ಎಲೆ ಚುಕ್ಕೆ ರೋಗ ನಿರ್ವಹಣಾ ಕ್ರಮಗಳ ಪ್ರಾತ್ಯಕ್ಷಿಕೆಗೆ ಒಂದು ವರ್ಷ – ಗುತ್ತಿಗಾರಿನಲ್ಲಿ ಏ.29 ರಂದು ಸಂವಾದ ಕಾರ್ಯಕ್ರಮ – ಸಂಸದ ಬ್ರಿಜೇಶ್ ಚೌಟ ಭಾಗಿ – ಕೃಷಿಕರಲ್ಲಿ ಮೂಡಿದ ಭರವಸೆ


ಅಡಿಕೆ ಕೃಷಿಕರ ತೋಟಗಳಲ್ಲಿ ಸಮುದಾಯ ಮಟ್ಟದಲ್ಲಿ ಎಲೆ ಚುಕ್ಕೆ ರೋಗ ನಿರ್ವಹಣಾ ಕ್ರಮಗಳ ಪ್ರಾತ್ಯಕ್ಷಿಕೆಗೆ ಒಂದು ವರ್ಷವಾಗುತ್ತಿರುವ ಹಿನ್ನಲೆಯಲ್ಲಿ ಗುತ್ತಿಗಾರು ಕೃಷಿ ಪತ್ತಿನ ಸಹಕಾರ ಸಂಘದ ದೀನ ದಯಾಳ್ ರೈತ ಸಭಾಭವನದಲ್ಲಿ ಏ.29 ರಂದು ಐ. ಸಿ.ಎ.ಆರ್ – ಸಿ. ಪಿ.ಸಿ.ಆರ್.ಐ ವತಿಯಿಂದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದ. ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ಸಿ ಪಿ ಸಿ ಆರ್ ಐ ಸಂಸ್ಥೆಯ ಪಂಚವಾರ್ಷಿಕ ಪರಿಶೀಲನಾ ಕಮಿಟಿಯ ಅಧ್ಯಕ್ಷರಾಗಿರುವ ಡಾ. ಟಿ. ಜನಕಿರಾಮ್ ಮತ್ತು ಇತರ ಸದಸ್ಯರು, ಕ್ಯಾಂಪ್ಕೋ ಅಧ್ಯಕ್ಷರಾಗಿರುವ ಸತೀಶ್ಚಂದ್ರ, ಗುತ್ತಿಗಾರು ಪ್ಯಾಕ್ಸ್ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಭಾಗವಹಿಸಲಿದ್ದಾರೆ.

. . . . . . . . .

ಕೃಷಿಕರಲ್ಲಿ ಮೂಡಿದ ಭರವಸೆ:

ಎಲೆಚುಕ್ಕೆ ರೋಗವು ಕಳೆದ ಕೆಲವು ವರ್ಷಗಳಿಂದ ಕೃಷಿಕರನ್ನು ಕಾಡುತ್ತಿದೆ. ಕೊಲೆಟೊಟ್ರೈಕಮ್ ಕಹಾವೇ (ಸಿಗ್ಗಾರೊ) ಎಂಬ ಹೊಸ ಜಾತಿಯ ಶಿಲೀಂದ್ರವು ಉಂಟು ಮಾಡುವ, ಹಳದಿ ಬಣ್ಣದ ಅಂಚು ಇರುವ ಕಂದು ಬಣ್ಣದ ಚುಕ್ಕೆಗಳು ಇದರ ಲಕ್ಷಣ. ಸಣ್ಣ ಚುಕ್ಕೆಗಳು ದೊಡ್ಡದಾಗಿ, ಒಂದಕ್ಕೊಂದು ಬೆಸೆದುಕೊಂಡು ಇಡೀ ಸೋಗೆ ಒಣಗಿ ಸಮಸ್ಯೆಯನ್ನು ಉಂಟು ಮಾಡುತ್ತದೆ. ಗಾಳಿಯಲ್ಲಿ ಈ ರೋಗದ ಸೋಂಕು ಬಹಳ ಬೇಗನೆ ಹರಡುವ ಕಾರಣ ನಿರ್ವಹಣೆಯೂ ಕಷ್ಟ. ಈ ರೋಗಾಣು ಪೂರಕ ವಾತಾವರಣವಿದ್ದಾಗ ಬಹಳ ವೇಗವಾಗಿ ಅಡಿಕೆ ಮರದ ಎಲೆ, ಹಾಳೆ ಮತ್ತು ಕಾಯಿಯ ಮೇಲೆ ಬೆಳೆದು, ಹಾನಿ ಮಾಡುತ್ತದೆ. ಹವಾಮಾನ ಬದಲಾವಣೆಯಿಂದ ಅದರ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವೂ ಇದೆ.

‘ರೋಗ ನಿರ್ವಹಣೆಗೆ ಸಿಂಪಡಣೆಯೊಂದೇ ಪರಿಹಾರವಲ್ಲ. ಸಾಮೂಹಿಕವಾಗಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು, ತೀವ್ರವಾದ ಎಲೆಗಳನ್ನು ತೆಗೆದು ನಾಶ ಮಾಡುವುದು ಹಾಗೂ ಅಡಿಕೆ ಮರದ ಆರೋಗ್ಯವನ್ನು ಉತ್ತಮಗೊಳಿಸುವುದು ಬಹು ಮುಖ್ಯ’ ಎನ್ನುತ್ತಾರೆ ಸಿ ಪಿ ಸಿ ಆರ್ ಐ ನಿರ್ದೇಶಕ ಡಾ. ಕೆ ಬಾಲಚಂದ್ರ ಹೆಬ್ಬಾರ್.

ಈ ಹಿನ್ನಲೆಯಲ್ಲಿ ಎಲೆಚುಕ್ಕೆ ಮತ್ತು ಹಳದಿ ರೋಗದ ಕುರಿತಂತೆ ನೇಮಕವಾಗಿರುವ ರಾಷ್ಟ್ರೀಯ ವೈಜ್ಞಾನಿಕ ಕಮಿಟಿಯು ನೀಡಿರುವ ಸಲಹೆಯನ್ನು ಕೇಂದ್ರ ಸರ್ಕಾರದ ಎಂ.ಐ.ಡಿ.ಎಚ್ ಯೋಜನೆಯಡಿ ಸಿ ಪಿ ಸಿ ಆರ್ ಐ ಸಂಸ್ಥೆಯು ಡಾ. ವಿನಾಯಕ ಹೆಗಡೆಯವರ ನೇತೃತ್ವದಲ್ಲಿ ಈ ಪ್ರಾತ್ಯಕ್ಷಿಕೆಯನ್ನು ಕೃಷಿಕರ ತೋಟಗಳಲ್ಲಿ ಮಾಡುತ್ತಿದೆ. ಸುಳ್ಯ ತಾಲೂಕಿನ ನಡುಗಲ್ಲು ಮತ್ತು ಚನಿಲ, ಹಾಗೂ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ಒಟ್ಟು 21 ಕೃಷಿಕರ 25 ಎಕರೆ ತೋಟದಲ್ಲಿ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುತ್ತಿದೆ. ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಸಿದ್ದಾಪುರ ತಾಲೂಕಿನಲ್ಲಿ ಸುಮಾರು 25 ಎಕರೆ ತೋಟದಲ್ಲೂ ಪ್ರಾತ್ಯಕ್ಷಿಕೆ ಪ್ರಗತಿಯಲ್ಲಿದೆ. ಇದೇ ಮಾದರಿಯ ಪ್ರಾತ್ಯಕ್ಷಿಕೆಯನ್ನು ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಆರು ತಾಲೂಕಿನ 75 ಎಕರೆ ತೋಟದಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯಡಿ ಔಷಧಿ ಸಿಂಪಡಣೆ ಮಾತ್ರವಲ್ಲದೆ, ಉತ್ತಮ ಕೃಷಿ ಕ್ರಮಗಳನ್ನು ಅನುಸರಿಸಿ ಮರದ ಆರೋಗ್ಯವನ್ನು ಉತ್ತಮಪಡಿಸುವ ಉದ್ದೇಶವಿದೆ. ನೀರು ಹರಿದು ಹೋಗಲು ಬಸಿಗಾಲುವೆಯ ವ್ಯವಸ್ಥೆ, ಮಣ್ಣು ಪರೀಕ್ಷೆ ವರದಿಯ ಅನುಸಾರ ಹುಳಿ ಮಣ್ಣಿಗೆ ಸುಣ್ಣ, ಸಮತೋಲಿತ ಪೋಷಕಾಂಶ ಮತ್ತು ಲಘು ಪೋಷಕಾಂಶಗಳ ಬಳಕೆ, ಮಣ್ಣಿನಲ್ಲಿರುವ ಸೋಂಕನ್ನು ಕಡಿಮೆಗೊಳಿಸಿ ಬೇರಿನ ಬೆಳವಣಿಗೆಯನ್ನು ಉತ್ತೇಜನಗೊಳಿಸಲು ಟ್ರೈಕೋಡರ್ಮ ಮತ್ತು ಗುಣಮಟ್ಟದ ಬೇವಿನ ಹಿಂಡಿಯ ಬಳಕೆ, ಮಳೆಗಾಲದಲ್ಲಿ ಬೋರ್ಡೋ ಮಿಶ್ರಣವನ್ನು ಗೊನೆ ಮತ್ತು ಎಲೆಗಳಿಗೆ ಸಿಂಪಡಣೆ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ತೀವ್ರಬಾಧಿತ ಸೋಗೆಗಳನ್ನು ತೆಗೆದು ಪ್ರಾಪಿಕೊನಜೋಲ್ ಅಥವಾ ಟೆಬುಕೊನಜೋಲ್ ಎಂಬ ಶಿಲೀಂದ್ರನಾಶಕದ ಸಿಂಪಡಣೆ, ಮೂರರಿಂದ ನಾಲ್ಕು ವಾರಗಳ ನಂತರ, ಪ್ರಾಪಿನೆಬ್ ಎಂಬ ಶಿಲೀಂದ್ರನಾಶಕದ ಸಿಂಪಡಣೆ, ಈ ಕೃಷಿ ಕ್ರಮಗಳನ್ನು ರೋಗ ನಿರ್ವಹಣಾ ಪ್ರಾತ್ಯಕ್ಷಿಕೆಯು ಒಳಗೊಂಡಿದೆ. ಕೇವಲ ಒಬ್ಬ ಕೃಷಿಕನ ತೋಟದಲ್ಲಿ ಮಾಡದೇ, ಸುತ್ತಲಿನ ಕೃಷಿಕರ ತೋಟದಲ್ಲಿಯೂ ಈ ಕ್ರಮಗಳನ್ನು ಅನುಸರಿಸುತ್ತಿರುವುದು ಈ ಯೋಜನೆಯ ವೈಶಿಷ್ಟ್ಯ.

‘ಎಲೆಚುಕ್ಕೆ ರೋಗದ ಗಂಭೀರತೆಯನ್ನು ನೋಡುವಾಗ ತೋಟ ಉಳಿಯುತ್ತದೆಯೇ ಎಂದು ಅನ್ನಿಸಿತ್ತು. ನಾನು ಈ ಪ್ರಾತ್ಯಕ್ಷಿಕೆಯ ಎಲ್ಲಾ ಕೃಷಿ ಕ್ರಮಗಳನ್ನು ಅಳವಡಿಸಿಕೊಂಡಿದ್ದೇನೆ. ರೋಗ ನಿರ್ವಹಣೆ ಕುರಿತು ಈಗ ಭರವಸೆ ಮೂಡಿದೆ’ ಎನ್ನುತ್ತಾರೆ ನಡುಗಲ್ಲು ಕೃಷಿಕ ಗಿರೀಶ್ ಗೌಡ. ‘ಕಳೆದ ವರ್ಷಕ್ಕೆ ಹೋಲಿಸಿದರೆ ರೋಗದ ಲಕ್ಷಣ ಕಡಿಮೆಯಾಗಿದೆ. ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು’ ಎನ್ನುವುದು ಈ ಯೋಜನೆಯ ಫಲಾವಲಂಬಿಯಾಗಿರುವ ಸುಬ್ರಮಣ್ಯ ಪ್ರಸಾದ್ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading