
2022 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ನಡೆದು ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರ ಭವಿಷ್ಯ ತೂಗು ಉಯ್ಯಾಲೆಯಂತಾಗಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ನಮಗೆ ಅನ್ಯಾಯವಾಗಿದೆ ಎಂದು ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ರಾಜ್ಯ ಉಚ್ಛನ್ಯಾಯಾಲಯ ತನಿಖೆ ನಡೆಸಿ ಆದೇಶ ಮಾಡಿ ನೇಮಕಾತಿ ಸರಿಯಾಗಿದೆ ಎಂದು ಆದೇಶ ನೀಡಿದ್ದರು. ಈ ಆದೇಶದನ್ವಯ ರಾಜ್ಯದಲ್ಲಿ ಒಟ್ಟು 11494 ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಸುಳ್ಯ ತಾಲೂಕಿನ ವಿವಿಧ ಶಾಲೆಗಳಿಗೆ 39 ಶಿಕ್ಷಕರು ಆಗಮಿಸಿದ್ದರು.
ಇದೀಗ ಮತ್ತೆ ವಂಚಿತ ಅಭ್ಯರ್ಥಿಗಳು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸರಿಯಾಗಿಲ್ಲ ಈ ಹಿಂದಿನ ಪಟ್ಟಿಯಲ್ಲಿದ್ದರೂ ನಮ್ಮನ್ನು ಕೈಬಿಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಜ.22 ರಂದು ಮಧ್ಯಂತರ ಆದೇಶ ಮಾಡಿ ನೇಮಕಾತಿಗೆ ತಡೆ ನೀಡಿದ್ದು ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರ ಭವಿಷ್ಯ ತೂಗುಯ್ಯಾಲೆಯಲ್ಲಿ ಇರುವಂತಾಗಿದೆ. ನ್ಯಾಯಾಲಯದ ಆದೇಶದಂತೆ ಶಿಕ್ಷಣ ಇಲಾಖೆ ನೇಮಕಾತಿಗೊಂಡ ಶಿಕ್ಷಕರಿಂದ ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತೇನೆಂದು ಸಹಿ ಪಡೆದುಕೊಂಡಿದ್ದಾರೆ.