“ಮಾರುಕಟ್ಟೆ ರೌಂಡ್ ಅಪ್” – ಸೋಮವಾರದಿಂದ ಶನಿವಾರದ ವರೆಗಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಒಂದು ಸಮಗ್ರ ನೋಟ ; ಈ ವಾರ(ಏ.20 ರಿಂದ ಏ.25) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎನ್ನುವುದನ್ನು ವಿವರವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ – ಬರಹ : ಉಲ್ಲಾಸ್ ಕಜ್ಜೋಡಿ

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀ ದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದು, ಈ ವಾರ ಏ.20 ಸೋಮವಾರದಿಂದ ಏ.25 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ನಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಈ ವಾರದ ಪ್ರಾರಂಭದಲ್ಲಿ ಅಂದರೆ ಏ.20 ಸೋಮವಾರದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯದ ಪ್ರಯುಕ್ತ ಹಾಗೂ ಈ ವಾರದ ಕೊನೆಯ ದಿನವಾದ ಏ.25 ಶನಿವಾರದಂದು ತಿಂಗಳ ನಾಲ್ಕನೇ ಶನಿವಾರವಾದ ಕಾರಣ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯು ಒಂದು ದಿನ ತಡವಾಗಿ ಅಂದರೆ ಏ.21 ಮಂಗಳವಾರದಂದು ಪ್ರಾರಂಭಗೊಂಡು ಒಂದು ದಿನ ಮುಂಚಿತವಾಗಿ ಅಂದರೆ ಏ.24 ಶುಕ್ರವಾರದಂದು ಮುಕ್ತಾಯಗೊಂಡಿತು. ಆ ಮೂಲಕ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯು ನಾಲ್ಕು ದಿನಗಳ ಕಾಲ ವಹಿವಾಟನ್ನು ನಡೆಸಿತು.

ಈಗ ನಾವು ಮೊದಲಿಗೆ ಈ ವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುವುದಾದರೆ ವಾರದ ಪ್ರಾರಂಭದಲ್ಲಿ ಅಂದರೆ ಏ.21 ಮಂಗಳವಾರದಂದು ಹೊಸ ಅಡಿಕೆ ಕನಿಷ್ಠ 290 ರಿಂದ ಗರಿಷ್ಠ 475 ರೂಪಾಯಿ, ಹಳೆ ಅಡಿಕೆ ಕನಿಷ್ಠ 420 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 420 ರಿಂದ ಗರಿಷ್ಠ 550 ರೂಪಾಯಿ, ಫಟೋರ ಕನಿಷ್ಠ 280 ರಿಂದ ಗರಿಷ್ಠ 405 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 165 ರಿಂದ ಗರಿಷ್ಠ 290 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 230 ರಿಂದ ಗರಿಷ್ಠ 265 ರೂಪಾಯಿ ಇತ್ತು. ಏ.22 ಬುಧವಾರದಂದು ಅಡಿಕೆ ಮಾರುಕಟ್ಟೆ ಸಂಪೂರ್ಣ ಸ್ಥಿರವಾಗಿದ್ದು, ಯಾವುದೇ ಏರಿಳಿತವಿಲ್ಲದೇ ಎಲ್ಲಾ ವಿಧದ ಅಡಿಕೆ ಧಾರಣೆಗಳು ಕೂಡ ಏ.21ರ ಮಟ್ಟದಲ್ಲೇ ಇದ್ದವು. ಏ.23 ಗುರುವಾರದಂದು ಕೂಡ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗದೇ ಎಲ್ಲಾ ವಿಧದ ಅಡಿಕೆಗಳ ಧಾರಣೆಗಳು ಕೂಡ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದವು. ಇನ್ನು ಈ ವಾರದ ವಹಿವಾಟಿನ ಕೊನೆಯ ದಿನವಾದ ಏ.24 ಶುಕ್ರವಾರದಂದು ಕೂಡ ಎಲ್ಲಾ ವಿಭಾಗಗಳ ಅಡಿಕೆಗಳ ಧಾರಣೆಗಳಲ್ಲೂ ಕೂಡ ಮತ್ತೊಮ್ಮೆ ಯಾವುದೇ ರೀತಿಯ ಬದಲಾವಣೆಗಳು ಕಾಣದೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಒಟ್ಟಿನಲ್ಲಿ ಈ ವಾರ ಪೂರ್ತಿ ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಎಲ್ಲಾ ವಿಭಾಗಗಳ ಅಡಿಕೆಗಳ ಧಾರಣೆಗಳಲ್ಲೂ ಕೂಡ ಯಾವುದೇ ರೀತಿಯ ಬದಲಾವಣೆಗಳು ಕಾಣದೇ ಈ ವಾರದ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯು ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿತ್ತು.

ಮುಂದೆ ನಾವು ಇತರೆ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಈ ವಾರ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಆರಂಭದಲ್ಲಿ ಅಂದರೆ ಏ.21 ಮಂಗಳವಾರದಂದು ಕಾಳುಮೆಣಸು ಕನಿಷ್ಠ 575 ರಿಂದ ಗರಿಷ್ಠ 675 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 270 ರಿಂದ ಗರಿಷ್ಠ 310 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 150 ರಿಂದ 190 ರೂಪಾಯಿಗಳಿತ್ತು. ಏ.22 ಬುಧವಾರದಂದು ಹಾಗೂ ಏ.23 ಗುರುವಾರದಂದು ಕೂಡ ಇವುಗಳ ಧಾರಣೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿರಲಿಲ್ಲ. ಆದರೆ ಈ ವಾರದ ವಹಿವಾಟಿನ ಕೊನೆಯ ದಿನವಾದ ಏ.24 ಶುಕ್ರವಾರದಂದು ವಾರಪೂರ್ತಿ 675 ರೂಪಾಯಿ ಬೆಲೆಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಂಡಿದ್ದ ಕಾಳುಮೆಣಸಿನ ಧಾರಣೆಯಲ್ಲಿ ಅಲ್ಪ ಮಟ್ಟದ ಏರಿಕೆ ಕಂಡುಬಂದಿದ್ದು, ಪ್ರತೀ ಕೆಜಿಗೆ 05 ರೂಪಾಯಿಗಳ ಏರಿಕೆಯೊಂದಿಗೆ 680 ರೂಪಾಯಿಗಳಿಗೆ ತಲುಪಿತ್ತು. ಆದರೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಾಣದೇ ವಾರಪೂರ್ತಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು.

ಇನ್ನು ಕೊನೆಯದಾಗಿ ಈ ವಾರದ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಏ.21 ಮಂಗಳವಾರದಂದು ಗ್ರೇಡ್ ರಬ್ಬರ್ ನ ಬೆಲೆ 229.50 ರೂಪಾಯಿ, ಲಾಟ್ ರಬ್ಬರ್ ನ ಬೆಲೆ 200.50 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆಯ ಬೆಲೆ 141 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆಯ ಬೆಲೆ 131.50 ರೂಪಾಯಿ ಇತ್ತು. ಏ.22 ಬುಧವಾರದಂದು ರಬ್ಬರ್ ಧಾರಣೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿರಲಿಲ್ಲ. ಆದರೆ ಏ.23 ಗುರುವಾರದಂದು ರಬ್ಬರ್ ಧಾರಣೆಯಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಧಾರಣೆಯಲ್ಲಿ 4 ರೂಪಾಯಿ ಏರಿಕೆ ಕಂಡು ಬಂದಿದ್ದು, ಲಾಟ್ ಹಾಗೂ ಸ್ಕ್ರ್ಯಾಪ್ ರಬ್ಬರ್ ಗಳ ಧಾರಣೆಯಲ್ಲಿ ಸರಾಸರಿ 3 ರಿಂದ 3.50 ರೂಪಾಯಿಗಳಷ್ಟು ಏರಿಕೆಯಾಗಿದೆ. ಹಾಗೆಯೇ ಈ ವಾರದ ವಹಿವಾಟಿನ ಕೊನೆಯ ದಿನವಾದ ಏ.24 ಶುಕ್ರವಾರದಂದು ರಬ್ಬರ್ ಧಾರಣೆಯಲ್ಲಿ ಮತ್ತೊಮ್ಮೆ ಚೇತರಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಬೆಲೆಯಲ್ಲಿ 1.50 ರೂಪಾಯಿ ಏರಿಕೆಯಾಗಿದ್ದು, ಲಾಟ್ ಹಾಗೂ ಸ್ಕ್ರ್ಯಾಪ್ ವಿಭಾಗದಲ್ಲೂ ತಲಾ ತಲಾ 1 ರೂಪಾಯಿ ಏರಿಕೆ ದಾಖಲಾಗಿದ್ದು, ವಾರದ ಕೊನೆಯಲ್ಲಿ ಗ್ರೇಡ್ ರಬ್ಬರ್ ಗೆ 235 ರೂಪಾಯಿ, ಲಾಟ್ ರಬ್ಬರ್ ಗೆ 205 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆಗೆ 145 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆಯ ಧಾರಣೆ 136 ರೂಪಾಯಿಗಳಿಗೆ ತಲುಪಿದೆ.

ಒಟ್ಟಿನಲ್ಲಿ ಈ ವಾರ ಕ್ಯಾಂಪ್ಕೋ ಮಾರುಕಟ್ಟೆ ವಹಿವಾಟು ಒಂದು ದಿನ ತಡವಾಗಿ ಪ್ರಾರಂಭಗೊಂಡು ಒಂದು ದಿನ ಮುಂಚಿತವಾಗಿ ಮುಕ್ತಾಯಗೊಂಡಿದ್ದು, ವಾರಪೂರ್ತಿ ಅಡಿಕೆ ಹಾಗೂ ಕೊಕ್ಕೋ ಧಾರಣೆಗಳು ಸಂಪೂರ್ಣ ಸ್ಥಿರವಾಗಿದ್ದರೆ ವಾರದ ಕೊನೆಯ ದಿನ ಕಾಳುಮೆಣಸಿನ ಧಾರಣೆ ಏರಿಕೆ ಕಂಡರೆ ರಬ್ಬರ್ ಧಾರಣೆಯಲ್ಲಿ ವಾರದ ಕೊನೆಯ ಎರಡು ದಿನಗಳ ಕಾಲ ಮೇಲಿನಿಂದ ಮೇಲೆ ಏರಿಕೆ ಕಂಡುಬಂದಿದೆ. ಹೀಗೆ ಕೆಲವು ಉತ್ಪನ್ನಗಳು ವಾರಪೂರ್ತಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ ಕೆಲವು ಉತ್ಪನ್ನಗಳು ವಾರದ ಕೊನೆಯನ್ನು ತಲುಪುವ ಹೊತ್ತಿಗೆ ಏರಿಕೆಯ ಹಾದಿಯನ್ನು ಹಿಡಿದಿದ್ದು, ಮುಂದಿನ ವಾರ ಏನಾಗುತ್ತದೋ ಕಾದುನೋಡಬೇಕಿದೆ… ಬರಹ : ಉಲ್ಲಾಸ್ ಕಜ್ಜೋಡಿ

ಗಮನಿಸಿ : ಈ ಲೇಖನದಲ್ಲಿ ನೀಡಲಾದ ಮಾರುಕಟ್ಟೆ ದರಗಳು ಕಳೆದ ಒಂದು ವಾರದಲ್ಲಿ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಸಂಗ್ರಹಿಸಲಾದ ಅಧಿಕೃತ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆಯ ಧಾರಣೆಯು ದಿನನಿತ್ಯದ ಬೇಡಿಕೆ, ಪೂರೈಕೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿನ ವಿಶ್ಲೇಷಣೆಯು ಕೇವಲ ರೈತರ ಅರಿವಿಗಾಗಿ ಮಾತ್ರವಾಗಿದ್ದು, ಇದನ್ನು ಭವಿಷ್ಯದ ದರಗಳ ನಿಖರ ಮುನ್ಸೂಚನೆ ಎಂದು ಪರಿಗಣಿಸಬಾರದು. ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮೊದಲು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನುಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading