ಸುಬ್ರಹ್ಮಣ್ಯ : ಕಸ್ತೂರಿ ರಂಗನ್ ವರದಿಯ ಏಳನೇ ಅಧಿಸೂಚನೆ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪತ್ರಿಕಾಗೋಷ್ಠಿ ; “ಕಸ್ತೂರಿ ರಂಗನ್ ವರದಿ ವಿರುದ್ಧ ಮತ್ತೆ ಹೋರಾಟಕ್ಕೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಜ್ಜು” : ಕಿಶೋರ್ ಶಿರಾಡಿ

ಕುಕ್ಕೆ ಸುಬ್ರಹ್ಮಣ್ಯ, ಆ.02 : “ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ರೈತರು ಹಾಗೂ ಗ್ರಾಮೀಣ ಜನರಿಗೆ ತೊಂದರೆಯಾಗಬಹುದಾದ ಯೋಜನೆಗಳ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿರುವ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಇದೀಗ ಮತ್ತೊಮ್ಮೆ ಕಸ್ತೂರಿ ರಂಗನ್ ವರದಿಯ ವಿರುದ್ಧ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನಲ್ಲಿ ಆ.02ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ “ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿನ ಗ್ರಾಮೀಣ ಪ್ರದೇಶಗಳ ರೈತರು ಹಾಗೂ ಜನಸಾಮಾನ್ಯರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು. “ಪರಿಸರ ಸಂರಕ್ಷಣೆಯ ನೆಪದಲ್ಲಿ ರೈತರಿಗೆ ಸಮಸ್ಯೆಯಾಗುವ ಯೋಜನೆಗಳ ವಿರುದ್ಧ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪಕ್ಷಾತೀತ, ಜಾತ್ಯಾತೀತ ಹಾಗೂ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಾ ಬಂದಿದೆ. ಪುಷ್ಪಗಿರಿ ವನ್ಯಧಾಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 48 ಗ್ರಾಮಗಳನ್ನು ಸೇರಿಸುವ ಪ್ರಸ್ತಾವನೆ ಬಂದ ಸಂದರ್ಭದಲ್ಲಿ ಸಂಘಟನೆ ನಡೆಸಿದ ಹೋರಾಟದ ಪರಿಣಾಮವಾಗಿ ಆ ಪ್ರಕ್ರಿಯೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿ ಕಸ್ತೂರಿ ರಂಗನ್ ವರದಿಯ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಪರಿಣಾಮವಾಗಿ ವಿಶೇಷ ಗ್ರಾಮಸಭೆ ನಡೆಸಲು ಸರ್ಕಾರ ಮುಂದಾಗಿತ್ತು. ಬಳಿಕ ಹುಲಿ ಸಂರಕ್ಷಿತ ಪ್ರದೇಶ, ಯುನೆಸ್ಕೋ ಗ್ರೇಟರ್ ತಲಕಾವೇರಿ ಪ್ರದೇಶ, ಆನೆ ಕಾರಿಡಾರ್, ಮೆಡಿಸಿನಲ್ ಪ್ಲಾಂಟೇಶನ್, ಮಾಧವ ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ ಹಾಗೂ ಜೀವವೈವಿಧ್ಯ ಸಂರಕ್ಷಣೆಯಂತಹ ವಿವಿಧ ಯೋಜನೆಗಳ ವಿಚಾರದಲ್ಲಿಯೂ ರೈತರ ಹಿತದೃಷ್ಟಿಯಿಂದ ಹೋರಾಟ ನಡೆಸಲಾಗಿದೆ. ಕೇಂದ್ರ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಹಲವು ಬಾರಿ ಕೇಳಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪಕ್ಷಾತೀತವಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಬೇಡ ಎಂಬ ನಿಲುವನ್ನು ವ್ಯಕ್ತಪಡಿಸಿದೆ. ಆದರೂ ಕೇಂದ್ರ ಪರಿಸರ ಇಲಾಖೆ ಈ ಸಂಬಂಧ ಅಧಿಸೂಚನೆಗಳನ್ನು ಹೊರಡಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಅಧಿಸೂಚನೆಯಲ್ಲಿಯೂ ಮಲೆನಾಡಿನ ಗ್ರಾಮೀಣ ಪ್ರದೇಶಗಳ ಜನಜೀವನ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಹಲವು ನಿರ್ಬಂಧಗಳು ಬರುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆ, ರಾಸಾಯನಿಕ ಗೊಬ್ಬರ ಬಳಕೆ, ರಸ್ತೆ ಅಭಿವೃದ್ಧಿ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರಿಗೆ ಮಾತ್ರವಲ್ಲದೇ ಬಾಧಿತ ಗ್ರಾಮಗಳ ಗಡಿಯಿಂದ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗ್ರಾಮಗಳ ಮೇಲೂ ಇದರ ಪರಿಣಾಮ ಬೀರಬಹುದು. ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರ ಹಿತ ಕಾಪಾಡಲು ಕಸ್ತೂರಿ ರಂಗನ್ ವರದಿಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಹೋರಾಟವು ಯಾವುದೇ ರಾಜಕೀಯ ಪಕ್ಷ ಅಥವಾ ಜಾತಿ-ಧರ್ಮಗಳ ಪರವಾಗಿಲ್ಲ. ಜನಹಿತ, ರೈತರ ಹಕ್ಕು ಹಾಗೂ ಮಲೆನಾಡಿನ ಜನಜೀವನದ ರಕ್ಷಣೆಗಾಗಿ ವಿಷಯಾಧಾರಿತ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು” ಎಂದು ಹೇಳಿದರು. ಅದೇ ರೀತಿ “ಸಂಘಟನೆಯಲ್ಲಿ ವಿವಿಧ ಧರ್ಮಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಮತ್ತು ಸದಸ್ಯರು ಇರುವುದರಿಂದ ಪರಸ್ಪರ ನಿಂದನೆ, ಟೀಕೆ ಅಥವಾ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಗೌರವವನ್ನು ಕಾಪಾಡಿಕೊಂಡು ಹೋರಾಟದ ಉದ್ದೇಶಕ್ಕೆ ಧಕ್ಕೆ ಬಾರದಂತೆ ಎಲ್ಲರೂ ಸಹಕರಿಸಬೇಕು” ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಿಲನ್ ಬಾಳಿಕಳ, ಜಿಲ್ಲಾ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ದಾಮೋದರ ಗುಂಡ್ಯ ಹಾಗೂ ಅಶೋಕ್ ಕುಮಾರ್ ಮೂಲೆಮಜಲು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading