ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ವಿಶೇಷ – ಯೋಗ ಸಾಧಕಿ ಬಹುಮುಖ ಪ್ರತಿಭೆ ಸೋನಾ ಅಡ್ಕಾರು ; ನೃತ್ಯ, ಹುಲಿವೇಷ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಜನಮೆಚ್ಚುಗೆಯನ್ನು ಪಡೆದ ಬಾಲ ಪ್ರತಿಭೆ ; ಬರಹ : ಉಲ್ಲಾಸ್ ಕಜ್ಜೋಡಿ

ಇಂದು ಜೂನ್ 21 “ಅಂತಾರಾಷ್ಟ್ರೀಯ ಯೋಗ ದಿನಾಚರಣೆ.” ಇಂದು ದೇಶಾದ್ಯಂತ ಲಕ್ಷಾಂತರ ಜನರು ಯೋಗಾಸನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಯೋಗ ದಿನಾಚರಣೆಯನ್ನು ಬಹಳ ಗೌರವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಇಂತಹ ಸುಸಂದರ್ಭದಲ್ಲಿ ಬಾಲ್ಯದಲ್ಲೇ ಯೋಗಾಸನದಲ್ಲಿ ಆಸಕ್ತಿಯನ್ನು ಹೊಂದಿ ತರಬೇತಿಯನ್ನು ಪಡೆದು ಹಲವಾರು ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ಯೋಗಾಸನ ಕ್ಷೇತ್ರದಲ್ಲಿ ಮಾತ್ರವಲ್ಲದೇ ನೃತ್ಯ, ಹುಲಿವೇಷ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಜನಮೆಚ್ಚುಗೆಯನ್ನು ಗಳಿಸಿ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಬಾಲ ಪ್ರತಿಭೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

ಈ ಬಾಲ ಪ್ರತಿಭೆಯ ಹೆಸರು ಸೋನಾ ಅಡ್ಕಾರು, ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರು ಮನೆತನದ ಶ್ರೀ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ಅಡ್ಕಾರು ದಂಪತಿಗಳ ಪುತ್ರಿಯಾಗಿರುವ ಇವರು ಪ್ರಸ್ತುತ ಸುಳ್ಯದ ಮಹಾತ್ಮಾ ಗಾಂಧಿ ಮಲ್ನಾಡ್ ಆಂಗ್ಲಮಾಧ್ಯಮ ಪ್ರೌಢಶಾಲೆ ಕೊಡಿಯಾಲಬೈಲು ಇಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತನ್ನ ತಂದೆ, ತಾಯಿ ಹಾಗೂ ಸಹೋದರ ಹಂಶಿತ್‌ನ ಪ್ರೋತ್ಸಾಹದೊಂದಿಗೆ ನಾಲ್ಕು ವರ್ಷ ವಯಸ್ಸಿನಲ್ಲೇ ನೃತ್ಯ, ಹುಲಿವೇಷ, ಕುಣಿತ, ಡ್ರಾಯಿಂಗ್ ಹಾಗೂ ಯೋಗ ಪ್ರದರ್ಶನದಲ್ಲಿ ಆಸಕ್ತಿಯನ್ನು ಹೊಂದಿ ನೃತ್ಯ ಗುರುಗಳಾದ ಸಂತೋಷ್ ಮಂಗಳೂರು ಇವರಲ್ಲಿ ನೃತ್ಯಾಭ್ಯಾಸವನ್ನು ಪ್ರಾರಂಭಿಸಿ ಪ್ರಸ್ತುತ ತರುಣ್‌ರಾಜ್ ಮಂಗಳೂರು ಇವರ ತರುಣ್ ಡ್ಯಾನ್ಸ್ ಯುನಿಟ್ ಮಂಗಳೂರು ಮತ್ತು ಸುಳ್ಯದಲ್ಲಿ ತರಬೇತಿ ಪಡೆಯುತ್ತಿದ್ದು, ಜೊತೆಗೆ ಹುಲಿವೇಷ ಕುಣಿತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಇವರು ತನ್ನ ಪ್ರಥಮ ಯೋಗಾಭ್ಯಾಸವನ್ನು ಯೋಗಗುರು ಸಂತೋಷ್ ಮುಂಡೋಕಜೆ ಅವರಲ್ಲಿ ಪಡೆದು ಇದೀಗ ಹೆಚ್ಚಿನ ಯೋಗಾಭ್ಯಾಸವನ್ನು ಗುರುಗಳಾದ ನವೀನ್ ಪುತ್ತೂರು ಮತ್ತು ಮುಖ್ಯ ಗುರುಗಳಾದ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಕಡೂರಿನ ನವೀನ್ ಕುಮಾರ್ ಕಡೂರು, ರಂಜಿತ್, ವಿಷ್ಣು, ಕಿಶೋರ್ ಮತ್ತು ತಂಡದಿಂದ ಪಡೆಯುತ್ತಿದ್ದಾರೆ. ಈಗಾಗಲೇ ಹಲವಾರು ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸೋನಾ ಅಡ್ಕಾರು ಇತ್ತೀಚೆಗೆ 2025-2026ನೇ ಸಾಲಿನಲ್ಲಿ ಮಹಾರಾಷ್ಟ್ರದ ಸಂಗಮ್‌ನರ್ ನಲ್ಲಿ ನಡೆದ KYSA(Yoga Bharath) ರಾಷ್ಟ್ರೀಯ ಯೋಗ ಕೂಟದಲ್ಲಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, 2025-2026ರಲ್ಲಿ ಪಶ್ಚಿಮ ಬಂಗಾಳದ ದಿಘ ಎಂಬಲ್ಲಿ ನಡೆದ ರಾಷ್ಟ್ರೀಯ ಮಟ್ಟದ 69ನೇ ವರ್ಷದ 14ರ ವಯೋಮಿತಿಯ ಬಾಲಕಿಯರ SGFI(School Games Federation Of India) ಯೋಗಾಸನಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕಂಚಿನ ಪದಕದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, 2026ರಲ್ಲಿ ಅಂಡಮಾನ್‌ ನಲ್ಲಿ ನಡೆದ 07ನೇ ಅಂತರಾಷ್ಟ್ರೀಯ ಮಟ್ಟದ 12 ವರ್ಷ ವಯೋಮಿತಿಯ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ 2ನೇ ಸ್ಥಾನವನ್ನು ಪಡೆದಿರುತ್ತಾರೆ. ಬಾಲಕಿಯರ ವಿಭಾಗದ ರಾಜ್ಯಮಟ್ಟದ ಮುಕ್ತ ಯೋಗಾಸನ ಭೂಮನಾಸನದಲ್ಲಿ 02 ಗಂಟೆ 02 ನಿಮಿಷ, 05 ಸೆಕೆಂಡು, 83 ಮಿ.ಲಿ ಸೆಕೆಂಡುಗಳ ಕಾಲ ನಿಂತು ಪ್ರತಿಷ್ಠಿತ “ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ” ಸೇರ್ಪಡೆಯಾದ ಇವರು ನೃತ್ಯ ಲೋಕದಲ್ಲೂ ಸಾಧನೆಗೈಯುತ್ತಿದ್ದು, ಸೋಲೋ ಡ್ಯಾನ್ಸ‌ರ್ ಸ್ಪರ್ಧೆ, ನ್ಯಾಷನಲ್ ಲೆವೆಲ್ ಸೋಲೋ ಡ್ಯಾನ್ಸ್ ಹೀಗೆ ಹಲವಾರು ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದ್ದು, ಮಂಗಳೂರಿನ ಜನಪ್ರಿಯ ಟಿ.ವಿ ಮಾಧ್ಯಮಗಳಾದ ನಮ್ಮ ಟಿ.ವಿ ಹಾಗೂ ನಮ್ಮ ಕುಡ್ಲ ಚಾನೆಲ್ ಗಳ ಡ್ಯಾನ್ಸ್ ಷೋ ಗಳಲ್ಲಿ ಭಾಗವಹಿಸಿರುತ್ತಾರೆ. ಅದರೊಂದಿಗೆ ಹುಲಿವೇಷ ಸ್ಪರ್ಧೆಯಲ್ಲೂ ಆಸಕ್ತಿಯನ್ನು ಹೊಂದಿರುವ ಸೋನಾ ಅಡ್ಕಾರು 2022 ಮತ್ತು 2023ರಲ್ಲಿ ದಸರಾ ಹುಲಿವೇಷ ಸ್ಪರ್ಧೆಯಲ್ಲಿ M.F.C ಮಂಗಳೂರು ತಂಡದಲ್ಲಿ ಮಂಗಳೂರಿನ ಪಿಲಿ ಪರ್ಣ, ಪಿಲಿ ನಲಿಕೆ, ಪುತ್ತೂರಿನ ಪಿಲಿ ರಂಗ್, ಪಿಲಿ ಗೊಬ್ಬು ಸ್ಪರ್ಧೆಯಲ್ಲಿ ಭಾಗವಹಿಸಿ “ಚಿಕ್ಕ ಹುಲಿ ಪ್ರಶಸ್ತಿ”ಯನ್ನು ಪಡೆದಿರುತ್ತಾರೆ. ಇವರ ತಂಡ 2023ರಲ್ಲಿ 04 ಸ್ಪರ್ಧೆಗಳಲ್ಲಿ ಭಾಗವಹಿಸಿ, 03 ಸ್ಪರ್ಧೆಗಳಲ್ಲಿ ಗೆಲುವನ್ನು ಸಾಧಿಸಿತ್ತು.

ಚಿಕ್ಕ ವಯಸ್ಸಿನಲ್ಲಿಯೇ ಇವರಲ್ಲಿರುವ ಬಹುಮುಖ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಅದರೊಂದಿಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಇವರ ಸಾಧನೆಯನ್ನರಸಿ ಬಂದಿದ್ದು, ನೃತ್ಯ ವೈಭವ, ಚಿಕ್ಕಹುಲಿ ಪ್ರಶಸ್ತಿ, ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ, ಕೆ.ವಿ.ಜಿ ಪ್ರಶಸ್ತಿ, ಸ್ವಸ್ತಿಕ್ ಕಲಾ ಪ್ರಶಸ್ತಿ, ಮಿನುಗುತಾರೆ, ಯೋಗ ಮಾಣಿಕ್ಯ, ನೃತ್ಯ ಮಾಣಿಕ್ಯ, ರಾಣಿ ಕಿತ್ತೂರು ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರ, ಕಲಾರತ್ನ ಪ್ರಶಸ್ತಿ, ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಯೋಗ ಸ್ಟಾರ್ ಅವಾರ್ಡ್ ಹಾಗೂ ಇಂಟರ್ ನ್ಯಾಷನಲ್ ಸಂಸ್ಥೆಯಾದ ರೋಟರಿ ಮತ್ತು ಲಯನ್ಸ್ ಸಂಸ್ಥೆಯವರು ಗುರುತಿಸಿ ಸನ್ಮಾನಿಸಿದ್ದು, ಶಿವರಾಮ ಕಾರಂತ ಪ್ರಶಸ್ತಿ, ಸಮಾಜ ಸೇವಾ ಕ್ರೀಡಾ ರತ್ನ ಪ್ರಶಸ್ತಿ, ದಿ। ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಕರುನಾಡ ನಿಧಿ ಪ್ರಶಸ್ತಿ, ಕವಿಚಕ್ರವರ್ತಿ ಪಂಪ ಸದ್ಭಾವನಾ ರಾಜ್ಯ ಪ್ರಶಸ್ತಿ, ಕರುನಾಡ ಸಿರಿ ರಾಜ್ಯ ಪ್ರಶಸ್ತಿ, ಡಾ. ಬಿ ಆರ್ ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿರುತ್ತದೆ. 2026ರ ಉಡುಪಿ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವ ಪ್ರಶಸ್ತಿ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸೋನಾ ಅಡ್ಕಾರು ಇಲ್ಲಿಯವರೆಗೆ ಸುಮಾರು 300ಕ್ಕೂ ಹೆಚ್ಚು ಯೋಗ, ನೃತ್ಯ, ಹುಲಿಕುಣಿತ ಸೇರಿದಂತೆ ಮತ್ತಿತರ ಪ್ರದರ್ಶನಗಳನ್ನು ನೀಡಿ ಜನಮನ್ನಣೆಗೆ ಪಾತ್ರರಾಗಿದ್ದು, ಇವರ ಈ ಬಹುಮುಖ ಪ್ರತಿಭಾ ಸಾಧನೆಯ ಪಯಣ ಇದೇ ರೀತಿ ನಿರಂತರವಾಗಿ ಸಾಗುತ್ತಲೇ ಇರಲಿ ಎನ್ನುವ ಶುಭ ಹಾರೈಕೆಯೊಂದಿಗೆ ಯೋಗ ದಿನಾಚರಣೆಯ ಈ ವಿಶೇಷ ಬರಹಕ್ಕೆ ಪೂರ್ಣವಿರಾಮವನ್ನಿಡುತ್ತಿದ್ದೇವೆ… ಬರಹ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading