ಅಮರ ಸುಳ್ಯ ಸುದ್ದಿ “ತೆರೆ-ಮರೆಯ ಸಾಧಕರು” – ಸಂಚಿಕೆ 01 ; ನಟನಾ ಕ್ಷೇತ್ರದ ಹಾದಿಯ ಕಥೆ – ಹಳ್ಳಿ ಹೈದನ ಕಲಾ ಪಯಣ ; ರಿಯಾಲಿಟಿ ಶೋ, ಸೀರಿಯಲ್, ವಾಯ್ಸ್ ಡಬ್ಬಿಂಗ್, ಸ್ಟೇಜ್ ಶೋ, ಡ್ರಾಮಾ – ನಟನೆಯ ಎಲ್ಲಾ ವಿಭಾಗಗಳಲ್ಲೂ ಛಾಪನ್ನು ಮೂಡಿಸುತ್ತಿರುವ “ಕಡಬದ ದೀಕ್ಷಿತ್ ಗೌಡ ಕುಂತೂರು ಪದವು” – ಬರಹ : ಉಲ್ಲಾಸ್ ಕಜ್ಜೋಡಿ

ಕಲೆ ಅಥವಾ ಪ್ರತಿಭೆ ಯಾರ ಸ್ವತ್ತೂ ಅಲ್ಲ, ಪ್ರತಿಯೊಬ್ಬರಲ್ಲೂ ಕೂಡ ಏನಾದರೂ ಒಂದು ಕಲೆ ಅಥವಾ ಪ್ರತಿಭೆ ಇದ್ದೇ ಇರುತ್ತದೆ. ಅದು ನಟನೆ, ಬರವಣಿಗೆ, ಚಿತ್ರಕಲೆ, ಶಿಲ್ಪಕಲೆ, ನೃತ್ಯ, ಸಂಗೀತ, ನಾಟಕ, ಅಭಿನಯ, ಛಾಯಾಗ್ರಹಣ ಹೀಗೆ ಏನಾದರೂ ಆಗಿರಬಹುದು. ಕಲೆ ಅಥವಾ ಪ್ರತಿಭೆಗೆ ಬಡವ-ಶ್ರೀಮಂತ, ಹಳ್ಳಿ-ಪಟ್ಟಣ, ಮೇಲು-ಕೀಳು ಎನ್ನುವ ಭೇದಭಾವವಿಲ್ಲ, ಅದು ಕೇಳುವುದೊಂದೇ “ಇಂದು ನೀನು ನಿನ್ನೊಳಗಿರುವ ನನ್ನನ್ನು ಗುರುತಿಸಿ ನನಗೆ ಬೆಲೆಯನ್ನು ಕೊಟ್ಟರೆ ಮುಂದೆ ನಾನು ನಿನಗೆ ಹಾಗೂ ನಿನ್ನ ಬದುಕಿಗೆ ಸುಭದ್ರ ನೆಲೆಯನ್ನು ನೀಡುತ್ತೇನೆ” ಎಂದು. ಹಾಗೆಂದು ತನ್ನೊಳಗಿನ ಕಲೆಯನ್ನು ಗುರುತಿಸಿ ಆ ಹಾದಿಯಲ್ಲಿ ಸಾಗುವವನಿಗೆ ಇಂದಿನಿಂದ ನಾಳೆಗೆ ಗೆಲುವು ಸಿಕ್ಕಿಬಿಡುತ್ತದೆ, ಮರು ಕ್ಷಣದಿಂದಲೇ ಆತ ಬದುಕಿನಲ್ಲಿ ಯಶಸ್ವಿಯಾಗಿಬಿಡುತ್ತಾನೆ ಎಂದರ್ಥವಲ್ಲ, ತನ್ನೊಳಗಿರುವ ಆ ಕಲೆಯನ್ನು ಗುರುತಿಸಿ, ಆರಾಧಿಸಿ ಅವಿರತ ಪ್ರಯತ್ನಗಳಿಂದ ವರ್ಷಗಳ ಕಾಲ ಅವಕಾಶಗಳನ್ನು ಅರಸುತ್ತಾ ಸಾಗಿ ಸಿಗುವ ಎಲ್ಲಾ ಅವಕಾಶಗಳನ್ನು ಕೂಡ ಒಳ್ಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಏಳು-ಬೀಳುಗಳಿಗೆ ಅಂಜದೇ ಮುಂದೆ ಸಾಗುವವನನ್ನು ಮಾತ್ರ ಕಲೆ ಕೈ ಹಿಡಿಯುತ್ತದೆ ಹಾಗೂ ಆತನಿಗೊಂದು ಸುಭದ್ರ ನೆಲೆಯನ್ನು ಕಲ್ಪಿಸುತ್ತದೆ. ಹೀಗೆ ಶಾಲಾ ದಿನಗಳಿಂದಲೇ ನಟನಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿ ಅವಿರತ ಪ್ರಯತ್ನಗಳಿಂದ ರಿಯಾಲಿಟಿ ಶೋ, ಸೀರಿಯಲ್, ವಾಯ್ಸ್ ಡಬ್ಬಿಂಗ್, ಸ್ಟೇಜ್ ಶೋ ಹಾಗೂ ಡ್ರಾಮಾ ಸೇರಿದಂತೆ ನಟನೆಯ ಎಲ್ಲಾ ವಿಭಾಗಗಳಲ್ಲೂ ಛಾಪನ್ನು ಮೂಡಿಸುತ್ತಿರುವ ವ್ಯಕ್ತಿಯೊಬ್ಬರ ಬಗ್ಗೆ ಇಂದಿನ “ತೆರೆ-ಮರೆಯ ಸಾಧಕರ” ಮೊದಲ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ…
ಇವರ ಹೆಸರು ದೀಕ್ಷಿತ್ ಗೌಡ ಕುಂತೂರು ಪದವು, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಪದವು ಗ್ರಾಮದ ಬೀರಂತಡ್ಕ ಎಂಬ ಚಿಕ್ಕ ಹಳ್ಳಿ ಪ್ರದೇಶದಲ್ಲಿ 1998ರ ಫೆಬ್ರವರಿ 28ರಂದು ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ದಿ| ಕುಶಾಲಪ್ಪ ಗೌಡ ಹಾಗೂ ಶ್ರೀಮತಿ ದಮಯಂತಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಅಂಗನವಾಡಿಯಿಂದ 5ನೇ ತರಗತಿಯವರೆಗಿನ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಡಾಳ, 6 ರಿಂದ 7ನೇ ತರಗತಿಯವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಪಡುಬೆಟ್ಟುವಿನಲ್ಲಿ ಪಡೆದುಕೊಂಡು ಪಿ.ಯು.ಸಿ ವಿದ್ಯಾಬ್ಯಾಸವನ್ನು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿ ತದನಂತರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಕಾಂ ಪದವಿಯನ್ನು ಪಡೆದುಕೊಂಡು ಮುತ್ತೂಟ್ ಫಿನ್‌ಕಾರ್ಫ್ ಸಂಸ್ಥೆಯ ಪುತ್ತೂರು ಹಾಗೂ ಸುಳ್ಯ ಶಾಖೆಗಳಲ್ಲಿ 3 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಇವರು ನಂತರ ಬೆಂಗಳೂರಿಗೆ ತೆರಳಿ ಅಲ್ಲಿ ಡಾಲ್ವಿಕೋಟ್ ಎಂಬ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಂಡರು. ಆದರೆ ತಮ್ಮ ಶಾಲಾ ದಿನಗಳಿಂದಲೇ ನಟನಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ತುಳು ನಾಟಕ ಕಥೆ ಬರೆದು ಅಭಿನಯಿಸುವುದು, ಮಿಮಿಕ್ರಿ ಮಾಡುವುದು ಸೇರಿದಂತೆ ಹಲವು ಕಲೆಗಳನ್ನು ಮೈಗೂಡಿಸಿಕೊಂಡು ಹವ್ಯಾಸಿ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಕಾಲೇಜಿನ “ಸಂಸ್ಕೃತಿ-ಸೌರಭ” ತಂಡದ ಪ್ರೋತ್ಸಾಹದಿಂದ ಮೈಸೂರು, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಮಿಮಿಕ್ರಿ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ “ಕುಸುಮ ಸಾರಾಂಗ” ರಂಗ ತಂಡದಲ್ಲಿ ನಿನಾಸಂ ಪದವೀಧರರ ನಿರ್ದೇಶನದಲ್ಲಿ “ಸಂಸಾರದಲ್ಲಿ ಸಾನಿದಪ” ಎನ್ನುವ ಸಾಮಾಜಿಕ ನಾಟಕ ಹಾಗೂ “ಪಂಚವಟಿಯ ಮಾಯಾ ಮುಖಗಳು” ಎನ್ನುವ ಪೌರಾಣಿಕ ನಾಟಕಗಳಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಬೆಂಗಳೂರಿನ ಡಾಲ್ವಿಕೋಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ “ಜೀ ಕನ್ನಡ” ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ “ಕಾಮಿಡಿ ಕಿಲಾಡಿಗಳು ಸೀಸನ್-4” ಕಾರ್ಯಕ್ರಮಕ್ಕೆ ಆಡಿಷನ್ ನೀಡಿ ಆಯ್ಕೆಯಾದ ಇವರು ತದನಂತರ ಸಂಪೂರ್ಣವಾಗಿ ನಟನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ “ಶ್ರೀರಸ್ತು ಶುಭಮಸ್ತು, ಭೂಮಿಗೆ ಬಂದ ಭಗವಂತ, ಸೀತಾರಾಮ” ಹಾಗೂ ಉದಯ ಟಿವಿ ವಾಹಿನಿಯಲ್ಲಿ ಪ್ರಸಾರವಾದ “ಶಾಂಭವಿ” ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ ಇವರು ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಆದಿಲಕ್ಷ್ಮೀ ಪುರಾಣ” ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅದರೊಂದಿಗೆ “ಕಪೋ ಕಲ್ಪಿತಂ” ಎನ್ನುವ ಕನ್ನಡ ಸಿನೆಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ ಇವರು ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಕೆಲವು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದು, ನಟನೆಯ ಜೊತೆಜೊತೆಗೆ ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿರುವ ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಮನೆತನ” ಧಾರಾವಾಹಿಯ ಪಾತ್ರವೊಂದಕ್ಕೆ ದ್ವನಿ ನೀಡುತ್ತಿದ್ದು, ತುಳು “ಟಾಕೀಸ್ ಅಪ್ಲಿಕೇಶನ್” ನಲ್ಲಿ ಪ್ರಸಾರವಾಗುವ ತುಳು ಅನುವಾದಿತ ಇಂಗ್ಲಿಷ್ ಭಾಷೆಯ ಸಿನೆಮಾಗಳಿಗೂ ಧ್ವನಿ ನೀಡುತ್ತಿದ್ದಾರೆ. ಅದರೊಂದಿಗೆ ಹಲವು ವೆಬ್ ಸೀರಿಸ್ ಗಳಲ್ಲಿಯೂ ನಟಿಸುತ್ತಿರುವ ಇವರು ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ನಾಟಕಗಳಲ್ಲಿ ಕೂಡ ನಟಿಸುತ್ತಿದ್ದು, ವೇದಿಕೆ ಕಾರ್ಯಕ್ರಮಗಳನ್ನು ಕೂಡ ನೀಡುತ್ತಿದ್ದಾರೆ. ಒಟ್ಟಿನಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ನಗಿಸುತ್ತಾ, ಧಾರಾವಾಹಿಗಳಲ್ಲಿ ವೀಕ್ಷಕರನ್ನು ಅಳಿಸುತ್ತಾ, ವಾಯ್ಸ್ ಡಬ್ಬಿಂಗ್ ನಲ್ಲಿ ಇನ್ನೊಬ್ಬ ನಟನ ನಟನೆಗೆ ಜೀವ ತುಂಬುತ್ತಾ, ಸ್ಟೇಜ್ ಶೋ ಹಾಗೂ ಡ್ರಾಮಾ ಮೂಲಕ ವೇದಿಕೆಯ ಮುಂಭಾಗದಲ್ಲಿ ನೆರೆದಿರುವ ಜನರನ್ನು ರಂಜಿಸುತ್ತಾ ನಟನಾ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲೂ ತಾಯಿ ಶ್ರೀಮತಿ ದಮಯಂತಿ, ಪತ್ನಿ ಶ್ರೀಮತಿ ರಶ್ಮಿ ದೀಕ್ಷಿತ್ ಹಾಗೂ ಸಹೋದರಿಯರು ಹಾಗೂ ಬಂಧು-ಮಿತ್ರರ ಪ್ರೋತ್ಸಾಹದೊಂದಿಗೆ ತಮ್ಮದೇ ಆದ ರೀತಿಯಲ್ಲಿ ಛಾಪನ್ನು ಮೂಡಿಸುತ್ತಿರುವ ದೀಕ್ಷಿತ್ ರವರು ನಟನಾ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಮನಸ್ಫೂರ್ತಿಯಾಗಿ ಶುಭ ಹಾರೈಸುತ್ತಾ ತಮ್ಮೊಳಗೆ ಪ್ರತಿಭೆಯಿದ್ದರೂ ಅವಕಾಶಗಳಿಲ್ಲ ಎಂದು ಕೊರಗುತ್ತಿರುವ ಹಾಗೂ ತಮ್ಮೊಳಗಿನ ಪ್ರತಿಭೆಯನ್ನು ಹೊರಜಗತ್ತಿಗೆ ತರಲು ಅಂಜುತ್ತಿರುವ ಅನೇಕ ಯುವ ಪ್ರತಿಭೆಗಳಿಗೆ ದೀಕ್ಷಿತ್ ರವರ ಈ ಸಾಧನೆ ನಿಜಕ್ಕೂ ಮಾದರಿ ಎಂದು ಹೇಳುತ್ತಾ “ತೆರೆ-ಮರೆಯ ಸಾಧಕರ” ಮೊದಲ ಸಂಚಿಕೆಗೆ ಪೂರ್ಣವಿರಾಮವನ್ನಿಡುತ್ತಿದ್ದೇವೆ… ಬರಹ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading