ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಡಾ. ರೇಣುಕಾ ಪ್ರಸಾದ್ ಮತ್ತು ಡಾ. ಜ್ಯೋತಿ ಆರ್ ಪ್ರಸಾದ್‌ರವರ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಮತ್ತು ಸಂಸ್ಥೆಯ ಉದ್ಯೋಗಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆಯುತ್ತಿರುವವರ ಬಗ್ಗೆ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಪಾಂಶುಪಾಲರುಗಳು ಮತ್ತು ಸಿಬ್ಬಂದಿಗಳು ಮಂಗಳೂರಿನ ಜಿಲ್ಲಾ ಸೈಬರ್ ಕ್ರೈಂ ಅಧಿಕ್ಷಕರಿಗೆ ದೂರು ನೀಡಿರುತ್ತಾರೆ. ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜ್, ಕೆ.ವಿ.ಜಿ ದಂತ ಮಹಾವಿದ್ಯಾಲಯ, ಕೆ.ವಿ.ಜಿ ಪಾಲಿಟಿಕ್ನಿಕ್, ಕೆ.ವಿ.ಜಿ ಐ.ಟಿ.ಐ ಮತ್ತು ಕೆ.ವಿ.ಜಿ ಐ.ಪಿ.ಎಸ್ ನ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಸಹಿ ಮಾಡಿದ ದೂರಿನ ಪ್ರತಿಯನ್ನು ಮಂಗಳೂರಿನ ಜಿಲ್ಲಾ ಸೈಬರ್ ಅಧಿಕ್ಷಕರಿಗೆ ನೀಡಲಾಯಿತು. ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೆಸ್ಬುಕ್, ಯೂಟ್ಯೂಬ್‌ಗಳಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮತ್ತು ಉದ್ಯೋಗಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆಯುವವರನ್ನು ಮತ್ತು ವರದಿ ಪ್ರಸಾರ ಮಾಡುವವರನ್ನು ತಕ್ಷಣ ಬಂಧಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಸ್ವೀಕರಿಸಿದ ಜಿಲ್ಲಾ ಸೈಬರ್ ಕ್ರೈಂ ಅಧಿಕಾರಿಗಳು ತಪ್ಪಿತಸ್ಥರನ್ನು ಅತೀ ಶೀಘ್ರಸಲ್ಲಿ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆನ್ನಲಾಗಿದೆ. ಈ ದೂರಿನ ಪ್ರತಿಯನ್ನು ಸುಳ್ಯ ಠಾಣಾಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
