ಬರಹ : ಡಾ. ಮುರಲೀ ಮೋಹನ್ ಚೂಂತಾರು
ನಾಲಗೆ ಕ್ಯಾನ್ಸರ್ ಎನ್ನುವುದು ಬಾಯಿಯ ಕ್ಯಾನ್ಸರ್‍ನ ಒಂದು ಉಪ ವಿಂಗಡಣೆಯಾಗಿರುತ್ತದೆ. ಅದರೆ ಬಾಯಿಯ ಇತರ ಭಾಗಗಳಾದ ದವಡೆ, ಕೆನ್ನೆ, ತುಟಿ, ಅಂಗಳ ಮುಂತಾದ ಭಾಗದ ಕ್ಯಾನ್ಸರ್‍ಗಳಿಗಿಂತ ನಾಲಗೆ ಕ್ಯಾನ್ಸರ್ ಬಹಳ ಅಪಾಯಕಾರಿ. ಸಾಮಾನ್ಯವಾಗಿ ಕ್ಯಾನ್ಸರ್ ರೋಗದ ತ್ರೀವ್ರತೆಯನ್ನು ಗಡ್ಡೆಯ ಗಾತ್ರ ಮತ್ತು ಜೀವಕೋಶಗಳ ರಚನೆಯ ಮೇಲೆ ನಿರ್ಧರಿಸಲಾಗುತ್ತದೆ. ಆದರೆ ನಾಲಗೆ ಕ್ಯಾನ್ಸರ್ ಇದಕ್ಕೆ ತದ್ವಿರುದ್ದವಾಗಿ ವರ್ತಿಸುತ್ತದೆ. ಅತೀ ಸಣ್ಣ ಕ್ಯಾನ್ಸರ್ ಗಡ್ಡೆಯೂ ಮಾರಣಾಂತಿಕವಾಗುವ ಮತ್ತು ಬೇಗನೆ ಕುತ್ತಿಗೆಯ ದುಗ್ಧಗ್ರಂಥಿಗಳಿಗೆ ಮತ್ತು ದೇಹದ ಇತರ ಬಾಗಕ್ಕೆ ಹರಡುವ ಎಲ್ಲಾ ಸಾಧ್ಯತೆಯೂ ಇರುತ್ತದೆ. ಈ ಕಾರಣದಿಂದಲೇ ನಾಲಗೆಯ ಕ್ಯಾನ್ಸರ್‍ನ್ನು ವೈದ್ಯರು ಬಹಳ ಗಂಭೀರವಾಗಿಯೇ ಪರಿಗಣಿಸುತ್ತಾರೆ. ನಾಲಗೆಯಲ್ಲಿನ ಒಂದು ಸಣ್ಣ ಹುಣ್ಣನ್ನು ವೈದ್ಯರು ಅತೀ ಕೂಲಂಕುಷವಾಗಿ ಪರೀಕ್ಷಿಸಿ, ಕ್ಯಾನ್ಸರ್ ಅಲ್ಲ ಎಂದು ಘೋಷಿಸಲು ಬಹಳ ವಿವೇಚಿಸುತ್ತಾರೆ. ಭಾರತ ದೇಶವೊಂದರಲ್ಲಿಯೇ ವರ್ಷಕ್ಕೆ 1 ಲಕ್ಷ ಮಂದಿ ಬಾಯಿಯ ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ಅದೃಷ್ಟವಾಷತ್ ನಾಲಗೆ ಕ್ಯಾನ್ಸರ್ ಅತೀ ವಿರಳ. ಬಾಯಿ ಕ್ಯಾನ್ಸರ್‍ನ ಮೂರು ಶೇಕಡಾ ಪಾಲು ನಾಲಗೆ ಕ್ಯಾನ್ಸರ್‍ಗೆ ಸಿಕ್ಕಿದೆ ಎಂದು ಅಂಕಿ ಅಂಶಗಳು ತಿಳಿಸುತ್ತಾರೆ.
ನಾಲಗೆ ಕ್ಯಾನ್ಸರ್‍ನ ಲಕ್ಷಣಗಳು ಏನು?
- ನಾಲಗೆಯಲ್ಲಿ ನಿರಂತರ ನೋವು ಬರುತ್ತದೆ. ಕೆಲವೊಮ್ಮೆ ದವಡೆಯಲ್ಲಿ ನೋವು ಇರುತ್ತದೆ.
- ನಾಲಗೆಯ ಒಳಗೆ ಗೆಡ್ಡೆ ಬೆಳೆದಂತೆ ಅಥವಾ ಕಲ್ಲು ಬೆಳೆದಂತೆ ಅನಿಸಬಹುದು.
- ಮಾತನಾಡಲು ಮತ್ತು ಆಹಾರ ಜಗಿಯಲು ತೊಂದರೆ ಉಂಟಾಗಬಹುದು.
- ಆಹಾರ ನುಂಗಲು ಕಷ್ಟವಾಗಬಹುದು. ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡ ಅನುಭವ ಬರಬಹುದು.
- ಬಿಳಿ ಅಥವಾ ಕೆಂಪು ಮಚ್ಚೆಗಳು ನಾಲಗೆಯ ಮೇಲ್ಬಾಗದಲ್ಲಿ ಕಂಡುಬರಬಹುದು
- ನಾಲಗೆಯ ಬದಿಗಳಲ್ಲಿ ಒಣಗದೇ ಇರುವ ಹುಣ್ಣು ಕಂಡುಬರಬಹುದು. ಈ ಹುಣ್ಣಿನಿಂದ ಪದೇ ಪದೆ ರಕ್ತ ಒಸರುತ್ತಿರಬಹುದು.
- ಬಾಯಿಯಲ್ಲಿ ನಾಲಗೆಯೊಳಗೆ ದೊಡ್ಡ ಮಾಂಸದ ಗಡ್ಡೆ ಬೆಳೆದಾಗ ಬಾಯಿಯೊಳಗಿನ ಎಂಜಲು ಬಾಯಿ ಬದಿಯಿಂದ ಹೊರಕ್ಕೆ ಹರಿಯುತ್ತದೆ.
- ಗೆಡ್ಡೆಯ ಗಾತ್ರ ದೊಡ್ಡದಾದಂತೆ ಬಾಯಿ ಮುಚ್ಚಲು ಸಾಧ್ಯವಾಗದೇ ಇರಬಹುದು.
ನಾಲಗೆ ನಿಜವಾಗಿಯು ಒಂದೇ ಅಂಗವಾಗಿದ್ದರು ಬೇರೆ ಬೇರೆ ಭಾಗಗಳು ಬೇರೆ ಬೇರೆ ಮೂಲದಿಂದ ಅಭಿವೃದ್ಧಿ ಹೊಂದಿದ ಕಾರಣದಿಂದ, ಮುಂಭಾಗದ ನಾಲಗೆಯ ಮೂರನೇ ಎರಡರಷ್ಟು ಭಾಗದ ಕ್ಯಾನ್ಸರನ್ನು ಬಾಯಿ ಕ್ಯಾನ್ಸರ್ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ನಾಲಗೆಯ ಹಿಂಭಾಗದ ಮೂರನೇ ಒಂದು ಭಾಗದ ಕ್ಯಾನ್ಸರ್‍ನ್ನು ಕುತ್ತಿಗೆಯ ಕ್ಯಾನ್ಸರ್ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.
ನಾಲಗೆ ಕ್ಯಾನ್ಸರ್ ಚಿಕಿತ್ಸೆ ಹೇಗೆ?
ಆರಂಭಿಕ ಹಂತದಲ್ಲಿ ನಾಲಗೆ ಕ್ಯಾನ್ಸರ್ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು. ಬಾಯಿಯ ಕ್ಯಾನ್ಸರ್‍ಗಳಲ್ಲಿ ಅತೀ ಹೆಚ್ಚು ತ್ರೀವ್ರತರವಾಗಿ ಕಾಡುವ ಮತ್ತು ಹೆಚ್ಚು ವಿಚಿತ್ರವಾಗಿ ವ್ಯವಹರಿಸುವ ಕ್ಯಾನ್ಸರ್ ಎಂದರೆ ನಾಲಗೆ ಕ್ಯಾನ್ಸರ್ ಎಂದರೂ ತಪ್ಪಾಗಲಿಕ್ಕಿಲ.್ಲ ಎಲ್ಲಾ ಕ್ಯಾನ್ಸರ್ ಚಿಕಿತ್ಸೆಯಂತೆ ನಾಲಗೆ ಕ್ಯಾನ್ಸರ್‍ಗೂ ಸರ್ಜರಿ, ಕಿಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆ
ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ಬರೀ ಸರ್ಜರಿ ಮಾಡಿ ರೋಗಿಯನ್ನು ಪುನ: ಪುನ: ಪರಿಶೀಲಿಸಲಾಗುತ್ತದೆ. ಕುತ್ತಿಗೆಗೆ ಕ್ಯಾನ್ಸರ್ ಹರಡಿದ್ದಲ್ಲಿ ಸರ್ಜರಿ ಜೊತೆಗೆ ವಿಕಿರಣ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ ದೇಹದ ದೂರದ ಅಂಗಗಳಾದ ಶ್ವಾಸಕೋಶ, ಕಿಡ್ನಿ, ಲಿವರ್ ಮುಂತಾದ ಭಾಗಕ್ಕೆ ಕ್ಯಾನ್ಸರ್ ಹರಡಿದ್ದಲ್ಲಿ, ಸರ್ಜರಿ ವಿಕಿರಣ ಚಿಕಿತ್ಸೆ ಜೊತೆಗೆ ಕಿಮೋಥೆರಪಿ ಚಿಕಿತ್ಸೆ ನೀಡಬೇಕಾಗುತ್ತದೆ. ಕ್ಯಾನ್ಸರ್ ಗಡ್ಡೆಯ ಗಾತ್ರ, ರಚನೆ ಮತ್ತು ನಾಲಗೆಯ ಯಾವ ಭಾಗದಲ್ಲಿ ಕ್ಯಾನ್ಸರ್ ಇದೆ ಎಂಬುದರ ಮೇಲೆ ಚಿಕಿತ್ಸೆ ನಿರ್ಧರಿತವಾಗಿರುತ್ತದೆ. ಕ್ಯಾನ್ಸರ್ ಕುತ್ತಿಗೆಯ ಭಾಗಕ್ಕೆ ಹರಡಿದಲ್ಲಿ 63 ಶೇಕಡಾ ಮಂದಿ 5 ವರ್ಷ ಬದುಕುವ ಸಾಧ್ಯತೆ ಇರುತ್ತದೆ. ನಾಲಗೆಯಿಂದ ಕುತ್ತಿಗೆಗೆ ಕ್ಯಾನ್ಸರ್ ಹರಡಿದಿಲ್ಲವಾದರೆ 5 ವರ್ಷಗಳ ಕಾಲ ಸುರಕ್ಷಿತವಾಗಿ ಬದುಕುವ ಸಾಧ್ಯತೆ ಸುಮಾರು 73 ಶೇಕಡಾ ಇರುತ್ತದೆ. ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಅರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು ಎಂಬುದು ಸಮಾಧಾನಕರ ಅಂಶವಾಗಿರುತ್ತದೆ.
Dr Muralee Mohan Choontharu
BDS MDS DNB MBA FPFA
MOSRCSEd (UK)
Consultant Oral and Maxillofacial Surgeon
www.surakshadental.com.