ಬೆಳ್ಳಾರೆ ಗ್ರಾಮಸಭೆ; ಸರಕಾರಿ ಆಸ್ಪತ್ರೆಯಲ್ಲಿ 24 ಗಂಟೆ ತುರ್ತು ಸೇವೆಗೆ ಒತ್ತಾಯ | ಅಪಾಯಕಾರಿ ಮರಗಳ ತೆರವಿಗೆ  ಆಗ್ರಹ

ಬೆಳ್ಳಾರೆ ಗ್ರಾಮ ಪಂಚಾಯತಿನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕಟ್ಟಡದಲ್ಲಿ ಜು. 30ರಂದು ನಡೆಯಿತು.

. . . . . . . . .

ಬೆಳ್ಳಾರೆ ಕೆಪಿಎಸ್ ಶಾಲೆಯ ವಿದ್ಯಾರ್ಥಿನಿಯರ ನಾಡಗೀತೆಯೊಂದಿಗೆ ಗ್ರಾಮಸಭೆಯು ಆರಂಭಗೊಂಡಿತು. ಬೆಳ್ಳಾರೆ ಗ್ರಾಮ ಪಂಚಾಯತಿನ ಆಡಳಿತಾಧಿಕಾರಿ ಎಂ. ಪಯಾಝ್ ಅಹ್ಮದ್ ನೋಡಲ್ ಅಧಿಕಾರಿಯಾಗಿದ್ದರು. ಪ್ರಭಾರ ಪಿ.ಡಿ.ಒ. ಪ್ರವೀಣ್ ಕುಮಾರ್ ಸಿ.ವಿ. ಸ್ವಾಗತಿಸಿ ವಾರ್ಡು ಸಭೆ ನಡವಳಿಗೆ ಅನುಮೋದನೆ ದೊರೆತ ಮೇಲೆ ಜಮಾ ಖರ್ಚುಗಳ ವರದಿ ಮಂಡಿಸಿದರು.
ನಂತರ ಗ್ರಾಮಸ್ಥರು ಇಲಾಖಾಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಪ್ರಮುಖವಾಗಿ ನಿಕಟಪೂರ್ವ ಗ್ರಾ.ಪಂ. ಸದಸ್ಯ ಅನಿಲ್ ರೈ ಚಾವಡಿಬಾಗಿಲು ಮತ್ತು ಚಂದ್ರಶೇಖರ ಪನ್ನೆ ಯವರು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆಗಳ ಬಗ್ಗೆ ಪ್ರಸ್ತುತತೆಯ ಮಾಹಿತಿ ಕೇಳಿದರು. ರಾತ್ರಿ, ತಡರಾತ್ರಿಯ ಗಂಭೀರ ಆರೋಗ್ಯ ಸಮಸ್ಯೆಗೆ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸೇವೆ ಲಭ್ಯವಿರುವುದು ಕಡಿಮೆ ಎಂದು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಿರಣ್ ಅವರ ಮುಂದೆ ತಿಳಿಸಿದರು. ಇದಕುತ್ತರಿಸಿದ ಅವರು ಈ ಕೇಂದ್ರದಲ್ಲಿ ಅತೀ ಅನಿವಾರ್ಯ ಸೇವೆ ದಿನದ 24 ಘಂಟೆಯು ದೊರೆಯುತ್ತದೆ ಎನ್ನುತ್ತಾ ಜನೋತ್ತಡದಿಂದ ಸೇವೆಗೆ ಅಡೆತಡೆಗಳು ಉಂಟಾಗುತ್ತಿದೆ,
ಹಾಗೂ ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು ಹಾಗೂ ಪಾಲಿಸಬೇಕಾದ ಆರೋಗ್ಯ ಸಂಗತಿಗಳ ಬಗ್ಗೆ ಸವಿವರ ಮಾಹಿತಿ ನೀಡಿದರು. ಗ್ರಾಮಸ್ಥರು ಬೆಳ್ಳಾರೆ ಶಾಲೆಯ ಹತ್ತಿರ ಅಪಾಯಕಾರಿ ವಿದ್ಯುತ್ ಲೈನಿನ ಸಮಸ್ಯೆ, ಶಾಲೆಯ ಎದುರುಗಡೆ ಮತ್ತು ಬಿಸಿಎಂ ಹಾಸ್ಟೆಲ್ ಹತ್ತಿರವಿರುವ ದೇವದಾರು ಮರಗಳ ಗೆಲ್ಲುಗಳನ್ನು ಕಡಿದು ವಿದ್ಯುತ್ ಲೈನನ್ನು ಎತ್ತರಿಸಲು ಆಗ್ರಹಿಸಿದರು. ಅಪಾಯಕಾರಿ ಮರಗಳ ತೆರವು,ಕಾಡು ಹಂದಿ, ಮಂಗಗಳ ಹಾವಳಿಗಳ ತೊಂದರೆಯ ಬಗ್ಗೆ ತಿಳಿಸಿ ಪರಿಹಾರಕ್ಕೆ ಆಗ್ರಹಿಸಿದರು. ಬೆಳ್ಳಾರೆ ಪೇಟೆಯ ಕೆಲವು ಕಡೆ ಚರಂಡಿಯ ಅವ್ಯವಸ್ಥೆ ಕುರಿತು ಗ್ರಾಮಸ್ಥರು ದೂರಿದರು.

. . . . . . .

ಸಭೆಯಲ್ಲಿ  ಬೆಳ್ಳಾರೆ ಕೆಪಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಮಾಯಿಲಪ್ಪ ಜಿ, ಬೆಳ್ಳಾರೆ ಕೆಪಿಎಸ್ ಉಪಪ್ರಾಂಶುಪಾಲೆ ಉಮಾಕುಮಾರಿ, ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಿರೀಶ್, ಬೆಳ್ಳಾರೆ ಪ್ರಥಮ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕಾಂತರಾಜು ಸಿ., ಬೆಳ್ಳಾರೆ ಪೊಲೀಸ್ ಠಾಣಾ ಎಎಸ್ಐ ಕುಂಞ, ಸುಳ್ಯ ರೇಂಜ್
ಡಿವೈಆರ್ ಎಫ್ ಒ ಆನಂದ ಮೋಹಿತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದೀಪಿಕಾ ಕೆ, ಮಹಿಳಾ ಮೇಲ್ವಿಚಾರಕಿ ಉಷಾಪ್ರಸಾದ್ ರೈ, ಕೆನರಾ ಬ್ಯಾಂಕ್ ಸುಳ್ಯ ಶಾಖೆಯ ಆಪ್ತ ಸಮಾಲೋಚಕಿ ಸುಜಾತ, ಅರಣ್ಯ ಇಲಾಖೆಯ ಅಧಿಕಾರಿ ಚಂದ್ರು ಬಿ.ಜಿ. ಉಪಸ್ಥಿತರಿದ್ದು, ಮಾಹಿತಿ ಕೊಟ್ಟು ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಪಿ.ಡಿ.ಒ
ಪ್ರವೀಣ್ ಕುಮಾರ್ ಸಿ.ವಿ. ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಗ್ರಾಮಸಭೆಯು ಮುಕ್ತಾಯವಾಯಿತು.
ವರದಿ-ಎಂ.ಎ. ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading