ಎನ್ ಎಸ್ ಯು ಐ ವತಿಯಿಂದ ಇತ್ತೀಚೆಗೆ ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಕಾರ್ಯಕ್ರಮ ನಡೆಸಿತ್ತು ಎಂದು ಎಬಿವಿಪಿ ಆರೋಪ ವ್ಯಕ್ತಡಿಸಿತ್ತು. ಈ ಬಗ್ಗೆ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಎಬಿವಿಪಿ ದೇಶದ್ರೋಹಿ ಸಂಘಟನೆ ಎಂದಿದ್ದರು. ಇದಕ್ಕೆ ಎಬಿವಿಪಿ ಖಂಡನೆ ವ್ಯಕ್ತಪಡಿಸಿ ಹೇಳಿಕೆ ನೀಡಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ದೇಶದ್ರೋಹಿ ಸಂಘಟನೆ ಎಂದು ಹೇಳಿಕೆ ನೀಡಿರುವ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರಾದ ಸವಾದ್ ಸುಳ್ಯ ಹೇಳಿಕೆಯನ್ನು ಹಿಂಪಡೆಯಬೇಕು. ಹಾಗೂ ವಿದ್ಯಾರ್ಥಿಗಳಿಗೆ ಅಸ್ಪಷ್ಟ ಮಾಹಿತಿ ನೀಡಿ ಕ್ಯಾಂಪಸ್ ಗೇಟ್ ಮೀಟ್ ನಡೆಸಿರುವುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಪೋಸ್ಟರ್ ಹಿಡಿದು ಎನ್ ಎಸ್ ಯು ಐ ಕಾರ್ಯಕರ್ತರ ಜತೆ ಫೋಟೊಕ್ಕೆ ಪೋಸ್ ನೀಡಿದ ಅದೆಷ್ಟೋ ವಿದ್ಯಾರ್ಥಿಗಳಿಗೆ ತಾವೇಕೆ ಅದರಲ್ಲಿ ಪಾಲ್ಗೊಂಡಿದ್ದೇವೆಂದು ಇನ್ನೂ ಅರಿವೇ ಇಲ್ಲ. ಅಸ್ಪಷ್ಟ ಮಾಹಿತಿಯೊಂದಿಗೆ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವುದನ್ನು ಎಬಿವಿಪಿ ಖಂಡಿಸುತ್ತದೆ. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರೋಪಾಯ ಒದಗಿಸುವುದರಲ್ಲಿ ತಪ್ಪಿಲ್ಲ, ಆದರೆ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಿ ಪೋಸ್ಟರ್ ಹಿಡಿಸುವುದು ಖಂಡನೀಯ ವಿಚಾರ ಎಂದು ಎಬಿವಿಪಿ ಕಾರ್ಯದರ್ಶಿ ಚರಣ್ ರಾಜ್ ಅಡ್ಕಬಳೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸವಾದ್ ರನ್ನು ಸಂಪರ್ಕಿಸಿದಾಗ ನಾವು ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮ ಹಮ್ಮಿಕೊಂಡದ್ದು ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಕಾರ್ಯಕ್ರಮ ಹಮ್ಮಿಕೊಂಡದ್ದು, ಈಗಾಗಲೇ ಬಸ್ ಪಾಸ್ ಸಮಸ್ಯೆ, ಸ್ಕಾಲರ್ ಶಿಪ್ ಸಮಸ್ಯೆ ಇದೆ. ಇವುಗಳ ಬಗ್ಗೆ ಅವರು ಮಾತನಾಡುವುದಿಲ್ಲ. ನಾವು ಯಾವುದೇ ಕೋಮಭಾವನೆ ಕೆರಳಿಸುವ ಉದ್ದೇಶಕ್ಕೆ ಕಾರ್ಯಕ್ರಮ ಮಾಡಿದ್ದಲ್ಲ. ನಮ್ಮ ಕಾರ್ಯಕರ್ತರಿಗೆ ಎಬಿವಿಪಿ ಬೆದರಿಕೆ ಹಾಕಿದ್ದಾರೆ. ವಿದ್ಯಾರ್ಥಿಗಳೇ ದೇಶದ ಶಕ್ತಿ ಎನ್ನುವ ಅವರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ನಾವು ಸ್ಪಂದಿಸಲು ಹೊರಟಾಗ ಬೆದರಿಕೆ ಹಾಕುವುದಿದ್ದರೇ ಅದು ದೇಶದ್ರೋಹವಲ್ಲವೇ ಎಂದು ಹೇಳಿದ್ದಾರೆ.