“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜೂ.29)ದಿಂದ ಶನಿವಾರ(ಜು.04)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ಈ ವಾರದ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ ಹೇಗಿತ್ತು? ; ರಬ್ಬರ್ ಮತ್ತು ಕೊಬ್ಬರಿ ಬೆಲೆಯಲ್ಲಿ ಭಾರಿ ಬದಲಾವಣೆ ; ಅಡಿಕೆ ಹಾಗೂ ಕಾಳುಮೆಣಸು ಧಾರಣೆಯಲ್ಲಾದ ಏರಿಳಿತಗಳೇನು..!?

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜೂನ್ 29 ಸೋಮವಾರದಿಂದ ಜುಲೈ 04 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರದ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 29 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 470 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 335 ರಿಂದ ಗರಿಷ್ಠ 380 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 260 ರಿಂದ ಗರಿಷ್ಠ 280 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 235 ರಿಂದ ಗರಿಷ್ಠ 265 ರೂಪಾಯಿ ಇತ್ತು. ಜೂನ್ 30 ಮಂಗಳವಾರದಂದು, ಜುಲೈ 01 ಬುಧವಾರದಂದು, ಜುಲೈ 02 ಗುರುವಾರದಂದು, ಜುಲೈ 03 ಶುಕ್ರವಾರದಂದು ಹಾಗೂ ಜುಲೈ 04 ಶನಿವಾರದಂದು ಕೂಡ ಹೊಸ ಅಡಿಕೆ, ಹಳೆ ಅಡಿಕೆ ಸೇರಿದಂತೆ ಅಡಿಕೆಯ ಎಲ್ಲಾ ಪ್ರಮುಖ ಹಾಗೂ ಉಪ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ರೀತಿಯ ಏರಿಳಿತಗಳು ದಾಖಲಾಗದೇ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು.

ಇನ್ನು ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಈ ವಾರ ಉಂಟಾದ ಏರಿಳಿತಗಳನ್ನು ನೋಡುವುದಾದರೆ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 29 ಸೋಮವಾರದಂದು ಕಾಳುಮೆಣಸು ಕನಿಷ್ಠ 595 ರಿಂದ ಗರಿಷ್ಠ 685 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 125 ರಿಂದ ಗರಿಷ್ಠ 150 ರೂಪಾಯಿ ಇತ್ತು. ಜೂನ್ 30 ಮಂಗಳವಾರದಂದು ವಹಿವಾಟು ಸಂಪೂರ್ಣ ಶಾಂತವಾಗಿದ್ದು, ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಸೋಮವಾರ(ಜೂ.29)ದ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಜುಲೈ 01 ಬುಧವಾರದಂದು ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದ್ದು, ಕಾಳುಮೆಣಸು ಧಾರಣೆಯಲ್ಲಿ ಕೊಂಚ ಇಳಿಮುಖ ಕಂಡುಬಂದಿದ್ದು, ಪ್ರತೀ ಕೆಜಿಗೆ ಕನಿಷ್ಠ ದರದಲ್ಲಿ 10 ರೂಪಾಯಿ ಇಳಿಕೆಯಾಗಿ 585 ರೂಪಾಯಿಗೆ ಹಾಗೂ ಗರಿಷ್ಠ ದರದಲ್ಲಿ 5 ರೂಪಾಯಿ ಇಳಿಕೆಯಾಗಿ 680 ರೂಪಾಯಿಗೆ ತಲುಪಿತ್ತು. ಇನ್ನು ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಜುಲೈ 02 ಗುರುವಾರದಂದೂ ಕೂಡ ಕಾಳುಮೆಣಸು ಧಾರಣೆಯಲ್ಲಿ ಕನಿಷ್ಠ ದರದಲ್ಲಿ 5 ರೂಪಾಯಿ ಇಳಿಕೆಯಾಗಿ 580 ರೂಪಾಯಿಗೆ ತಲುಪಿದ್ದರೆ ಗರಿಷ್ಠ ದರದಲ್ಲೂ 5 ರೂಪಾಯಿ ಇಳಿಕೆಯಾಗಿ 675 ರೂಪಾಯಿಗೆ ಬಂದು ತಲುಪಿತ್ತು. ಆದರೆ ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳು ಯಾವುದೇ ಏರಿಳಿತವಿಲ್ಲದೇ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದವು. ಜುಲೈ 03 ಶುಕ್ರವಾರದಂದು ಕೊಬ್ಬರಿ ಧಾರಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಕಳೆದ ಕೆಲವು ದಿನಗಳಿಂದ ಕನಿಷ್ಠ 125 ರಿಂದ ಗರಿಷ್ಠ 150 ರೂಪಾಯಿಗಳ ಆಸುಪಾಸಿನಲ್ಲಿದ್ದ ಕೊಬ್ಬರಿ ಧಾರಣೆ ಕನಿಷ್ಠ 130 ರಿಂದ ಗರಿಷ್ಠ 155 ರೂಪಾಯಿಗಳಿಗೆ ಏರಿಕೆಯಾಗುವ ಮೂಲಕ ತೆಂಗು ಬೆಳೆಗಾರರಲ್ಲಿ ಹೊಸ ಭರವಸೆಯನ್ನು ಮೂಡಿಸಿತ್ತು. ಇನ್ನು ಕಾಳುಮೆಣಸು ಧಾರಣೆಯಲ್ಲಿ ಇಳಿಮುಖದ ಹಾದಿ ಮುಂದುವರೆದಿದ್ದು, ಕನಿಷ್ಠ ದರ 580ರಲ್ಲೇ ಸ್ಥಿರವಾಗಿದ್ದರೂ ಗರಿಷ್ಠ ದರದಲ್ಲಿ 5 ರೂಪಾಯಿ ಇಳಿಕೆಯಾಗಿ 670 ರೂಪಾಯಿಗೆ ಬಂದು ತಲುಪಿತ್ತು. ಕೊಕ್ಕೋ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಇನ್ನು ವಾರದ ಕೊನೆಯ ದಿನವಾದ ಜುಲೈ 04 ಶನಿವಾರದಂದು ಕ್ಯಾಂಪ್ಕೋ ಇತರೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸಂಪೂರ್ಣ ಶಾಂತ ವಾತಾವರಣ ಕಂಡುಬಂದಿದ್ದು, ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ರೀತಿಯ ಬದಲಾವಣೆಯಿಲ್ಲದೇ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದವು. ಅಂತಿಮವಾಗಿ ವಾರಾಂತ್ಯದಲ್ಲಿ ಕಾಳುಮೆಣಸು ಕನಿಷ್ಠ 580 ರಿಂದ ಗರಿಷ್ಠ 670 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 130 ರಿಂದ ಗರಿಷ್ಠ 155 ರೂಪಾಯಿಗಳಿಗೆ ಬಂದು ತಲುಪಿತ್ತು.

ಇನ್ನು ಕೊನೆಯದಾಗಿ ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಈ ವಾರ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 29 ಸೋಮವಾರದಂದು ಗ್ರೇಡ್ ರಬ್ಬರ್ 262 ರೂಪಾಯಿ, ಲಾಟ್ ರಬ್ಬರ್ 223 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 153 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 144 ರೂಪಾಯಿ ಇತ್ತು. ಜೂನ್ 30 ಮಂಗಳವಾರದಂದು ರಬ್ಬರ್ ಧಾರಣೆಯಲ್ಲಿ ಮಿಶ್ರ ಪ್ರವೃತ್ತಿಯೊಂದಿಗೆ ಕೊಂಚ ಚೇತರಿಕೆ ಕಂಡುಬಂದಿದ್ದು, ಗ್ರೇಡ್ ಮತ್ತು ಲಾಟ್ ರಬ್ಬರ್ ಧಾರಣೆಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸ್ಕ್ರ್ಯಾಪ್ ನಲ್ಲಿ ತಲಾ 1 ರೂಪಾಯಿಗಳಷ್ಟು ಏರಿಕೆ ಕಂಡುಬಂದಿತ್ತು. ಜುಲೈ 01 ಬುಧವಾರದಂದು ರಬ್ಬರ್ ಧಾರಣೆಯಲ್ಲಿ ಸಕಾರಾತ್ಮಕ ಚಲನವಲನ ದಾಖಲಾಗಿದ್ದು, ಗ್ರೇಡ್ ರಬ್ಬರ್ ಧಾರಣೆಯು ಕೆಜಿಗೆ 1 ರೂಪಾಯಿ ಏರಿಕೆ ಕಾಣುವ ಮೂಲಕ 263 ರೂಪಾಯಿಗೆ, ಲಾಟ್ ರಬ್ಬರ್ 50 ಪೈಸೆ ಹೆಚ್ಚಳವಾಗುವ ಮೂಲಕ 223.50 ರೂಪಾಯಿಗೆ ತಲುಪಿದರೆ ಸ್ಕ್ರ್ಯಾಪ್ ಪ್ರಥಮ ದರ್ಜೆ 1 ರೂಪಾಯಿ ಏರಿಕೆಯಾಗುವ ಮೂಲಕ 155 ರೂಪಾಯಿಗೆ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 1 ರೂಪಾಯಿ ಏರಿಕೆಯಾಗುವ ಮೂಲಕ 146 ರೂಪಾಯಿಗೆ ತಲುಪಿತ್ತು. ಜುಲೈ 02 ಗುರುವಾರದಂದು ಕೂಡ ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಏರಿಕೆ ದಾಖಲಾಗಿದ್ದು, ಗ್ರೇಡ್ ರಬ್ಬರ್ 1 ರೂಪಾಯಿ ಏರಿಕೆ ಕಂಡು 264 ರೂಪಾಯಿಗೆ ತಲುಪಿದರೆ ಲಾಟ್ ರಬ್ಬರ್ 50 ಪೈಸೆ ಹೆಚ್ಚಳವಾಗಿ 224 ರೂಪಾಯಿಗೆ ತಲುಪಿತ್ತು. ಸ್ಕ್ರ್ಯಾಪ್ ರಬ್ಬರ್ ವಿಭಾಗದಲ್ಲೂ ಏರಿಕೆ ಕಂಡುಬಂದಿದ್ದು, ಪ್ರಥಮ ದರ್ಜೆ ಸ್ಕ್ರ್ಯಾಪ್ 1 ರೂಪಾಯಿ ಏರಿಕೆಯಾಗುವ ಮೂಲಕ 156 ರೂಪಾಯಿಗೆ ತಲುಪಿದರೆ ದ್ವಿತೀಯ ದರ್ಜೆ ಸ್ಕ್ರ್ಯಾಪ್ ಕೂಡ 1 ರೂಪಾಯಿ ಏರಿಕೆಯಾಗುವ ಮೂಲಕ 147 ರೂಪಾಯಿಗೆ ತಲುಪಿತ್ತು. ಇನ್ನು ಜುಲೈ 03 ಶುಕ್ರವಾರದಂದು ಕೂಡ ಲಾಟ್ ರಬ್ಬರ್ 1 ರೂಪಾಯಿ ಏರಿಕೆ ಕಂಡು 225 ರೂಪಾಯಿಗೆ ತಲುಪಿದರೆ ಗ್ರೇಡ್ ರಬ್ಬರ್ 50 ಪೈಸೆ ಏರಿಕೆಯಾಗಿ 264.50 ರೂಪಾಯಿಗೆ ತಲುಪಿತ್ತು. ಹಾಗೆಯೇ ಸ್ಕ್ರ್ಯಾಪ್ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ರಬ್ಬರ್ ನಲ್ಲಿ ತಲಾ 50 ಪೈಸೆ ಏರಿಕೆ ಕಂಡುಬಂದಿತ್ತು. ಇನ್ನು ವಾರದ ಕೊನೆಯ ದಿನವಾದ ಜುಲೈ 04 ಶನಿವಾರದಂದು ಗ್ರೇಡ್ ರಬ್ಬರ್ 50 ಪೈಸೆ ಏರಿಕೆಯಾಗಿ 265 ರೂಪಾಯಿಗೆ ತಲುಪಿದರೆ ಲಾಟ್ ರಬ್ಬರ್ ಜುಲೈ 03ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಸ್ಕ್ರ್ಯಾಪ್ ಪ್ರಥಮ ದರ್ಜೆ 50 ಪೈಸೆ ಏರಿಕೆಯಾಗಿ 157 ರೂಪಾಯಿಗೆ ತಲುಪಿದರೆ ಸ್ಕ್ರ್ಯಾಪ್ ದ್ವಿತೀಯ ದರ್ಜೆ ಜುಲೈ 03ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಅಂತಿಮವಾಗಿ ವಾರಾಂತ್ಯದಲ್ಲಿ ಗ್ರೇಡ್ ರಬ್ಬರ್ 265 ರೂಪಾಯಿ, ಲಾಟ್ ರಬ್ಬರ್ 225 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 157 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 147.5 ರೂಪಾಯಿಗಳಿಗೆ ಬಂದು ತಲುಪಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯು ತನ್ನೆಲ್ಲಾ ವಿಭಾಗಗಳಲ್ಲೂ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ, ಕಾಳುಮೆಣಸು ಧಾರಣೆಯು ವಾರದ ಆರಂಭದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಂತೆ ಭಾಸವಾದರೂ ನಂತರ ವಾರಪೂರ್ತಿ ನಿರಂತರವಾಗಿ ಇಳಿಕೆಯ ಹಾದಿಯಲ್ಲೇ ಸಾಗಿ ವಾರಾಂತ್ಯದಲ್ಲಿ ಸ್ಥಿರತೆಯತ್ತ ಮುಖ ಮಾಡಿತ್ತು. ಇನ್ನು ಕೊಬ್ಬರಿ ಧಾರಣೆಯು ವಾರಪೂರ್ತಿ ಸ್ಥಿರತೆಯ ಹಾದಿಯಲ್ಲೇ ಧೃಢವಾಗಿ ನಿಂತಿದ್ದರೂ ವಾರದ ಕೊನೆಯಲ್ಲೊಮ್ಮೆ ಭರ್ಜರಿ ಏರಿಕೆಯತ್ತ ಸಾಗಿ ನಂತರ ಸ್ಥಿರತೆಯತ್ತ ಮುಖ ಮಾಡಿತ್ತು. ಆದರೆ ಕೊಕ್ಕೋ ಧಾರಣೆಯು ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ರಬ್ಬರ್ ಧಾರಣೆಯು ವಾರದ ಪ್ರಾರಂಭದಲ್ಲಿ ಮಿಶ್ರ ಪ್ರವೃತ್ತಿಯ ಏರಿಕೆಯಂತೆ ಕಂಡುಬಂದರೂ ನಂತರ ವಾರಪೂರ್ತಿ ಏರಿಕೆಯ ಹಾದಿಯಲ್ಲಿ ಸಕಾರಾತ್ಮಕ ಚಲನವಲನ ದಾಖಲಿಸಿತ್ತು.

ಕೃಷಿಕರ ಗಮನಕ್ಕೆ :ವರದಿಯಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಕಳೆದ ವಾರದ(ಜೂನ್ 29 ರಿಂದ ಜುಲೈ 04) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಗಳ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading