ಸಾಕು ಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ಬಿಡುವಷ್ಟು ನಿರ್ದಯಿಗಳಾಗದಿರಿ ; ಅವುಗಳೂ ಕೂಡ ನಮ್ಮಂತೆಯೇ ಒಂದು ಜೀವ ಎನ್ನುವುದನ್ನು ಮರೆಯದಿರಿ…

ಈ ಜಗತ್ತಿನಲ್ಲಿ ಮನುಷ್ಯನೂ ಸೇರಿದಂತೆ ಪ್ರತಿಯೊಂದು ಪ್ರಾಣಿ-ಪಕ್ಷಿ ಜೀವ ಸಂಕುಲಗಳಿಗೂ ಕೂಡ ಬದುಕಲು ಸಮಾನವಾದ ಹಕ್ಕು ಅವಕಾಶಗಳಿವೆ. ಕಾಡು ಪ್ರಾಣಿಗಳು ತಮ್ಮಿಚ್ಚೆಯಂತೆ ಸ್ವಚ್ಛಂದವಾಗಿ ಕಾಡಿನಲ್ಲಿ ಬದುಕಿದರೆ ಸಾಕು ಪ್ರಾಣಿಗಳು ಮನುಷ್ಯನೊಂದಿಗೆ ಮನುಷ್ಯನಿಗೆ ಉಪಕಾರಿಯಾಗಿ ಬದುಕುತ್ತವೆ.
ಮನುಷ್ಯರಾದ ನಾವುಗಳು ನಮ್ಮೊಂದಿಗಿರುವ ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ನಿಜ. ಆದರೆ ಮನುಷ್ಯತ್ವವೇ ಮರೆಯಾಗುತ್ತಿರುವ ಈ ಕಾಲದಲ್ಲಿಯೂ ಮನುಷ್ಯನಿಗಿಂತ ಹೆಚ್ಚಿನ ಪ್ರೀತಿಯನ್ನು ಸಾಕುಪ್ರಾಣಿಗಳು ಮನುಷ್ಯನ ಮೇಲೆ ತೋರುತ್ತವೆ. ನಮಗೆ ಹಸಿವಾದಾಗ ಅನ್ನ ಹಾಕಿದ ಮನೆಯನ್ನು ನಾವು ಮರೆಯಬಹುದು, ಆದರೆ ಸಾಕು ಪ್ರಾಣಿಗಳಿಗೆ ನಾವು ಒಂದು ಹೊತ್ತು ಊಟ ಹಾಕಿದರೂ ಕೂಡ ಅವು ಸಾಯುವವರೆಗೂ ನಮ್ಮನ್ನು ನೆನಪಿಟ್ಟುಕೊಳ್ಳುತ್ತವೆ. ಮನುಷ್ಯರಾದ ನಮ್ಮ ಮೇಲೆ ಇಷ್ಟೊಂದು ಪ್ರೀತಿ ತೋರುತ್ತಿರುವ ಸಾಕುಪ್ರಾಣಿಗಳನ್ನು ಇಂದು ಕೆಲವೊಮ್ಮೆ ನಾವುಗಳು “ಸಾಕಲು ಕಷ್ಟವಾಗುತ್ತದೆ” ಎಂದು ಕಿಂಚಿತ್ತೂ ಕರುಣೆಯಿಲ್ಲದೆ ರಸ್ತೆ ಬದಿಗಳಲ್ಲಿ ತಂದು ಬಿಡುತ್ತಿದ್ದೇವೆ. ಅದರಲ್ಲೂ ಚಿಕ್ಕ ಚಿಕ್ಕ ಬೆಕ್ಕಿನ ಮರಿಗಳು, ನಾಯಿ ಮರಿಗಳು ಈಗ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಸರಿಯಾಗಿ ಓಡಾಡಲೂ ಆಗದಂತಹ ಚಿಕ್ಕ ಚಿಕ್ಕ ಮರಿಗಳನ್ನೂ ಕೂಡ ರಸ್ತೆ ಬದಿಯಲ್ಲಿ ತಂದು ಬಿಡುವಂತಹ ಮನುಷ್ಯರ ಮನಸ್ಥಿತಿಗೆ ಹೇಳುವುದಾದರೂ ಏನು…? ನಮ್ಮನ್ನೇ ನಂಬಿರುವ ಆ ಪ್ರಾಣಿಗಳನ್ನು ನಾವೇ ಮನೆಯಿಂದ ದೂರ ತಳ್ಳಿದರೆ ಅವುಗಳು ಹೋಗುವುದಾದರೂ ಎಲ್ಲಿಗೆ…? ಎಂದು ಒಂಚೂರು ಯೋಚಿಸಿ. ನಾವು ರಸ್ತೆಯ ಬದಿಯಲ್ಲಿ ಬಿಟ್ಟು ಬಂದ ನಂತರ ಎಲ್ಲಿಗೆ ಹೋಗಬೇಕೆಂದು ಅರಿಯದ ಅವುಗಳು ವಾಹನಗಳ ಅಡಿಗೆ ಸಿಲುಕಿಯೋ ಅಥವಾ ಆಹಾರವಿಲ್ಲದೆಯೋ ಸಾವನ್ನಪ್ಪುತ್ತವೆ. ಒಂದರ್ಥದಲ್ಲಿ ನಮ್ಮ ಸ್ವಾರ್ಥಕ್ಕೆ ನಮ್ಮನ್ನೇ ನಂಬಿದ ಮೂಕ ಮುಗ್ಧ ಪ್ರಾಣಿಗಳು ಬಲಿಯಾಗುತ್ತಿವೆ.
ನಮ್ಮವರು ಯಾರಾದರೂ ನಮ್ಮಿಂದ ದೂರವಾದಾಗ ಮನುಷ್ಯರಾದ ನಮ್ಮ ಮನಸ್ಸಿಗೇ ಬೆಟ್ಟದಷ್ಟು ನೋವಾಗುತ್ತದೆ ಎಂದಾದರೆ ನಮ್ಮನ್ನೇ ನಂಬಿರುವ, ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಸಾಕುಪ್ರಾಣಿಗಳ ಮನಸ್ಸಿಗೆ ಎಷ್ಟು ನೋವಾಗಬಹುದೆಂದು ಒಂದು ಕ್ಷಣ ಯೋಚಿಸಿ.
ಸಾಕಲು ಕಷ್ಟವಾಗುತ್ತದೆ ಎಂದಾದರೆ ಸಾಕುಪ್ರಾಣಿಗಳನ್ನು ತರುವುದಾದರೂ ಏಕೆ…? ತಂದ ನಂತರ ಅವುಗಳನ್ನು, ಮರಿಗಳನ್ನು ಸಾಕಲು ಕಷ್ಟವಾಗುತ್ತದೆ ಎಂದು ರಸ್ತೆ ಬದಿಯಲ್ಲಿ ಬಿಡುವುದಾದರೂ ಏಕೆ…?
ಅವು ನಮ್ಮಿಂದ ಹೆಚ್ಚೇನೂ ಬಯಸುವುದಿಲ್ಲ, ನಾವು ಪ್ರತಿನಿತ್ಯ ಮೂರು ಹೊತ್ತು ತಿನ್ನುವ ಆಹಾರದಲ್ಲಿ ಒಂದು ಭಾಗವನ್ನು ಅವುಗಳಿಗೆ ನೀಡಿದರೆ ಸಾಕು ಅವು ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ತೋರುತ್ತಾ ನಿಯತ್ತಿನಿಂದ ನಮ್ಮೊಂದಿಗೆ ಬದುಕುತ್ತವೆ.
ಆದ್ದರಿಂದ ಸಾಧ್ಯವಾದಷ್ಟು ಸಾಕುಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೋಣ, ಯಾವತ್ತೂ ಸಾಕಲು ಕಷ್ಟವಾಗುತ್ತದೆ ಎಂದು ರಸ್ತೆ ಬದಿಗಳಲ್ಲಿ ಬಿಡದಿರೋಣ… ಏಕೆಂದರೆ “ಮನುಷ್ಯರು ತೋರುವ ಪ್ರೀತಿ ನಿಷ್ಕಲ್ಮಶವಾಗಿರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಾಣಿಗಳು ತಮ್ಮ ಮನೆಯವರ ಮೇಲೆ ತೋರುವ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ. ಅವುಗಳು ತೋರುವ ಪ್ರೀತಿ ನಿಷ್ಕಲ್ಮಶವಾಗಿರುತ್ತದೆ…”

. . . . . . . . .

✍️ಉಲ್ಲಾಸ್ ಕಜ್ಜೋಡಿ

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading