
ಆಧುನಿಕ ಮಾಧ್ಯಮಗಳು ಪ್ರಬಲವಾಗುತ್ತಿರುವ ಈ ಸಂದರ್ಭದಲ್ಲಿ ರಂಗಭೂಮಿಯನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ. ಇಂತಹ ಆತಂಕಕಾರಿ ಸ್ಥಿತಿಯಲ್ಲಿಯೂ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಬದ್ಧತೆಯಿಂದ ರಂಗಭೂಮಿಯನ್ನೇ ಬದುಕಾಗಿಸಿಕೊಂಡು ದುಡಿಯುತ್ತಿರುವ ಜೀವನರಾಂ ಓರ್ವ ಮಹಾನ್ ಸಾಧಕ’ ಎಂದು ಹಿರಿಯ ರಂಗ ಕರ್ಮಿ, ಚಲನ ಚಿತ್ರ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರು ಸುಳ್ಯದ ರಂಗಮನೆಯಲ್ಲಿ ಜರಗಿದ 8 ದಿನಗಳ ಬಹುಭಾಷಾ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ 2021ರ ರಂಗಮನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ ‘ಕಲೆಯು ಸಮಾಜವನ್ನು ಒಂದು ಮಾಡುತ್ತದೆ. ಸೌಹಾರ್ದತೆಯಿಂದ ಬದುಕುವುದನ್ನು ಕಲಿಸುತ್ತದೆ. ಕಲೆಗಾಗಿ ಜೀವನರಾಂ ಅವರ ಶ್ರಮ ಇಲ್ಲಿ ಎದ್ದುಕಾಣುತ್ತದೆ. ಈ ರಂಗಮನೆಗೆ ಬೇಕಾದ ಎಲ್ಲ ನೆರವು ನೀಡಲಾಗುವುದು’ ಎಂದು ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆ, ತುಳು, ಅರೆಭಾಷೆ, ಕೊಂಕಣಿ ಸಾಹಿತ್ಯ ಅಕಾಡೆಮಿಗಳು ಕರ್ನಾಟಕ ನಾಟಕ ಅಕಾಡೆಮಿ ಇವುಗಳ ಸಹಯೋಗದಲ್ಲಿ ಜರಗಿದ ಈ ಬಹುಭಾಷಾ ನಾಟಕೋತ್ಸವದ ಸಮಾರೋಪ ಸಮಾರಂಭದ ಬಳಿಕ ಮುಖ್ಯಮಂತ್ರಿ ಚಂದ್ರು ಅಭಿನಯದ ಬೆಂಗಳೂರಿನ ಕಲಾಗಂಗೋತ್ರಿ’ ಯವರಿಂದ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನಗೊಂಡಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಶುಭಾಶಂಸನೆಗೈದರು. ಸಮಾರೋಪ ಭಾಷಣ ಮಾಡಿದ ಪ್ರಸಿದ್ಧ ರಂಗ ನಿರ್ದೇಶಕ ಡಾ. ಬಿ. ವಿ. ರಾಜಾರಾಂ ‘ರಂಗಮನೆ ಮುಂದೊಂದು ದಿನ ರಂಗಾಯಣ, ನಿನಾಸಂ ನಂತೆ ಪ್ರಸಿದ್ಧವಾಗಲಿದೆ’ ಎಂದರು.ರಂಗಮನೆಯ ಅಧ್ಯಕ್ಷ ಜೀವನರಾಂ ಸುಳ್ಯ ಸ್ವಾಗತಿಸಿ, ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಡಾ. ಸುಂದರ ಕೇನಾಜೆ ಸನ್ಮಾನ ಪತ್ರ ವಾಚಿಸಿದರು. ಡಾ. ವಿದ್ಯಾ ಶಾರದೆ ವಂದಿಸಿದರು. ಶ್ರೀಮತಿ ಪದ್ಮಾ ಚಂದ್ರು, ಸುಜನಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾಗಂಗೋತ್ರಿ ವತಿಯಿಂದ ರಂಗ ನಿರ್ದೇಶಕ ಜೀವನ ರಾಂ ಅವರನ್ನು, ಮತ್ತು ರಂಗಮನೆ ವತಿಯಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಪ್ರಭಾಕರ ಶಿಶಿಲರನ್ನು ಅಭಿನಂದಿಸಲಾಯಿತು.