Ad Widget

ಕೊಲ್ಲಮೊಗ್ರು: ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರಿಂದ ಅಹವಾಲು ಸಲ್ಲಿಕೆ: ಕಂದಾಯ-‘ಅರಣ್ಯ ಸಮಸ್ಯೆ ಪರಿಹಾರಕ್ಕೆ ಪೈಲಟ್ ಯೋಜನೆ’

ಸುಳ್ಯ:ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ,  ಭಾಗಷಃ ಅರಣ್ಯ ಸಮಸ್ಯೆ ಸೇರಿ  ಅರಣ್ಯ – ಕಂದಾಯ ನಡುವಿನ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ಇಲ್ಲಿ ಪೈಲಟ್ ಯೋಜನೆಯಡಿಯಲ್ಲಿ ಸರ್ವೆ ಮಾಡಿಸಿ ಇಲ್ಲಿನ ಅರಣ್ಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ. 3-4 ತಿಂಗಳ ಯೋಜನೆ ಅಡಿಯಲ್ಲಿ ಸರ್ವೆ ಪೂರ್ತಿ ಮಾಡಲಾಗುವುದು.  ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

. . . . .


ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತಾಲೂಕು ಆಡಳಿತ, ಸ್ಥಳೀಯಾಡಳಿತ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲಾ ವಠಾರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಗ್ರಾಮಸ್ಥರಿಂದ ಸಂವಾದ ಕಾರ್ಯಕ್ರಮದಲ್ಲಿ ಅವರು ಅಹವಾಲು ಆಲಿಸಿ ಮಾತನಾಡಿದರು. ಪೈಲಟ್ ಯೋಜನೆಯಡಿ ಇಲ್ಲಿನ ಭಾಗಷಃ ಅರಣ್ಯ ಸಮಸ್ಯೆ ಪರಿಹರಿಸಲಾಗುವುದು. ಬಳಿಕ ಇಲ್ಲಿನ ಇತರೆ ಸಮಸ್ಯೆಗಳ ಪರಿಹಾರಕ್ಕೂ ಇದು ಪೂರಕವಾಗಲಿದೆ ಎಂದರು.
ಗುಳಿಕಾನ ಸಂತ್ರಸ್ತರಿಗೆ ಕೂಡಲೇ ನಿವೇಶನ ನೀಡಿ;
ಕಲ್ಮಕಾರು ಗ್ರಾಮದ ಗುಳಿಕಾನದಲ್ಲಿ 9 ಕುಟುಂಬಗಳಿಗೆ ಪ್ರಾಕೃತಿಕ ವಿಕೋಪದಿಂದ ವಾಸಕ್ಕೆ ಬದಲಿ ನಿವೇಶನ ಗುರುತಿಸಲು ತಿಳಿಸಲಾಗಿದ್ದರೂ ಇನ್ನೂ ನಿವೇಶನ ನೀಡಿಲ್ಲ ಎಂದು  ಪ್ರಸ್ತಾಪಿಸಲಾಯಿತು. ಜಿಲ್ಲಾಧಿಕಾರಿ ಅವರು ಈ ಬಗ್ಗೆ ತಹಶಿಲ್ದಾರ್, ಅರಣ್ಯ ಇಲಾಖೆ ಅಧಿಕಾರಿ, ಸರ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಇಲ್ಲಿನ ಸಮಸ್ಯೆಗೆ ಎರಡು ದಿನದಲ್ಲಿ ಬಗಹರಿಸುವಂತೆ ಸೂಚಿಸಿ ಸಲಹೆಗಳನ್ನು ನೀಡಿದರು.
ರಜಾ ದಿನಗಳಲ್ಲಿ ಬಸ್ ಸೇವೆ ಲಭ್ಯ ಇಲ್ಲ, ಕೆಲವೆಡೆ ಬಸ್ ಸಂಚಾರ ಕಡಿತ ಮಾಡಿರುವ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಬಸ್ ಸೇವೆಯನ್ನು ಜನರ ಸಮಯಕ್ಕೆ ಸರಿಯಾಗಿ ವೇಳಾಪಟ್ಡಿ ತಯಾರಿಸುವಂತೆ, ರಜಾ ದಿನಗಳಲ್ಲೂ ಬಸ್ ಸೇವೆ ನೀಡುವಂತೆ ನಿರ್ದೇಶನ ನೀಡಿದರು. ಕೋವಿ ಡೆಪಾಸಿಟ್, ವರ್ಗಾವಣೆ, ಲೈಸೆನ್ಸ್ ಮುಂತಾದ ವಿಷಯದಲ್ಲಿ  ಸರಳೀಕರಣ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಸೇತುವೆ, ರಸ್ತೆಗಳು ಹಾನಿಗೊಂಡಿದ್ದು ತಾತ್ಕಾಲಿಕ ದುರಸ್ತಿ ಮಾತ್ರವೇ ನಡೆದಿದೆ ಎಂಬುದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ನೆರೆ ಹಾನಿ ಪರಿಹಾರ ಕಾಮಗಾರಿಗಳಿಗಾಗಿ ಈಗಾಗಲೇ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಇಲ್ಲಿನ ಬೇಡಿಕೆಯನ್ನೂ ಸೇರಿಸಲಾಗುವುದು. ಶಾಶ್ವತ ಪರಿಹಾರಕ್ಕೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಗ್ರಾಮ ಲೆಕ್ಕಾಧಿಕಾರಿಗಳ ಕೊರತೆ ಬಗ್ಗೆ ಕೇಳಿದಾಗ
ಜಿಲ್ಲೆಯಲ್ಲಿ 98 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಇದೆ. ಈಗಾಗಲೇ 50 ಹುದ್ದೆಗಳ ನೇಮಕಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆ ವೇಳೆ ಹೆಚ್ಚಿನ ಹುದ್ದೆಗಳು ಭರ್ತಿಯಾಗಲಿದೆ‌. ಆ ಸಂದರ್ಭದಲ್ಲಿ ಇಲ್ಲಿಗೂ ವಿಎ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಗಾಳಿಬೀಡು ರಸ್ತೆಗೆ ಕಾನೂನಿನಂತೆ ಪ್ರಯತ್ನ;
ಸುಬ್ರಹ್ಮಣ್ಯ-ಕಡಮಕಲ್ಲು- ಗಾಳಿಬೀಡು ರಸ್ತೆ ಸಂಪರ್ಕಕ್ಕೆ ಕಾನೂನಿನ ಅವಕಾಶಗಳನ್ನು ನೋಡಿಕೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೇಂದ್ರದಿಂದಲೂ ಅನುಮತಿ ಪಡೆದು ರಸ್ತೆ ಅಭಿವೃದ್ಧಿ ನಡೆಸಲು ಪ್ರಯತ್ನ ಮಾಡುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.   ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದರು. ಈ ಬಗ್ಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡುತ್ತೇನೆ ಎಂದು ಡಿಸಿ ತಿಳಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಈಗಾಗಲೇ ಬಾಳುಗೋಡಿನಲ್ಲಿ ಹೊಸ ಬಿ.ಎಸ್.ಎನ್.ಎಲ್. ಟವರ್ ನಿರ್ಮಾಣ ಕೆಲಸ ಆರಂಭಗೊಂಡಿದೆ ಎಂದರು.
ಖಾಸಗಿಯವರು ಮುಂದೆ ಬಂದಿಲ್ಲಿ ಟೂರಿಸಂ ಅಭಿವೃದ್ಧಿ ಸಾಧ್ಯ;
ಇಲ್ಲಿನ ಇಕೋ ಟೂರಿಸಂ ಅಭಿವೃದ್ಧಿಗೆ ಸರಕಾರದ ಜೊತೆ ಖಾಸಗಿಯವರ ಸಹಕಾರವೂ ಅಗತ್ಯ. ಖಾಸಗಿಯವರು ಇಲ್ಲಿ ಟೂರಿಸಂಗೆ ಪೂರಕವಾಗಿ ಸ್ಪಂದಿಸಲು ಮುಂದೆ ಬಂದಲ್ಲಿ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಟೂರಿಸಂ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗುವುದು ಎಂದರು. ಇದರಿಂದ ಇಲ್ಲಿನ ಸ್ಥಳೀಯ ಟೂರಿಸಂ ಸ್ಥಳಗಳ ಭೇಟಿಗೂ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಅಡಿಕೆ ಬದಲಿಗೆ ಯಾವ ಕೃಷಿ ತಿಳಿಸಿ; ವಿಶೇಷ ಶಿಬಿರ
ಇಲ್ಲಿನ ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗ ವ್ಯಾಪಕವಾಗಿರುವ ಬಗ್ಗೆ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಕೃಷಿಕರು ಹಾಗೂ ಅಧಿಕಾರಿಗಳು ಚರ್ಚೆ ನಡೆಸಿದರು. ಮಣ್ಣಿನ ಪರೀಕ್ಷೆ ನಡೆಸಿ ಇಲ್ಲಿ ಲಾಭದಾಯಕ ಯಾವ ಕೃಷಿ ಅಳವಡಿಸಬಹುದು ಎಂಬುದನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಶಿಬಿರ ನಡೆಸಿ ಕಂಡುಕೊಂಡು ಅದರಂತೆ ಕಾರ್ಯೋನ್ಮುಖರಾಗಿ ಎಂದು ತಿಳಿಸಿದರು.
ಕಲ್ಮಕಾರು ಸರಕಾರಿ ಶಾಲೆಯ ಅಡಿಸ್ಥಳ ಶಾಲೆ ಹೆಸರಿನಲ್ಲಿ ಇಲ್ಲ ಎಂಬ ಬಗ್ಗೆ ಪ್ರಸ್ತಾಪಿಸಲಾಯಿತು. ಈ ಬಗ್ಗೆ ವಿಚಾರಣೆ ವೇಳೆ ಹೆಸರು ಅದಲು-ಬದಲು ಆಗಿರುವುದು ತಿಳಿದಿದ್ದು, ಅದನ್ನು ಕೂಡಲೇ ಸರಿಪಡಿಸಲು ಜಿಲ್ಲಾಧಿಕಾರಿ  ಅಧಿಕಾರಿಗಳಿಗೆ ಸೂಚಿಸಿದರು.ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಕಟ್ಟಡದ ಅಡಿಸ್ಥಳ ದಾಖಲೆ ಮಾಡಬೇಕು, ಕಲ್ಮಕಾರು ಶಾಲೆಗೆ ಹೆಚ್ಚುವರಿ ಶಿಕ್ಷಕ ನೇಮಕಕ್ಕೂ ಒತ್ತಾಯಿಸಲಾಯಿತು.
ಮಿತ್ತೋಡಿ ಸೇತುವೆ ಪೂರ್ಣಗೊಳಿಸಿ;
ಮಿತ್ತೋಡಿ ಎಂಬಲ್ಲಿ 7 ವರ್ಷಗಳ ಹಿಂದೆ ಆರಂಭಗೊಂಡ ಸೇತುವೆ ಕಾಮಗಾರಿ ಪೂರ್ಣಗೊಂಡಿರದೇ ಇರುವ ಬಗ್ಗೆ ಪ್ರಸ್ತಾಪಿಸಲಾಯಿತು. ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಹೊರಠಾಣೆಗೆ ಪ್ರಸ್ತಾವನೆ;
ಕೊಲ್ಲಮೊಗ್ರು, ಹರಿಹರ ಭಾಗ ಸೇರಿದಂತೆ ಈ ಭಾಗದ ಜನರಿಗೆ ಪ್ರಯೋಜನಕ್ಕಾಗಿ ಗುತ್ತಿಗಾರಿನಲ್ಲಿ ಪೊಲೀಸ್ ಹೊರಠಾಣೆ ಆರಂಭಕ್ಕೆ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಎಸ್ಪಿ ರಿಷ್ಯಂತ್ ಉತ್ತರಿಸಿದರು.
  ಹರಿಹರ ಪಲ್ಲತ್ತಡ್ಕದಲ್ಲಿ ಮುಚ್ಚಿರುವ ಪದವಿ ಪೂರ್ವ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮಕೈಗೊಳ್ಳುವಂತೆ, ಕೊಲ್ಲಮೊಗ್ರುವಿಗೆ ಆಂಬುಲೆನ್ಸ್ ಒದಗಿಸುವಂತೆ, ಕೊಲ್ಲಮೊಗ್ರು, ಹರಿಹರಸಲ್ಲಿ  ಸಾರ್ವಜನಿಕ ಆಟದ ಮೈದಾನಕ್ಕೆ ಜಾಗ ಒದಗಿಸುವಂತೆ ಸೇರಿದಂತೆ ವಿವಿಧ ಬೇಡಿಕೆ, ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು. ಅಧಿಕಾರಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹಾರ ತಿಳಿಸಿದರು.
ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ತಹಶಿಲ್ದಾರ್ ಮಂಜುನಾಥ್, ಡಿಎಪ್ಒ ಆಂಟೋನಿ ಮರಿಯಪ್ಪ, ಕೊಲ್ಲಮೊಗ್ರು ಗ್ರಾ.ಪಂ‌. ಅಧ್ಯಕ್ಷೆ ಜಯಶ್ರೀ ಚಾಂತಾಳ, ಹರಿಹರ ಗ್ರಾ.ಪಂ. ಅಧ್ಯಕ್ಷ ವಿಜಯ ಅಂಙಣ ಮತ್ತಿತರರು ಉಪಸ್ಥಿತರಿದ್ದರು.
ಡಾ.ಸೋಮಶೇಖರ ಕಟ್ಟೆಮನೆ, ಡಿ.ಎಸ್.ಹರ್ಷಕುಮಾರ್ ದೇವಜನ, ಉದಯ ಶಿವಾಲ, ಮಾಧವ ಚಾಂತಾಳ, ಜಯಂತ ಬಾಳುಗೋಡು, ಸತೀಶ್ ಟಿ.ಎನ್, ಅಶ್ವತ್ ಯಾಲದಾಳ, ಪುಷ್ಪರಾಜ ಪಡ್ಪು, ವಿನೂಪ್ ಮಲ್ಲರ, ಸತೀಶ್ ಕೊಮ್ಮೆಮನೆ, ಹಿಮ್ಮತ್ ಕೆ.ಸಿ, ಪ್ರದೀಪ್ ಕುಮಾರ್ ಕೆ.ಎಲ್, ಶೇಖರ ಕೊಂದಾಳ, ಡ್ಯಾನಿ ಯಾಲದಾಳ,ರಾಧಾಕೃಷ್ಣ ಕಲ್ಮಕಾರು ಮತ್ತಿತರರು ಊರಿನ ಪ್ರಮುಖ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ದುರ್ಗಾ ಕುಮಾರ್ ನಾಯರ್ ಕೆರೆ ಸಂವಾದ ಕಾರ್ಯಕ್ರಮ ನಿರ್ವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!