ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರಗಳಲ್ಲಿ ಹಿಂದೂ ಧರ್ಮದ ಸತ್ವವಿದೆ- ಚಿನ್ಮಯ್ .
ಮಂಡೆಕೋಲು: ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರಗಳಲ್ಲಿ ಹಿಂದೂ ಧರ್ಮದ ಸತ್ವವಿದೆ. ಇಂತಹ ಉದಾತ್ತವಾದ ಹಿಂದೂ ಧರ್ಮವನ್ನು ನಾಶಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಎಂದು ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಮಿತಿ ಸದಸ್ಯ ಚಿನ್ಮಯ್ ಈಶ್ವರಮಂಗಲ ಹೇಳಿದರು. ಅವರು ಮಂಡೆಕೋಲು ಹಿಂದೂ ಜಾಗರಣ ವೇದಿಕೆ ಹಾಗೂ ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ಮಂಡೆಕೋಲಿನಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದರು. ಅನಾದಿಕಾಲದಿಂದಲೂ ಹಿಂದೂ ಧರ್ಮದ ಮೇಲೆ ಅತಿಕ್ರಮಣಗಳಾಗಿವೆ. ಹಿಂದೂ ಧರ್ಮವನ್ನು ನಾಶಪಡಿಸಲು ಅದೆಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಅದಕ್ಕೆ ಹಿಂದೂ ಧರ್ಮದ ಒಳಗಿರುವ ಗಟ್ಟಿತನವೇ ಕಾರಣ. ಹಬ್ಬದ ಆಚರಣೆಯಲ್ಲಿ ಧರ್ಮ ಜಾಗೃತಿಯ ಉದ್ದೇಶವು ಇರುವುದರಿಂದ ಇಂತಹ ಹಬ್ಬಗಳನ್ನು ಆಚರಿಸುವುದು ಹಿಂದೂಗಳಲ್ಲಿ ಕರ್ತವ್ಯವಾಗಿದೆ ಎಂದವರು ಹೇಳಿದರು. ಅತಿಥಿಗಳೆಲ್ಲರೂ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಹಿಂದೂ ಕಾರ್ಯಕರ್ತ ದಿ. ಪ್ರವೀಣ್ ನೆಟ್ಟಾರು ಅವರ ಪತ್ನಿ ಶ್ರೀಮತಿ ನೂತನ ನೆಟ್ಟಾರು ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಹಿಂದೂಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು. ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪುತ್ಯ ಪಾಂಡುರಂಗ ರಾವ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರತಿಭೆಗಳಾದ ಕೊಳಲುವಾದಕ ವಿಜಿತ್ ಮೈತಡ್ಕ ಹಾಗೂ ಮಂಗಳ ಗ್ರಹ ಅಧ್ಯಯನ ವಿದ್ಯಾರ್ಥಿನಿ ಮಾನಸ ಎಂ.ಜೆ. ಇವರನ್ನು ಸನ್ಮಾನಿಸಲಾಯಿತು. ಆಯುಧ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಕುಮಾರನ್ ಮಾವಂಜಿ, ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಹೇಮಂತ್ ಮಂಡೆಕೋಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯ ಬಾಲಚಂದ್ರ ದೇವರ ಗುಂಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ಉಗ್ರಾಣಿಮನೆ ವಂದಿಸಿದರು. ಗಣೇಶ್ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ , ವಿಜಿತ್ ಅವರಿಂದ ಕೊಳಲುವಾದನ ಹಾಗೂ ದೇಲಂಪಾಡಿ ಯಕ್ಷಗಾನ ತಂಡವರಿಂದ ಯಕ್ಷಗಾನ ಪ್ರದರ್ಶನ ಜರಗಿತು.