ಕರ್ನಾಟಕ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಅಡಿಕೆಯ ಹಳದಿರೋಗ ಕುರಿತ ಸಂಶೋಧನೆಗೆ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ ಕವಾಗಿ 25 ಕೋಟಿ ರೂ ಪ್ಯಾಕೇಜನ್ನು ಘೋಷಿಸಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಪ್ಯಾಕೇಜ್ ನ ರೂಪುರೇಷೆ ಸಿದ್ಧವಾಗುವ ಮೊದಲೇ ಅದರೊಳಗೆ ಹುಳುಕು ಹುಡುಕುವ ಕೆಲಸವನ್ನು ಬಿಟ್ಟು ರಾಜ್ಯದಲ್ಲಿ ಮೊದಲ ಬಾರಿಗೆ ಘೋಷಿತವಾಗಿರುವ ಈ ಪ್ಯಾಕೇಜನ್ನು ಸ್ವಾಗತಿಸೋಣ ಎಂದು ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆ ಅರಂತೋಡು ತೊಡಿಕಾನ ಮತ್ತಿತರ ಗ್ರಾಮಗಳಲ್ಲಿ ಅಡಿಕೆ ಹಳದಿ ರೋಗ ವ್ಯಾಪಕವಾಗಿ ಹಬ್ಬಿದ್ದು ತಾಲೂಕಿನ ಇತರ ಗ್ರಾಮಗಳಿಗೂ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ತೊಡಿಕಾನ ದಲ್ಲಿ ಅಡಿಕೆ ಬೆಳೆಗಾರರ ಹಿತ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಕ್ಯಾಪ್ಕೋ ಸಹಯೋಗದೊಂದಿಗೆ ವಿಚಾರ ಸಂಕಿರಣ ನಡೆದಿದ್ದು ಹಳದಿ ರೋಗಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಹಾಗೂ ಇತರೆ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಸುಳ್ಯದ ನಮ್ಮ ನೆಚ್ಚಿನ ಸಚಿವ ಅಂಗಾರ ರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಳದಿ ರೋಗದ ಸಂಶೋಧನೆಗೆ ಹಾಗೂ ಪರ್ಯಾಯ ಬೆಳೆಗಳ ಉತ್ತೇಜನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ನಲ್ಲಿ 25 ಕೋಟಿ ರೂಗಳ ವಿಶೇಷ ಪ್ಯಾಕೇಜನ್ನು ಈಗಾಗಲೇ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ತೋಟಗಾರಿಕಾ ಸಚಿವರು ಮತ್ತು ಹಳದಿ ರೋಗ ಬಾಧಿತ ಕ್ಷೇತ್ರಗಳ ಶಾಸಕರುಗಳ ಮತ್ತು ಸಚಿವರುಗಳ ಉನ್ನತಮಟ್ಟದ ಸಮಿತಿಯಲ್ಲಿ ಈ ಪ್ಯಾಕೇಜ್ ನ ಬಳಕೆಯ ಕುರಿತಂತೆ ರೂಪುರೇಷೆಗಳು ಸಿದ್ಧವಾಗಬೇಕಿದೆ. ಆದರೆ ಇಲ್ಲಿನ ಕೆಲವು ಸ್ಥಾಪಿತ ಹಿತಾಸಕ್ತಿಗಳು ತಪ್ಪು ಮಾಹಿತಿಗಳ ಮೂಲಕ ಕೃಷಿಕರನ್ನು ತಪ್ಪುದಾರಿಗೆಳೆಯುವ ಪ್ರಯತ್ನಗಳನ್ನು ಮಾಡುತ್ತಿವೆ.
ನುರಿತ ಕೃಷಿಕರು ಈ ಪ್ಯಾಕೆಜಿಂಗ್ ಬಳಕೆಯ ಬಗ್ಗೆ ಸರಕಾರಕ್ಕೆ ಸಲಹೆ ನೀಡಲಿ. ಆದರೆ ಕೆಲವು ಸಂಘಟನೆಗಳು ತಮ್ಮ ಬಲವನ್ನು ವೃದ್ಧಿಸುವುದಕ್ಕಾಗಿ ಕೃಷಿಕರನ್ನು ತಪ್ಪುದಾರಿಗೆಳೆಯುವ ಬದಲು ಇದೇ ಮೊದಲ ಬಾರಿಗೆ ಪ್ಯಾಕೇಜನ್ನು ಘೋಷಿಸಿರುವ ಸರಕಾರದ ನಡೆಯನ್ನು ಸ್ವಾಗತಿಸಲಿ.
ಮೊದಲಿನಿಂದಲೂ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬಂದಿರುವ ಭಾರತೀಯ ಜನತಾ ಪಾರ್ಟಿಯು ಮುಂದಕ್ಕೂ ಕೂಡ ಅಡಿಕೆ ಕೃಷಿಕರ ಹಿತವನ್ನು ಕಾಯುವುದಕ್ಕಾಗಿ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಬದ್ಧವಾಗಿರುತ್ತದೆ ಎಂದು ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024