ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿದ್ದಾಗ ಮಾತ್ರ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ನಾವೆಲ್ಲರೂ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಹಿರಿಯರು ಹೇಳಿದ ಮಾತಿನಂತೆ “ಸ್ವಚ್ಛತಾ ಅಭಿಯಾನ ಎನ್ನುವುದು ನಮ್ಮ ಮನೆಯ ಪರಿಸರದಿಂದಲೇ, ನಮ್ಮಿಂದಲೇ ಅಂದರೆ ವಿದ್ಯಾರ್ಥಿಗಳಿಂದಲೇ ಪ್ರಾರಂಭವಾದಾಗ ಮಾತ್ರ ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯ.” ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದರೆ ಮೊದಲಿಗೆ ಅವರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಹಾಗಾಗಿ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸುಳ್ಯ ತಾಲೂಕಿನ ಗುತ್ತಿಗಾರಿನ ಮೇಲ್ದರ್ಜೆಗೇರಿದ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಆಶ್ರಯದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ನ “ಸ್ವಚ್ಛತಾ ಹೀ ಸೇವಾ” ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮಾಡುವ ವಿನೂತನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗುತ್ತಿಗಾರು, ದೇವಚಳ್ಳ, ವಳಲಂಬೆ, ವಾಲ್ತಾಜೆ, ಮಡಪ್ಪಾಡಿ, ನಾಲ್ಕೂರು, ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಭಾಗಗಳ ಸುಮಾರು 22 ವಿದ್ಯಾರ್ಥಿಗಳು ನವೋದಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಪಡೆಯುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಸ್ಪರ್ಧೆ ನಡೆಸುವುದರೊಂದಿಗೆ ಅವರಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮದ ಪರಿಕಲ್ಪನೆಯನ್ನು ಹಾಗೂ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ 15 ದಿನಗಳ ಕಾಲ ತಮ್ಮ ಮನೆಯ ಪರಿಸರದಿಂದ ಚಾಕಲೇಟ್ ಕವರ್, ಐಸ್ ಕ್ರೀಮ್ ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ತರಲು ಸೂಚಿಸಲಾಗಿತ್ತು. ಸೂಚನೆಯಂತೆ ವಿದ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ 15 ದಿನಗಳ ಕಾಲ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಮ್ಮ ಪೋಷಕರ ಸಹಕಾರದೊಂದಿಗೆ ಅ.01 ರಂದು ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ತಂದರು. ವಿದ್ಯಾರ್ಥಿಗಳು ತಂದ ತ್ಯಾಜ್ಯಗಳನ್ನು ತಾಲೂಕು ವೈದ್ಯಾಧಿಕಾರಿಗಳಾದ ಡಾ| ನಂದಕುಮಾರ್, ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮಿತ್ರಾ ಮೂಕಮಲೆ ಹಾಗೂ ಸಂಪನ್ಮೂಲ ವ್ಯಕ್ತಿ ಅಮರ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ ಇವರುಗಳು ಮೌಲ್ಯಮಾಪನ ಮಾಡಿದರು. ಮೌಲ್ಯಮಾಪನದ ನಂತರ ಸ್ಪರ್ಧೆಯಲ್ಲಿ ವಿಜೇತರಾದ ಆರಾಧ್ಯಾ ಮುಂಡಾಜೆ ಹಾಗೂ ಮಣಿಪ್ರಕಾಶ್ ಕಡೋಡಿ ಅವರಿಗೆ ಒಣಕಸ ಸಂಗ್ರಹಣಾ ತೊಟ್ಟಿಯನ್ನು ಬಹುಮಾನವಾಗಿ ನೀಡಲಾಯಿತು. ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ| ನಂದಕುಮಾರ್ ಅವರು ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಚೋಮಯ್ಯ ಸಹಕರಿಸಿದರು. ಈ ಚಟುವಟಿಕೆಯನ್ನು ತರಬೇತಿ ಶಿಕ್ಷಕಿಯರಾದ ಅಭಿಲಾಷಾ ಮೋಟ್ನೂರು ಹಾಗೂ ದಿವ್ಯ ಸುಜನ್ ಗುಡ್ಡೆಮನೆ ಆಯೋಜಿಸಿದ್ದರು.
ಮುಂದಿನ ದಿನಗಳಲ್ಲಿ ಈ ವಿನೂತನ ಯೋಜನೆಯನ್ನು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಯೋಗದೊಂದಿಗೆ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಯೋಚನೆಯಿದ್ದು, “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆ ಮಾತಿನಂತೆ ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಕೈಗೊಂಡಿರುವ ಈ ವಿನೂತನ ಯೋಜನೆಯು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿಯೂ ಅನುಷ್ಠಾನಗೊಂಡರೆ ಪ್ಲಾಸ್ಟಿಕ್ ಮುಕ್ತ ಗ್ರಾಮದ ಪರಿಕಲ್ಪನೆಗೆ ಒಂದೊಳ್ಳೆಯ ಅಡಿಪಾಯವಾಗುವುದರಲ್ಲಿ ಸಂಶಯವಿಲ್ಲ.
✍️ಉಲ್ಲಾಸ್ ಕಜ್ಜೋಡಿ
- Thursday
- November 21st, 2024