೆಡೆ ಗ್ರಾಮೀಣ ಭಾಗದ ಪುಟ್ಟ ಮಕ್ಕಳಿಗೆ ಸುರಕ್ಷಿತ ಅಂಗನವಾಡಿ ಕಟ್ಟಡವೂ ಇಲ್ಲದಿರುವುದು ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ಇಂದಿನ ಮಕ್ಕಳು ನಾಳೆಯ ಭವಿಷ್ಯ” ಎಂದು ಹೇಳುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಯತ್ತ ತಕ್ಷಣ ಗಮನಹರಿಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಇನ್ನೂ ಗಮನಾರ್ಹ ಸಂಗತಿಯೆಂದರೆ, ಅಂಗನವಾಡಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರಾಗಿದ್ದು, ಕಾಮಗಾರಿಯೂ ಆರಂಭವಾಗಿತ್ತು. ಕಟ್ಟಡ ನಿರ್ಮಾಣಕ್ಕಾಗಿ ಸುಮಾರು 12 ಗುಂಡಿಗಳನ್ನು ತೋಡಲಾಗಿದ್ದು, ಬಳಿಕ ಕಳೆದ ಒಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎನ್ನಲಾಗಿದೆ. ಗುತ್ತಿಗೆದಾರರು ಕಾಮಗಾರಿ ಮುಂದುವರಿಸದೆ ಇರುವುದರಿಂದ ಮಕ್ಕಳಿಗೆ ಸುರಕ್ಷಿತ ಕಟ್ಟಡದ ಕನಸು ಇನ್ನೂ ನನಸಾಗಿಲ್ಲ.
ಸರ್ಕಾರದಿಂದ ಹಣ ಮಂಜೂರಾದ ಬಳಿಕ ಕಾಮಗಾರಿ ಏಕೆ ಸ್ಥಗಿತಗೊಂಡಿದೆ? ಮಂಜೂರಾದ ಹಣದ ಪ್ರಸ್ತುತ ಸ್ಥಿತಿ ಏನು? ಕಾಮಗಾರಿ ಪೂರ್ಣಗೊಳ್ಳದೆ ಇರುವುದಕ್ಕೆ ಕಾರಣವೇನು? ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಪಾಯಕಾರಿ ಮರಗಳನ್ನು ತೆರವುಗೊಳಿಸಿ,ಕಟ್ಟಡ ನಿರ್ಮಾಣಕ್ಕಾಗಿ ತೋಡಿದ ಗುಂಡಿಯಿಂದ ಸಮಸ್ಯೆ ಆಗುವ ಮೊದಲು ಸ್ಥಗಿತಗೊಂಡಿರುವ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ವಿಳಂಬ ಮಾಡದೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading