
ಆಲೆಟ್ಟಿ ಗ್ರಾಮ ಪಂಚಾಯತ್ ಒಂದಲ್ಲೊಂದು ಪ್ರಕರಣದಲ್ಲಿ ತನ್ನದೇ ಅದ ಇತಿಹಾಸವನ್ನು ಹೊಂದುತ್ತಿರುವ ವಿಚಾರ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. ಆಲೆಟ್ಟಿ ಗ್ರಾಮ ಪಂಚಾಯತಿನ 4 ನೇ ವಾರ್ಡ್ ಇದಕ್ಕೆ ಉತ್ತಮ ಉದಾಹರಣೆ. ಇದೇ ವಾರ್ಡಿನಲ್ಲಿ ಕೆಲವು ತಿಂಗಳುಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿ ಪರಿಸರ ಗಬ್ಬು ನಾರುತ್ತಿರುವ ಎರಡು ಪ್ರಕರಣಗಳು ಬಾರಿ ಸದ್ದು ಮಾಡಿದ್ದವು.

ಇಷ್ಟಾದರೂ ಆಲೆಟ್ಟಿ ಗ್ರಾಮ ಪಂಚಾಯತ್ ಎಚ್ಚೆತ್ತುಕೊಳ್ಳದೆ ನಿದ್ರೆಗೆ ಜಾರಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ನಾಗಪಟ್ಟನ ಎಂಬಲ್ಲಿ ಕರ್ನಾಟಕ ಸರಕಾರದ ನಿರೀಕ್ಷಣಾ ಮಂದಿರ ಇದ್ದು ಇದರ ಪಕ್ಕ ಮೋರಿಯೊಂದು ಇದ್ದು ಇದರ ಕಣಿಯಲ್ಲಿ ಕಸದ ರಾಶಿಯೇ ಬಿದ್ದಿರುವ ವಿಚಾರ ಮತ್ತೆ ಬೆಳಕಿಗೆ ಬಂದಿದೆ. ಆಲೆಟ್ಟಿ ಗ್ರಾಮ ಪಂಚಾಯತಿನ 4 ನೇ ವಾರ್ಡಿನಲ್ಲಿ ಒಟ್ಟು ಮೂರು ಮಂದಿ ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ಆಲೆಟ್ಟಿ ಗ್ರಾಮದಲ್ಲಿ ಪದೇ ಪದೇ ಕಸದ ಸಮಸ್ಯೆ ಕಂಡು ಬಂದರೂ ಇನ್ನೂ ಎಚ್ಚೆತ್ತುಕೊಳ್ಳದಿರುವುದು ದುರ್ದೈವದ ಸಂಗತಿ. ವಿಶೇಷವೆಂದರೆ ಆಲೆಟ್ಟಿ ಗ್ರಾ. ಪಂ.ನಲ್ಲಿ ಒಟ್ಟು 8 ವಾರ್ಡ್ ಇದ್ದು ಇದರಲ್ಲಿ 21 ಮಂದಿ ಪಂಚಾಯತ್ ಸದಸ್ಯರಿದ್ದಾರೆ. ಇನ್ನು ಆಲೆಟ್ಟಿ ಗ್ರಾಮಕ್ಕೆ ಒಂದು ಸಮರ್ಪಕವಾದ ಕಸ ವಿಲೇವಾರಿ ಘಟಕ ಇಲ್ಲದಿರುವುದು ಮತ್ತು ಪ್ರಯತ್ನ ಮಾಡದಿರುವುದು ಈ ಪಂಚಾಯತ್ ಸದಸ್ಯರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ವರದಿಯ ಬಳಿಕವಾದರು ಸುಸಜ್ಜಿತ ಘನತ್ಯಾಜ್ಯ ಘಟಕ ನಿರ್ಮಾಣ ಮಾಡುವರೇ ಎಂದು ಕಾದು ನೋಡಬೇಕಿದೆ.