ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುದ್ಪಾಜೆ ರಸ್ತೆ ಕೆಲವೆಡೆ ಡಾಮರು ಕಾಣದೇ ಹಾಗೂ ಕೆಲವೆಡೆ ಹಾಕಿದ ಡಾಮರು ಕಿತ್ತು ಹೋಗಿ ಸಂಚಾರಕ್ಕೆ ದುಸ್ಥರವಾಗಿದೆ. ಈ ರಸ್ತೆಗೆ ಸುಮಾರು 27ವರ್ಷಗಳ ಹಿಂದೆ ಹಾಕಿದ ಡಾಮರು ಎದ್ದು ಹೋಗಿದೆ. ಮತ್ತೆ ಯಾರು ಕೂಡ ಈ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ. ಇಲ್ಲಿ ಸುಮಾರು 33 ಮನೆಗಳಿದ್ದು ವಾಹನ ಹಾಗೂ ಕಾಲ್ನಡಿಗೆಯಲ್ಲಿ ಸಾಗುವವರು ಹಿಡಿಶಾಪವಂತಾಗಿದೆ. ಚುನಾವಣೆ ವೇಳೆ ಭರವಸೆ ನೀಡಿ ಮತ ಪಡೆದವರು ಅನುದಾನ ಕೊರತೆಯ ನೆಪ ಹೇಳುತ್ತಿದ್ದಾರೆ. ನಗರ ಪಂಚಾಯತ್ ಕೂಡ ನಮ್ಮ ಮನವಿಗೆ ಇದುವರೆಗೆ ಸ್ಪಂದಿಸಿಲ್ಲ ಎಂದು ಕುದ್ಪಾಜೆ ನಿವಾಸಿಗಳು ದೂರಿದ್ದಾರೆ.
ಕುದ್ಪಾಜೆ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಸಚಿವ ಅಂಗಾರರಿಗೆ ಮನವಿ ಸಲ್ಲಿಸಲಾಗಿದೆ. ಕೊಯಿಂಗೋಡಿ ರಸ್ತೆ ದುರಸ್ತಿಗೆ 2 ಲಕ್ಷ ಅನುದಾನ ನ.ಪಂ.ಮೀಸಲಿರಿಸಲಾಗಿದೆ ಎಂದು ನ.ಪಂ.ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ತಿಳಿಸಿದ್ದಾರೆ.
ಈ ಬಗ್ಗೆ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕರನ್ನು ಸಂಪರ್ಕಿಸಿದಾಗ “ಮುಖ್ಯರಸ್ತೆಗಳ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ಅನುದಾನದ ಕೊರತೆ ಇರುವುದರಿಂದ ಹಂತ ಹಂತಗಳಲ್ಲಿ ಅಭಿವೃದ್ಧಿ ಮಾಡುತ್ತೇವೆ. ಈಗಾಗಲೇ ಅದೇ ವಾರ್ಡ್ ನ ನಾರಾಜೆ ಕಾಲಾನಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು ತಿಂಗಳೊಳಗೆ ಕಾಮಗಾರಿ ಆರಂಭವಾಗಲಿದೆ” ಎಂದಿದ್ದಾರೆ.