ಸುಳ್ಯ : ಭಾರತ್ ಜೋಡೋ ಯುವ ಸಂಘ ರಚನೆಗೆ ಸಿದ್ಧತೆ ; “ಧಾರ್ಮಿಕ ಸಾಮರಸ್ಯವೇ ಮುಖ್ಯ ಉದ್ದೇಶ” – ಎಂ. ವೆಂಕಪ್ಪ ಗೌಡ

“ಧರ್ಮಗಳ ನಡುವೆ ಸಂಘರ್ಷ ಉಂಟಾಗಿ ದೇಶದ ಜನಜೀವನ ಹಾಗೂ ಸಹಬಾಳ್ವೆಗೆ ಧಕ್ಕೆಯಾಗುವ ಘಟನೆಗಳು ನಡೆಯುತ್ತಿವೆ. ಧರ್ಮಗಳ ನಡುವಿನ ವೈಮನಸ್ಸು ದೇಶದ ಅಭಿವೃದ್ಧಿಗೆ ಪೂರಕವಲ್ಲ. ಎಲ್ಲಾ ಜಾತಿ-ಧರ್ಮದವರು ಸಹೋದರತೆಯ ಭಾವದಿಂದ ಒಂದಾಗಿ ಬದುಕುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘವನ್ನು ರಚಿಸಲಾಗುತ್ತಿದೆ” ಎಂದು ಎಂ.ವೆಂಕಪ್ಪ ಗೌಡ ಹೇಳಿದರು.

. . . . . . . . .

ಸುಳ್ಯದ ಪತ್ರಿಕಾಭವನದಲ್ಲಿ ಆ.05ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಅಭಿಯಾನದ ಮಾದರಿಯಲ್ಲಿ ಕರ್ನಾಟಕ-1 ಯೋಜನೆಯಡಿ 16 ರಿಂದ 35 ವರ್ಷದೊಳಗಿನ ಎಲ್ಲಾ ಧರ್ಮಗಳ ಯುವಕ-ಯುವತಿಯರು ಸಂಘಕ್ಕೆ ಸದಸ್ಯರಾಗಿ ಸೇರಬಹುದಾಗಿದೆ” ಎಂದರು.

. . . . . . .

“ಪ್ರತಿ ಗ್ರಾಮ ಮತ್ತು ನಗರ ಪಂಚಾಯತ್ ವ್ಯಾಪ್ತಿಯಲ್ಲಿ 100 ಸದಸ್ಯರ ಕಾರ್ಯಕಾರಿಣಿ ಸಮಿತಿಯನ್ನು ರಚಿಸುವ ಗುರಿ ಹೊಂದಲಾಗಿದೆ. ಸಂಘದ ಚಟುವಟಿಕೆಗಳಿಗೆ ವರ್ಷಕ್ಕೆ ₹10 ಲಕ್ಷದವರೆಗೆ ಅನುದಾನ ಮೀಸಲಿಡಲಾಗಿದ್ದು, ತರಬೇತುದಾರರನ್ನು ನೇಮಿಸಿ ಅವರಿಗೆ ವರ್ಷಕ್ಕೆ ₹24 ಸಾವಿರ ಗೌರವಧನ ನೀಡಲಾಗುತ್ತದೆ” ಎಂದು ಮಾಹಿತಿ ನೀಡಿದರು.

“ಸಾಮಾಜಿಕ ಸಾಮರಸ್ಯ, ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣದ ಮೂಲಕ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ಸಮುದಾಯದ ಅಭಿವೃದ್ಧಿ, ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ, ನವೋದ್ಯಮ ಉತ್ತೇಜನ, ಗ್ರಾಮ ಹಾಗೂ ನಗರ ಸ್ವಚ್ಛತೆ, ಕೌಶಲ್ಯ ಮತ್ತು ಡಿಜಿಟಲ್ ಸಾಕ್ಷರತೆ ಕುರಿತು ಮಾರ್ಗದರ್ಶನ ನೀಡುವುದು ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ವಿವಿಧ ಸಮುದಾಯದ ಜನರನ್ನು ಒಗ್ಗೂಡಿಸಿ ರಾಷ್ಟ್ರಭಾವನೆ ಮೂಡಿಸುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಡೆಸಲಾಗುವುದು” ಎಂದರು.

“ಪ್ರತಿ ತಿಂಗಳು ಸಭೆಗಳನ್ನು ಆಯೋಜಿಸಿ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ಮೂಲಕ ಉತ್ತಮ ಕರ್ನಾಟಕ ಹಾಗೂ ಬಲಿಷ್ಠ ದೇಶ ನಿರ್ಮಾಣಕ್ಕೆ ಯುವಜನರು ಕೈಜೋಡಿಸಬೇಕು” ಎಂದು ಅವರು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಭವಾನಿ ಶಂಕರ್ ಕಲ್ಮಡ್ಕ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading