ಗುತ್ತಿಗಾರು : “ಕೂಡಿ ಆಡೋಣ ಬಾರ” ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ-ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ(ರಿ.) ಸುಳ್ಯ, ಗುತ್ತಿಗಾರು ಗ್ರಾಮ ಪಂಚಾಯತ್, ಅರಿವು ಕೇಂದ್ರ ಗುತ್ತಿಗಾರು, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.) ಗುತ್ತಿಗಾರು ಇವುಗಳ ಸಂಯುಕ್ತಾಶ್ರಯದಲ್ಲಿ ಮೇ.11 ರಿಂದ ಮೇ.20 ರವರೆಗೆ ಗುತ್ತಿಗಾರಿನ ಗ್ರಾಮ ಪಂಚಾಯತ್ ಸಭಾಭವನದಲ್ಲಿ “ಕೂಡಿ ಆಡೋಣ ಬಾರ” ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮವು ನಡೆಯಿತು. 

ಮೇ.11 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಜಿತ್.ಬಿ.ಕೆ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶಿಬಿರದ ಮೊದಲ ದಿನ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯಶವಂತ ಕುಡೆಕಲ್ಲು ಮಕ್ಕಳಿಗೆ ತೆಂಗಿನ ಗರಿಯಿಂದ ವಿವಿಧ ರೀತಿಯ ಚಟುವಟಿಕೆಗಳನ್ನು ಕಲಿಸಿದರು. ಎರಡನೇ ದಿನ ಲೋಕೇಶ್ ಪೀರನಮನೆ ರವರು ಮಕ್ಕಳಿಗೆ ಆಚಾರ-ವಿಚಾರಗಳ ಕುರಿತು ಮಾಹಿತಿ ನೀಡಿದರು. ಮೂರನೇ ದಿನ ಅರಂತೋಡು ನೆಹರು ಸ್ಮಾರಕ ಪ್ರೌಢಶಾಲಾ ಹಿಂದಿ ಪ್ರಾಧ್ಯಾಪಕರಾದ ಕಿಶೋರ್ ಕುಮಾರ್ ಕಿರ್ಲಾಯ ಮಕ್ಕಳಿಗೆ ಸ್ಪಷ್ಟ ಉಚ್ಚಾರಣೆ ಮತ್ತು ಮಾತುಗಾರಿಕಾ ಕೌಶಲ್ಯದ ಬಗ್ಗೆ ವಿವರಿಸಿದರು. ನಾಲ್ಕನೇ ದಿನ ಗುತ್ತಿಗಾರು ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕರಾದ ಅಭಿಲಾಷಾ ಮೋಟ್ನೂರು ಮಕ್ಕಳಿಗೆ ಬೇಸಿಗೆಯ ಚಟುವಟಿಕೆಗಳು ಮತ್ತು ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು. ಐದನೇ ದಿನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಮೌನೇಶ್ ವಿಶ್ವಕರ್ಮ ಆಟ-ರಂಗಾಟ ವಿಷಯದಲ್ಲಿ ಮಕ್ಕಳಿಗೆ ಆಟಗಳನ್ನು ಹಾಗೂ ಕುಣಿತಗಳನ್ನು ಕಲಿಸಿದರು. ಆರನೇ ದಿನ ಎ.ಕೆ ಹಿಮಕರ ರವರು ಮಕ್ಕಳಿಗೆ ಕವನ ರಚನೆ ಮಾಡುವ ಬಗ್ಗೆ ತಿಳಿಸಿ ಮಕ್ಕಳಿಂದಲೇ ಕವನಗಳನ್ನು ರಚಿಸಿ ಅಭಿನಯಿಸಿದರು. ಏಳನೇ ದಿನ ಊರು ಗೌಡರಾದ ಜಗದೀಶ್ ಪೈಕ ಹಾಗೂ ಉದಯ್ ಕುಮಾರ್ ದೇರಪ್ಪಜ್ಜನಮನೆ ಮಕ್ಕಳಿಗೆ ಸಂಪ್ರದಾಯ ಮತ್ತು ಆಚರಣೆಗಳ ಕುರಿತು ಸವಿವರವಾದ ಮಾಹಿತಿಗಳನ್ನು ನೀಡಿದರು, ಹಾಗೂ ಕಿರಣರಂಗ ಅಧ್ಯಯನ ಸಂಸ್ಥೆಯ ಯೋಗೀಶ್ ಹೊಸೊಳಿಕೆ ಕಥೆ ರಚನೆಯ ಬಗ್ಗೆ ತಿಳಿಸಿ ಮಕ್ಕಳಿಂದ ಕಥೆಗಳನ್ನು ರಚಿಸಿದರು. ಎಂಟನೇ ದಿನ ಮಕ್ಕಳು ಸ್ವಚ್ಚತಾ ಜಾಥಾದೊಂದಿಗೆ ಶಿಬಿರದ ಬಿಡುವಿನ ಸಂದರ್ಭದಲ್ಲಿ ಹಳೆಯ ಪತ್ರಿಕೆಗಳಿಂದ ಗಮ್ ಹಾಗೂ ಪಿನ್ ಬಳಸದೇ ತಯಾರಿಸಿದ ಸುಮಾರು 400ಕ್ಕೂ ಅಧಿಕ ಪೇಪರ್ ಕವರ್ ಗಳನ್ನು ಗುತ್ತಿಗಾರಿನ ಜನೌಷಧಿ ಕೇಂದ್ರ ಹಾಗೂ ಸ್ಥಳೀಯ ಮೆಡಿಕಲ್ ಗಳಿಗೆ ಹಸ್ತಾಂತರಿಸಿದರು. ನಂತರ ಅಂಚೆ ಕಛೇರಿಗೆ ತೆರಳಿದ ಮಕ್ಕಳು ಅಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಿಗೆ ಧನ್ಯವಾದ ಪತ್ರವನ್ನು ಬರೆದು ಪೋಸ್ಟ್ ಮೂಲಕ ಕಳುಹಿಸಿದರು ಹಾಗೂ ಪೋಸ್ಟ್ ಮಾಸ್ಟರ್ ರವರ ಸಹಕಾರದಿಂದ ಅಂಚೆ ಕಛೇರಿಯ ಸಮಗ್ರ ಮಾಹಿತಿಯನ್ನು ತಿಳಿದುಕೊಂಡರು. ನಂತರ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿದ ಮಕ್ಕಳು ಸರ್ಕಾರಿ ಸೇವೆಗಳ ಬಗ್ಗೆ ಹಾಗೂ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡರು. ಶಿಬಿರದ ಒಂಬತ್ತನೇ ದಿನ ವಿಜಯಲಕ್ಷ್ಮಿ ಕರುವಾಜೆ ರವರು ಮಕ್ಕಳಿಗೆ ಗಿಡ ಮೂಲಿಕೆಗಳು ಹಾಗೂ ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು, ಹಾಗೂ ಸನಾತನ ಸಂಸ್ಥೆಯ ಸಾಧಕರಾದ ಧನಂಜಯ ರವರು ಮಕ್ಕಳಿಗೆ ಧಾರ್ಮಿಕ ಸಂಸ್ಕಾರಗಳ ಬಗ್ಗೆ, ಹುಟ್ಟು ಹಬ್ಬದ ಆಚರಣೆಯ ಮಹತ್ವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅರಿವನ್ನು ಮೂಡಿಸಿದರು. ಹಾಗೂ ಅದೇ ರೀತಿ ಶಿಬಿರದಲ್ಲಿ ಪ್ರತಿದಿನವೂ ಕೂಡ ಇಂದಿರಾ ಬಾಳುಗೋಡು, ಸುಕೇಶ್ ಚಾರ್ಮತ ಹಾಗೂ ದಿವ್ಯ ಸುಜನ್ ಗುಡ್ಡೆಮನೆ ಇವರು ಮಕ್ಕಳಿಗೆ ಸೋಬಾನೆ ಪದಗಳನ್ನು, ಜಾನಪದ ಹಾಡುಗಳನ್ನು ಹಾಗೂ ಶ್ಲೋಕ ನಾಮಸ್ಮರಣೆಯೊಂದಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಮಾಡಿಸುತ್ತಿದ್ದರು.

ಮೇ.20 ರಂದು ಈ ಶಿಬಿರದ ಸಮಾರೋಪ ಸಮಾರಂಭ ನಡೆದಿದ್ದು, ಗುತ್ತಿಗಾರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಾದ ದೇವರಾಜ್ ಮುತ್ಲಾಜೆ, ಅಭಿವೃದ್ಧಿ ಅಧಿಕಾರಿಗಳಾದ ಅಜಿತ್, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಅಧ್ಯಕ್ಷರಾದ ಯಶೋಧಾ ಬಾಳೆಗುಡ್ಡೆ, ಉಪಾಧ್ಯಕ್ಷರಾದ ಶಶಿಮಾ ಜಾಕೆ, ಕಾರ್ಯದರ್ಶಿ ಮೃದುಲಾ, ಹಿಂದೂ ಜನಜಾಗೃತಿ ಜಿಲ್ಲಾ ಸಮನ್ವಯಕರಾದ ವಿಜಯ್ ಕುಮಾರ್ ಹಾಗೂ ತಾಲೂಕು ಸಂಜೀವಿನಿ ಸಿಬ್ಬಂದಿ ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದ ಭಾಗವಹಿಸಿದ ಮಕ್ಕಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಪ್ರಮಾಣ ಪತ್ರ ಹಾಗೂ ಯೋಗೀಶ್ ಹೊಸೊಳಿಕೆ ರವರ “ಅರೆಭಾಷೆ ಪುಣ್ಯಕೋಟಿ” ಪುಸ್ತಕವನ್ನು ನೀಡಲಾಯಿತು.
ಶ್ರೀಮತಿ ಅಭಿಲಾಷಾ ಮೋಟ್ನೂರು ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಸುಜನ್ ಗುಡ್ಡೆಮನೆ ಶಿಬಿರದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ವಾಚಿಸಿದರು. ಪಿ.ಡಿ.ಓ ಅಜಿತ್ ರವರು ಸ್ವಾಗತಿಸಿ ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಗುತ್ತಿಗಾರು ಅರಿವು ಕೇಂದ್ರ ಹಾಗೂ ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರದ ಸಹಯೋಗದಲ್ಲಿ ನಡೆದ ಮೊರಾರ್ಜಿ ದೇಸಾಯಿ ಹಾಗೂ ನವೋದಯ ಪರೀಕ್ಷಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ನವೋದಯ ಶಾಲೆಗೆ ಆಯ್ಕೆಯಾದ ಕು.ಘೋಷಿತಾ ರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳ ಪೋಷಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಹಾಗೂ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಹಾಗೂ ಪದಾಧಿಕಾರಿಗಳಾದ ರಮಿತಾ ಆಚಳ್ಳಿ, ಶಿಶಿಮಾ ಜಾಕೆ, ಮೃದುಲಾ, ಜಯಲಕ್ಷ್ಮಿ ಬಳ್ಳಕ್ಕ, ಪ್ರಶಾಂತಿ ನಡುಗಲ್ಲು, ರಮ್ಯಾ ಉಜಿರಡ್ಕ, ಲತಾಕುಮಾರಿ, ದಿವ್ಯ ಹರೀಶ್, ಶಾರದಾ ನಡುಗಲ್ಲು, ಮಿತ್ರಕುಮಾರಿ ಚಿಕ್ಮುಳಿ, ಸುಪ್ರೀತಾ, ಸುಮಿತ್ರಾ ಹಾಗೂ ಶ್ರೀದೇವಿ ಇವರುಗಳು ಮದ್ಯಾಹ್ನದ ಊಟದ ವ್ಯವಸ್ಥೆಗೆ ಸಹಕರಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading