ಸುಬ್ರಹ್ಮಣ್ಯ: ಆಧುನಿಕ ಯುಗದಲ್ಲಿ ಗಣಕಯಂತ್ರದ ಜ್ಞಾನ ಅತ್ಯವಶ್ಯಕ. ಗಣಕಯಂತ್ರಗಳು ಶಾಲೆ ಕಾಲೇಜುಗಳಿಗೆ ಅತ್ಯವಶ್ಯಕ. ಅದೇ ರೀತಿ ವಿದ್ಯಾಸಂಸ್ಥೆಗಳಲ್ಲಿ ವ್ಯವಸ್ಥಿತ ಸುಸಜ್ಜಿತ ಪ್ರಯೋಗಶಾಲೆ ಇರುವುದು ಅತ್ಯವಶ್ಯಕ. ಉತ್ಕೃಷ್ಠ ಮಟ್ಟದ ಸುಸಜ್ಜಿತ ಪ್ರಯೋಗಶಾಲೆಗಳು ಗಣಕಯಂತ್ರದ ಜ್ಞಾನಾರ್ಜನೆಗೆ ಅಡಿಕಲ್ಲಾಗಿವೆ. ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಜಿಲ್ಲೆಯಲ್ಲೇ ಹೆಸರು ಪಡೆದ ಶ್ರೇಷ್ಠ ಮಟ್ಟದ ಗಣಕಯಂತ್ರ ಮತ್ತು ವಿಜ್ಞಾನ ಪ್ರಯೋಗಶಾಲೆ ಇದೆ ಅನ್ನುವುದು ಗ್ರಾಮೀಣ ಭಾಗದ ಹೆಮ್ಮೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್‌ಎಸ್‌ಪಿಯು ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಹೇಳಿದರು.
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಎಸ್‌ಎಸ್‌ಪಿಯು ಕಾಲೇಜಿಗೆ ಡಾ.ಚಂದನ್ ಬೆಂಗಳೂರು ಅವರು ನೀಡಿದ 10 ಗಣಕಯಂತ್ರಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಈಗಾಗಲೇ ಶ್ರೀ ದೇವಳದಿಂದ ಒದಗಿಸಿದ ಗಣಕಯಂತ್ರದೊಂದಿಗೆ ಇದೀಗ ದಾನಿಗಳು ನೀಡಿದ ಹೊಸ ಗಣಕಯಂತ್ರಗಳು ಪ್ರಯೋಗಶಾಲೆಯನ್ನು ಅಲಂಕರಿಸಲಿವೆ.ಇವುಗಳ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು.ಕಾಲೇಜಿನಲ್ಲಿ ಈಗಾಗಲೇ 1000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಗಣಕವಿಜ್ಞಾನ ವಿಭಾಗವೂ ಇದೆ.ಅಲ್ಲದೆ ಕಲೆ ಮತ್ತು ವಾಣಿಜ್ಯ ವಿಭಾಗಕ್ಕೆ ಗಣಕಯಂತ್ರ ತರಬೇತಿಯು ನಡೆಯುತ್ತಿದೆ.ಈ ಸಂದರ್ಭದಲ್ಲಿ ನೂತನ ಗಣಕಯಂತ್ರಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿದೆ ಎಂದರು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ದಾನಿ ಡಾ.ಚಂದನ್ ಬೆಂಗಳೂರು ಅವರ ಸ್ನೇಹಿತ ಶ್ರೀವತ್ಸ ಬೆಂಗಳೂರು,ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಕೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ, ಗ್ರಂಥಪಾಲಕ ಜಯಪ್ರಕಾಶ್ ಆರ್.ವಿ, ಕುಕ್ಕೆ ದೇವಳದ ಶಿವಸುಬ್ರಹ್ಮಣ್ಯ ಭಟ್, ನಂದೀಶ್ ಕಟ್ರಮನೆ, ಪ್ರವೀಣ್ ಸುಬ್ರಹ್ಮಣ್ಯ, ಪ್ರಶಾಂತ್, ಎಸ್‌ಎಸ್‌ಪಿಯು ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಡಾ.ಚಂದನ್ ಬೆಂಗಳೂರು ಅವರು ಕುಕ್ಕೆ ದೇವಳದ ಆಡಳಿತದ ಕೆ.ಎಸ್.ಎಸ್ ಕಾಲೇಜಿಗೆ ಕೂಡಾ 10 ಗಣಕಯಂತ್ರ ಈ ಸಂದರ್ಭ ಹಸ್ತಾಂತರಿಸಿದರು.ಈ ಮೂಲಕ ಒಟ್ಟು 20 ಗಣಕಯಂತ್ರಗಳನ್ನು ಶ್ರೀ ದೇವಳದ ವಿದ್ಯಾಸಂಸ್ಥೆಗಳಿಗೆ ನೀಡಿದಂತಾಗಿದೆ.
- Thursday
- November 21st, 2024