ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಿತು.
ಫೆ.20 ರಂದು ಹಸಿರುವಾಣಿ ಸಮರ್ಪಣೆಗೊಂಡು ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ತಂತ್ರಿಗಳ ಆಗಮನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಲಕ್ಷ್ಮಣ ಆಚಾರ್ಯ ಇವರ ಸಾರಥ್ಯದಲ್ಲಿ ಸ.ಕಿ.ಪ್ರಾ ಶಾಲೆ ಕರಂಗಲ್ಲು ಇಲ್ಲಿನ ವಿದ್ಯಾರ್ಥಿಗಳಿಂದ “ಏಕಾದಶಿ ಮಹಾತ್ಮೆ” ಯಕ್ಷಗಾನ ಪ್ರಸಂಗ, ಅಮರಯೋಗ ತರಬೇತಿ ಕೇಂದ್ರ ಗುತ್ತಿಗಾರು ಇಲ್ಲಿನ ವಿದ್ಯಾರ್ಥಿಗಳಿಂದ ಯೋಗಾಸನ ನಡೆಯಿತು. ನಂತರ __ ಇವರಿಂದ “ಗುಡಿ-ಜನರ ಜೀವನಾಡಿ” ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನಡೆದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ “ವಿನೋದಾವಳಿಗಳು” ಹಾಗೂ ಅಕ್ಷರಗಾನ ಸುಧೆ ತಂಡ ಕುಕ್ಕೆ ಸುಬ್ರಹ್ಮಣ್ಯ ಇವರಿಂದ “ಸಂಗೀತ ರಸಮಂಜರಿ” ಕಾರ್ಯಕ್ರಮ ನಡೆಯಿತು. ನಂತರ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ(ರಿ.) ಕಾಸರಗೋಡು ಇವರಿಂದ “ನರಕಾಸುರ ವಧೆ – ಗರುಡ ಗರ್ವಭಂಗ” ಯಕ್ಷಗಾನ ಗೊಂಬೆಯಾಟ ನಡೆಯಿತು. ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಫೆ.21 ರಂದು ಬೆಳಿಗ್ಗೆ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ದೀಪಾರಾಧನೆ, ಚೆಂಡೆವಾದನ, ರಾತ್ರಿ ಮಹಾಪೂಜೆ, ದೇವರಬಲಿ ಉತ್ಸವ, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಿತು. ಹಾಗೂ ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ ನಡೆಯಿತು. ಸಂಜೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಇವರಿಂದ ಶ್ರೀ ಸತ್ಯನಾರಾಯಣ ಸತ್ಯಕಥೆ ರೂಪಕ ಹಾಗೂ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.
ಫೆ.22 ರಂದು ಬೆಳಿಗ್ಗೆ 6:00 ರಿಂದ ಸಾಯಂಕಾಲದವರೆಗೆ ಉಳ್ಳಾಗುಳು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ ಸಂಪನ್ನಗೊಂಡಿತು.(ವರದಿ : ಉಲ್ಲಾಸ್ ಕಜ್ಜೋಡಿ)