
ಕಳಂಜ ಗ್ರಾಮ ಪಂಚಾಯತ್ ಈ ಬಾರಿಯೂ ಕೂಡ ಶೇ.100 ರಷ್ಟು ಕಟ್ಟಡ/ಭೂಮಿ ತೆರಿಗೆ ವಸೂಲಾತಿಯನ್ನು ದಾಖಲಿಸಿದೆ. ಸತತ ನಾಲ್ಕು ವರ್ಷಗಳಿಂದ ಈ ಸಾಧನೆಯನ್ನು ಕಳಂಜ ಗ್ರಾಮ ಪಂಚಾಯಿತಿಯು ಮಾಡುತ್ತಾ ಬಂದಿದೆ. ಕಳೆದ ವರ್ಷ ತೆರಿಗೆಯನ್ನು ಪರಿಷ್ಕರಿಸಿ ತನ್ನ ಸ್ವಂತ ಆದಾಯವನ್ನು ಶೇ.126 ರಷ್ಟು ಹೆಚ್ಚಿಸಿಕೊಂಡಿದ್ದು, ಈ ಮೂಲಕ ಗ್ರಾಮದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ತೆರಿಗೆ ಪರಿಷ್ಕರಿಸಿದ ವರ್ಷದಲ್ಲಿಯೇ ಶೇ.100 ತೆರಿಗೆ ವಸೂಲಿ ಮಾಡಿದ ಸುಳ್ಯ ತಾಲೂಕಿನ ಏಕೈಕ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಶೇ.100 ರಷ್ಟು ತೆರಿಗೆ ವಸೂಲಾತಿ ಮತ್ತು ಇನ್ನು ಅನೇಕ ಸಾಧನೆಗಳಿಗೆ ಕಳಂಜ ಗ್ರಾಮ ಪಂಚಾಯಿತ್ ಪಾತ್ರವಾಗಿದೆ. ಕಳೆದ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಹಾಗೂ ಈ ಬಾರಿ ಉಡುಪಿಯ ಕೋಟಾ ಫೌಂಡೇಷನ್ ನೀಡುವ ಶಿವರಾಮ ಕಾರಂತ ಪ್ರಶಸ್ತಿ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು.