ಸಮಾಜದಲ್ಲಿ ಸಂಕಷ್ಟದ ಸಮಯ ಬಂದಾಗ ಗಾಂಧಿಯನ್ ಆರ್ಥಿಕತೆ ಸಮಾಜವನ್ನು ರಕ್ಷಣೆ ಮಾಡುತ್ತದೆ. ಇದಕ್ಕೆ ಉದಾಹರಣೆ ಕೊರೋನಾ. ಕೊರೋನಾದ ಸಂಕಷ್ಟದ ಸಮಯದಲ್ಲಿ ಈ ಗಾಂಧಿಯನ್ ಆರ್ಥಿಕತೆ ಸಮುದಾಯಗಳನ್ನು ರಕ್ಷಿಸಿಕೊಳ್ಳುತ್ತಾ ಸಾಗಿದೆ. ಗಾಂಧಿಯನ್ ಆರ್ಥಿಕತೆ ಎನ್ನುವುದು ಸ್ವಾವಲಂಬಿ ಆರ್ಥಿಕತೆ. ಇದುವೇ ಗಾಂಧಿ ಚಿಂತನೆಯ ಆರ್ಥಿಕತೆ ಎಂದು ಸಾಹಿತಿ, ಶಿಕ್ಷಕ ಅರವಿಂದ ಚೊಕ್ಕಾಡಿ ಹೇಳಿದರು.
ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಂಗಳವಾರ ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆದ ನಾ. ಕಾರಂತ,ಪೆರಾಜೆ ಅವರ ‘ ಮುಸ್ಸಂಜೆಯ ಹೊಂಗಿರಣ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ಈ ಪುಸ್ತಕದಲ್ಲಿ ಬರುವ ವ್ಯಕ್ತಿಗಳು ಗಾಂಧಿಯನ್ ಆರ್ಥಿಕತೆಯನ್ನು ಅಭ್ಯಾಸ ಮಾಡಿದ್ದರೆಂದು ಅಲ್ಲ. ಗಾಂಧಿ ಹೇಳುವ ಮೊದಲೂ ಇದೆಲ್ಲ ನಮ್ಮ ಸಮಾಜದಲ್ಲಿ ಇತ್ತು. ಆದರೆ ನಮ್ಮ ಸಮಾಜದಲ್ಲಿ ನಿಜವಾಗಿ ಏನಿದೆ ಎಂಬುದನ್ನು ಹುಡುಕಲು ಗಾಂಧಿಗೆ ಮಾತ್ರ ಗೊತ್ತಿತ್ತು. ತಾನು ಹುಡುಕಿದ್ದನ್ನು ವ್ಯವಸ್ಥಿತವಾಗಿ ಗಾಂಧೀಜಿ ಹೇಳಿದರು ಎಂದರು.ಕೊರೋನಾ ಸಮಯದಲ್ಲಿ ಈ ಆರ್ಥಿಕತೆ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಅಣ್ಣಾವಿನಯಚಂದ್ರ ಕಿಲಂಗೋಡಿ ಮಾತನಾಡಿ,ದೇಶದಲ್ಲಿ ನಿಜವಾದ ಸ್ವಂತಿಕೆ ಇರುವುದು ಹಳ್ಳಿಗಳಲ್ಲಿ.ಕೊರೋನಾದಂತಹ ಸಮಯದಲ್ಲೂ ಹಳ್ಳಿಗಳು ಸೋಲಲಿಲ್ಲ, ಗಟ್ಟಿಯಾಗಿ ಬೆಳೆದವು. ಸಮಾಜದಲ್ಲಿ ಇರುವ ಧನಾತ್ಮಕ ಸಂಗತಿಗಳು ಹೆಚ್ಚು ಚರ್ಚೆಯಾಗಬೇಕು ಎಂದರು.
ಬರಹಗಾರ ನಾ.ಕಾರಂತ ಪೆರಾಜೆ ಮಾತನಾಡಿ ಕೊರೋನಾವು ಸಮಾಜದಲ್ಲಿ ಒಮ್ಮೆಲ್ಲೇ ತಲ್ಲಣ ಮೂಡಿಸಿತು. ಇದೇ ಸಮಯದಲ್ಲಿ ಅನೇಕ ಧನಾತ್ಮಕವಾದ ಬದಲಾವಣೆಗಳು ಕಂಡವು. ಇದರ ದಾಖಲಾತಿ ಅತೀ ಅಗತ್ಯವಾಗಿತ್ತು ಎಂದು ಹೇಳಿದರು.
ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಪ್ರಮೋದ್ ಶುಭ ಹಾರೈಸಿದರು. ವೇದಿಕೆಯಲ್ಲಿ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೂಪಾ ಉಪಸ್ಥಿತರಿದ್ದರು. ಇದೇ ವೇಳೆ ಬರಹಗಾರ ನಾ ಕಾರಂತ ಪೆರಾಜೆ ಅವರನ್ನು ಗೌರವಿಸಲಾಯಿತು.
ರೂರಲ್ ಮಿರರ್ ಪ್ರಕಾಶನದ ಮಹೇಶ ಪುಚ್ಚಪ್ಪಾಡಿ ಸ್ವಾಗತಿಸಿ ಪ್ರಸ್ತಾವನೆಗೈದು ವಂದಿಸಿದರು. ಕೃತಿಕಾ ಉದಯ್ ಕಾರ್ಯಕ್ರಮ ನಿರ್ವಹಿಸಿದರು.