ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯಲ್ಲಿ ಪದವಿ ಪ್ರಧಾನ ಸಮಾರಂಭ – “ಫಿಸಿಯೋಥೆರಪಿ ರೋಗಿಗಳ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ” : ಡಾ| ಕೆ.ವಿ ಚಿದಾನಂದ ; “ಗ್ರಾಮೀಣ ಪ್ರದೇಶವನ್ನು ಶಿಕ್ಷಣದ ಮೂಲಕ ವಿದ್ಯಾಕಾಶಿಯನ್ನಾಗಿ ರೂಪಿಸಿದ ಡಾ| ಕೆ.ವಿ.ಜಿ ಅವರ ದೂರದೃಷ್ಟಿ, ಕನಸು ಮತ್ತು ಸಂಕಲ್ಪ ನಿಜಕ್ಕೂ ಅದ್ಭುತವಾಗಿದೆ” ಡಾ| ದಿಲೀಪ್ ಎನ್.ಆರ್

ಸುಳ್ಯ ಆ.04 : ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂಗಸಂಸ್ಥೆಯಾದ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯಲ್ಲಿ 2026ನೇ ಸಾಲಿನ ಪದವಿ ಪ್ರಧಾನ ಸಮಾರಂಭವು ಆ.04 ಮಂಗಳವಾರದಂದು ನಡೆಯಿತು.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಅಧ್ಯಕ್ಷರಾದ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಕೆ.ವಿ ಚಿದಾನಂದ ಅವರು ವಹಿಸಿದ್ದರು. ಗಣ್ಯರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

. . . . . . .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದ ಸಿಂಡಿಕೇಟ್ ಸದಸ್ಯರಾದ ಡಾ| ದಿಲೀಪ್ ಎನ್.ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ “ಸುಳ್ಯದಂತಹ ಗ್ರಾಮೀಣ ಪ್ರದೇಶವನ್ನು ಶಿಕ್ಷಣದ ಮೂಲಕ ವಿದ್ಯಾಕಾಶಿಯನ್ನಾಗಿ ರೂಪಿಸಿದ ಡಾ ಕೆ.ವಿ.ಜಿ ಅವರ ದೂರದೃಷ್ಟಿ, ಕನಸು ಮತ್ತು ಸಂಕಲ್ಪ ನಿಜಕ್ಕೂ ಅದ್ಭುತವಾಗಿದೆ” ಎಂದು ಶ್ಲಾಘಿಸಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, “ಯಾವಾಗಲೂ ನಗುನಗುತ್ತಿರಿ, ರೋಗಿಗಳೊಂದಿಗೆ ತಾಳ್ಮೆಯಿರಲಿ, ನಿಮ್ಮ ವೃತ್ತಿಯಲ್ಲಿ ಸದಾ ನೈತಿಕ ಮೌಲ್ಯಗಳನ್ನು ಪಾಲಿಸಿ ಹಾಗೂ ನಿಮ್ಮ ವೈಯಕ್ತಿಕ ಬದುಕಿಗೂ ಆದ್ಯತೆಯನ್ನು ನೀಡಿ ಎಂದು ಪಂಚಸೂತ್ರಗಳ ಮೂಲಕ ಕಿವಿ ಮಾತನ್ನು ಹೇಳುತ್ತಾ ಫಿಸಿಯೋಥೆರಪಿ ಕ್ಷೇತ್ರದಲ್ಲಿ ನಿರಂತರ ಕಲಿಕೆ, ಕೌಶಲ್ಯ ವೃದ್ಧಿ ಹಾಗೂ ಸೇವಾ ಮನೋಭಾವವೇ ಯಶಸ್ವಿ ವೃತ್ತಿ ಜೀವನದ ಮೂಲಮಂತ್ರಗಳಾಗಿವೆ” ಎಂದರು. 

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ| ಕೆ.ವಿ ಚಿದಾನಂದ ಅವರು “ಪದವಿ ಪ್ರಧಾನವು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಅಂತ್ಯವಲ್ಲ, ಹೊಸ ಜವಾಬ್ದಾರಿಯುತ ವೃತ್ತಿ ಜೀವನದ ಆರಂಭವಾಗಿದೆ. ಫಿಸಿಯೋಥೆರಪಿ ರೋಗಿಗಳ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದು, ವೃತ್ತಿಯಲ್ಲಿ ಶಿಸ್ತು, ಸೇವಾ ಮನೋಭಾವ, ನೈತಿಕತೆ ಬಹಳ ಮುಖ್ಯ” ಎನ್ನುತ್ತಾ ಪದವಿ ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕೈ ನಟರಾಜನ್ ಉದ್ಘಾಟನಾ ನುಡಿಯೊಂದಿಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಉಪಾಧ್ಯಕ್ಷರಾದ ಶೋಭಾ ಚಿದಾನಂದ, ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲರಾದ ಡಾ| ಮನೀಶ್.ಎ, ಅಸೋಸಿಯೇಟ್ ಪ್ರೊಫೆಸರ್ ಡಾ| ಮಹೇಶ್ ರೆಡ್ಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪದವೀಧರರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಬಳಿಕ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ವಿಶೇಷವಾಗಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ರಕ್ಷ, ರೋಜಶ್ರೀ, ಅರುಣಿಮ ಪ್ರಾರ್ಥಿಸಿದರು. ಡಾ| ಮನೀಶ್.ಎ ಸ್ವಾಗತಿಸಿದರು, ಡಾ ಪೆಟಿಟಿ ಸಾಯಿರಾಂ ಪ್ರತಿಜ್ಞಾವಿಧಿ ಬೋದಿಸಿದರು. ಡಾ| ವಿ.ಮಹೇಶ್ ರೆಡ್ಡಿ ಮುಖ್ಯ ಅತಿಥಿಗಳ ಪರಿಚಯ ವಾಚಿಸಿದರು. ಡಾ| ಕ್ಷೇಮ ಕೆ.ಎಲ್ ಹಾಗೂ ಡಾ| ಶಹಬಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ.ವಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಿಜಿಸ್ಟ್ರಾರ್ ಡಾ| ಸಂದೇಶ್ ಕೆ.ಎಸ್ ಸೇರಿದಂತೆ ಸಹ ಸಂಸ್ಥೆಗಳ ಪ್ರಾಂಶುಪಾಲರು, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾದ್ಯಾಪಕರು, ಪೋಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading