ಪಂಜ : ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಪಾರದರ್ಶಕತೆಯ ಕುರಿತು ಆ.15ರಂದು ಸಾರ್ವಜನಿಕ ಸಭೆ ನಡೆಸುವಂತೆ ಭಕ್ತರಿಂದ ಮನವಿ

ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆರ್ಥಿಕ ಪಾರದರ್ಶಕತೆ ಹಾಗೂ ಗುತ್ತಿಗೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಲು ಆಗಸ್ಟ್ 15ರಂದು ಸಾರ್ವಜನಿಕ ಸಭೆ ಕರೆಯುವಂತೆ ಆಗ್ರಹಿಸಿ ಭಕ್ತರು ಸೋಮವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರಿಗೆ ಮನವಿ ಸಲ್ಲಿಸಿದರು.

. . . . . . . . .

ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವೈಖರಿ, ಹಣಕಾಸಿನ ವ್ಯವಹಾರಗಳು ಹಾಗೂ ಇತ್ತೀಚಿನ ಕೆಲವು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಪ್ರಶ್ನೆಗಳು ಮತ್ತು ಊಹಾಪೋಹಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡುವ ಉದ್ದೇಶದಿಂದ ಈ ಪತ್ರ ತಲುಪಿದ 13 ದಿನಗಳೊಳಗೆ, ಅಂದರೆ ಆಗಸ್ಟ್ 15ರಂದು ಸಾರ್ವಜನಿಕ ಸಭೆ ನಡೆಸಿ ಎಲ್ಲಾ ಪ್ರಶ್ನೆಗಳಿಗೆ ಸಮಗ್ರ ಉತ್ತರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

. . . . . . .

ಮನವಿಯಲ್ಲಿ ದೇವಸ್ಥಾನದ ದಿನನಿತ್ಯದ ಆಚಾರ-ವಿಚಾರ ಮತ್ತು ಪೂಜಾ ವಿಧಿವಿಧಾನಗಳಲ್ಲಿ ಲೋಪದೋಷಗಳು ಕಂಡುಬರುತ್ತಿವೆ ಎಂಬ ಆರೋಪಗಳಿಗೆ ಧಾರ್ಮಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ, ದೇವಸ್ಥಾನ ಸಾಲದಲ್ಲಿದೆಯೇ, ಇದ್ದರೆ ಯಾರಿಂದ ಎಷ್ಟು ಮೊತ್ತದ ಸಾಲ ಪಡೆಯಲಾಗಿದೆ ಹಾಗೂ ಆ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಕೋರಲಾಗಿದೆ. ಇದರೊಂದಿಗೆ, ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ದೇವಸ್ಥಾನದ ಹೆಸರಿನಲ್ಲಿ ಇದ್ದ ನಿಶ್ಚಿತ ಠೇವಣಿಗಳ(ಎಫ್‌ಡಿ) ವಿವರ, ಪ್ರಸ್ತುತ ಉಳಿದಿರುವ ಠೇವಣಿಗಳ ಮಾಹಿತಿ ಹಾಗೂ ಠೇವಣಿ ಹಣವನ್ನು ಹಿಂಪಡೆದಿದ್ದರೆ ಅದರ ಕಾರಣ ಮತ್ತು ಬಳಕೆಯ ವಿವರಗಳನ್ನು ಪ್ರಕಟಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ದೇವಸ್ಥಾನದ ಉಳಿತಾಯ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯುವ ವೇಳೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯ ನಿಯಮಾನುಸಾರ ಜಂಟಿ ಸಹಿ ಕಡ್ಡಾಯವಾಗಿದ್ದರೂ, ಅಧ್ಯಕ್ಷರೊಬ್ಬರ ಸಹಿಯಿಂದಲೇ ಹಣ ಹಿಂಪಡೆಯಲಾಗುತ್ತಿದೆ ಎಂಬ ಮಾಹಿತಿ ಇರುವುದರಿಂದ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

ಇದೇ ವೇಳೆ ದೇವಸ್ಥಾನದ ಕೆಲ ಸಿಬ್ಬಂದಿಯನ್ನು ಯಾವ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಲಾಗಿದೆ. ದೇವಸ್ಥಾನಕ್ಕೆ ಸೇರಿದ ತೋಟವನ್ನು ಗುತ್ತಿಗೆ ನೀಡಲು ಪ್ರಕಟಿಸಿರುವ ಜಾಹೀರಾತಿನಲ್ಲಿ ಆಡಳಿತ ಮಂಡಳಿಯ ನಿರ್ಣಯ ಸಂಖ್ಯೆ ಉಲ್ಲೇಖಿಸದಿರುವುದರ ಜೊತೆಗೆ, ದತ್ತಿ ಇಲಾಖೆಯ ಅನುಮತಿ ಹಾಗೂ ಸಂಬಂಧಿತ ಕಾನೂನು ನಿಯಮಗಳ ಅಡಿಯಲ್ಲಿ ಈ ಪ್ರಕ್ರಿಯೆ ನಡೆದಿದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.

ಅಲ್ಲದೆ, ದೇವಸ್ಥಾನದ ಪ್ರಮುಖ ನಿರ್ಣಯಗಳನ್ನು ಟ್ರಸ್ಟಿಗಳ ಸಭೆಯಲ್ಲಿ ಒಮ್ಮತದಿಂದ ಕೈಗೊಳ್ಳಲಾಗುತ್ತಿದೆಯೇ ಅಥವಾ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆಯೇ ಎಂಬುದರ ಬಗ್ಗೆಯೂ ಸಾರ್ವಜನಿಕ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದು ಕೋರಲಾಗಿದೆ.

ದೇವಸ್ಥಾನದ ಪವಿತ್ರತೆ ಹಾಗೂ ಆಡಳಿತದ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಈ ಎಲ್ಲಾ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆಗಸ್ಟ್ 15ರಂದು ಆಡಳಿತ ಮಂಡಳಿ ನಿಗದಿಪಡಿಸುವ ಸಮಯದಲ್ಲಿ ಸಾರ್ವಜನಿಕ ಸಭೆ ನಡೆಸಿ ಎಲ್ಲಾ ವಿಷಯಗಳಿಗೆ ಸಮಗ್ರ ಹಾಗೂ ಸಮರ್ಪಕ ಉತ್ತರ ನೀಡಬೇಕೆಂದು ಒತ್ತಾಯಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading