✍️ಚಂದ್ರಶೇಖರ ಬೇರಿಕೆ
ಮನುಷ್ಯ ಸಾಧ್ಯತೆಯನ್ನು ಮೀರಿದ ಶಕ್ತಿಯೊಂದು ಮಾನವ ಬದುಕಿನ ಅನುಭವಕ್ಕೆ ಬರುತ್ತದೆ ಎಂಬ ಅಚಲ ನಂಬಿಕೆಯ ಮೇಲೆ ತುಳುನಾಡಿನ ದೈವಾರಾಧನಾ ಜಗತ್ತು ಆವೃತ್ತವಾಗಿದೆ. ಪರಶುರಾಮ ಸೃಷ್ಟಿಯ ತುಳುನಾಡು ದೈವ ನೆಲೆಯ ಬೀಡು. ತುಳುನಾಡಿನ ದೈವಾರಾಧನೆಯು 14ನೇ ಶತಮಾನದ ಚರಿತ್ರೆಯನ್ನು ಹೊಂದಿದ್ದು, ಕಾರ್ಕಳ ತಾಲ್ಲೂಕಿನ ಕಾಂತೇಶ್ವರದಲ್ಲಿ ದೊರೆತ 1379ರ ಶಾಸನವು ದೈವಾರಾಧನೆಗೆ ಅಧಿಕೃತ ಲಿಖಿತ ಆಧಾರ ಎಂಬ ಉಲ್ಲೇಖವಿದ್ದು, ದೈವಾರಾಧನೆ ತುಳು ಧಾರ್ಮಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿನಿಧಿಸುತ್ತದೆ. ಇಂತಹ ದೈವಾರಧನೆಯ ಜಾತ್ರೆಗಳ ಪೈಕಿ ಅಯ್ಯನಕಟ್ಟೆ ಜಾತ್ರೆಯೂ ಒಂದು.
‘ಅಯ್ಯ’ ಎಂದು ಕರೆಯಲ್ಪಡುತ್ತಿದ್ದ ಊರ ಹಿರಿಯನು ಜನರ ನ್ಯಾಯ ವಿಚಾರಣೆ ಮಾಡಿ ಪಂಚಾಯಿತಿಕೆ ನಡೆಸಿ ನ್ಯಾಯದಾನದ ತೀರ್ಮಾನಗಳನ್ನು ಮಾಡುತ್ತಿದ್ದ ಎಂಬ ಹಿನ್ನೆಲೆಯಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಕಳಂಜ, ಬಾಳಿಲ, ಮುಪ್ಪೇರ್ಯ ಈ ಮೂರು ಗ್ರಾಮಗಳ ಹೊರತಾದ ಪ್ರದೇಶಗಳಿಗೂ ಅಯ್ಯನಕಟ್ಟೆ ಜನಪದ ನ್ಯಾಯಾಲಯದಂತಿದ್ದಿರಬಹುದು. ಹೀಗಾಗಿ ನ್ಯಾಯ ತೀರ್ಮಾನಕ್ಕಾಗಿ ‘ಅಯ್ಯನು’ ಕುಳಿತುಕೊಳ್ಳುತ್ತಿದ್ದ ಕಟ್ಟೆಯು ಅಯ್ಯನಕಟ್ಟೆ ಎಂದು ಕರೆಯಲ್ಪಟ್ಟು ಮುಂದೆ ಅದು ಸ್ಥಳನಾಮವಾಯಿತು ಎಂಬ ಸ್ಥಳ ಪುರಾಣವಿದೆ.
ಸಾಂಸ್ಕೃತಿಕ ಸಾಮಾಜಿಕ ಹಾಗೂ ವ್ಯಾವಹಾರಿಕ ಈ ಮೂರು ಆಯಾಮಗಳಿಂದ ಅಯ್ಯನಕಟ್ಟೆ ಜಾತ್ರೆಯು ಕೇವಲ ಜಾತ್ರೆಯಾಗಿರಲಿಲ್ಲ. ಬದಲಾಗಿ ಭೌಗೋಳಿಕತೆಯನ್ನು ಮೀರಿದ ಹಿನ್ನೆಲೆಯನ್ನು ಹೊಂದಿದ ಶ್ರದ್ಧೆಯ ಆರಾಧನಾ ಕೇಂದ್ರವಾಗಿತ್ತು. ಈ ಜಾತ್ರೆಯ ಚರಿತ್ರೆಯ ಬಗ್ಗೆ ಲಿಖಿತ ರೂಪದ ಆಕರಗಳು ಲಭ್ಯವಿಲ್ಲದಿದ್ದರೂ ಪರಿಸರದ ಹಿರಿಯರ ಅನುಭವಗಳು, ಮೌಖಿಕ ಕಥನಗಳು, ನೆನಪುಗಳು ಈ ಜಾತ್ರೆಯ ವೃತ್ತಾಂತವನ್ನು ತೆರೆದಿಡುತ್ತದೆ. ಅಯ್ಯನಕಟ್ಟೆ ಜಾತ್ರೆಯು ಕೇವಲ ದೈವ ನೆಲೆಯ ವ್ಯಾಪ್ತಿಗೊಳಪಟ್ಟ ಪರಿಸರದ ಕಳಂಜ, ಬಾಳಿಲ, ಮುಪ್ಪೇರ್ಯ ಗ್ರಾಮಗಳಿಗಷ್ಟೇ ಸೀಮಿತವಾಗಿರಲಿಲ್ಲ. ಬದಲಾಗಿ ಇತಿಹಾಸ ಪ್ರಸಿದ್ಧ ಜಾತ್ರೆಗಳ ಪೈಕಿ ಅಯ್ಯನಕಟ್ಟೆ ಜಾತ್ರೆ ಬಲು ದೊಡ್ಡ ಜಾತ್ರೆ ಎಂಬ ಹಿರಿಮೆಯ ಚರಿತ್ರೆಯನ್ನು ಹೊಂದಿದೆ. ಕಾಲ ಕಾಲಕ್ಕೆ ಮಳೆಯಾಗಿ ಭೂಮಿ ಹಸಿರಾಗಲಿ. ಅಂತೆಯೇ ಉತ್ತಿ ಬೆಳೆದ ಬೆಳೆಗಳು, ಕೃಷಿ ಫಲಗಳು, ಮೂಕ ಜಾನುವಾರುಗಳು ಮತ್ತು ದೈವ ನೆಲೆಯ ಪರಿಸರದ ಮಣ್ಣಿನಲ್ಲಿ ವಾಸಿಸುವ ಸಮಸ್ತರಿಗೆ ಯಾವುದೇ ರೋಗ ಬಾಧೆಗಳು ತಗುಲದಂತೆ ಲೋಕಹಿತಕ್ಕಾಗಿ ದೈವದ ಮೊರೆ ಹೋಗುತ್ತಿದ್ದರು ಮತ್ತು ದೈವದ ಕೃಪೆಗಾಗಿ ದೈವಾರಾಧನೆಯ ಮೂಲಕ ದೈವಗಳನ್ನು ಸಂತುಷ್ಟಗೊಳಿಸಲು ದೈವಗಳ ನರ್ತನ ಸೇವೆಯನ್ನು ಆಯೋಜಿಸುತ್ತಿದ್ದರು. ಅಯ್ಯನಕಟ್ಟೆ ಜಾತ್ರೆಯು ದೈವಾರಾಧನೆಯಲ್ಲಿ ಕೊನೆಗೊಳ್ಳದೇ ಹಲವು ವೈಶಿಷ್ಟ್ಯತೆಯಿಂದ ಕೂಡಿತ್ತು ಎಂಬ ಚರಿತ್ರೆಯನ್ನು ಹೊಂದಿದ್ದು, ಜಾತ್ರೆಯು ಬೃಹತ್ ಮಾರುಕಟ್ಟೆಗಳ ಕೇಂದ್ರವಾಗಿತ್ತು. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಅಂದಿನ ಕಾಲದಲ್ಲಿ ಅಯ್ಯನಕಟ್ಟೆ ಜಾತ್ರೆಗೆ ಸೇರುತ್ತಿದ್ದ ಅಂಗಡಿ ಸಂತೆಗಳು ಹತ್ತಾರು ದಿನಗಳ ಮಟ್ಟಿಗೆ ಅಲ್ಲೇ ಬೀಡು ಬಿಡುತ್ತಿದ್ದವು. ಕಳ್ಳ ಕಾಕರ ಭಯವಿಲ್ಲದೇ ಬೆಲೆ ಬಾಳುವ ಆಭರಣಗಳನ್ನು ಸಂತೆಯಲ್ಲಿ ಮುಕ್ತವಾಗಿ ಮಾರುತ್ತಿದ್ದರು ಎಂಬ ಐತಿಹ್ಯವಿದೆ. ಊರಿನ ಜನರು ಯಾವುದೇ ಗೃಹೋಪಯೋಗಿ ವಸ್ತುಗಳಾದ ಮಣ್ಣಿನ ಪಾತ್ರೆಗಳು, ತಾಮ್ರದ ವಸ್ತುಗಳು, ಬಟ್ಟೆ ಬರೆಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ಅಯ್ಯನಕಟ್ಟೆ ಜಾತ್ರೆಗೆಂದೇ ಕಾಯುತ್ತಿದ್ದರು ಎಂಬ ಪ್ರತೀತಿಯಿದೆ.
ಪರಿಸರದ ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಮಾರುವ, ಕೊಳ್ಳುವ ವ್ಯಾಪಾರ ವಿನಿಮಯ ಕೇಂದ್ರವಾಗಿತ್ತು ಅಯ್ಯನಕಟ್ಟೆ ಜಾತ್ರೆ. ಮಳೆಗಾಲದ ಅವಧಿಗಾಗಿನ ಜಿನಸು ಸಾಮಾನುಗಳನ್ನು ಜಾತ್ರೆಯಲ್ಲಿ ಖರೀದಿಸಿ ಸಂಗ್ರಹಿಸಿಡುತ್ತಿದ್ದರು. ಬಹಳ ದೂರದೂರುಗಳಿಂದ ವ್ಯಾಪಾರಿಗಳು ಆಗಮಿಸುತ್ತಿದ್ದರು. ಜಾತ್ರೆಯು ಬಹಳ ವಿಸ್ತಾರವಾದ ಮೈದಾನದಲ್ಲಿ ನಡೆಯುತ್ತಿದ್ದರೂ ಅಂಗಡಿ ಸಂತೆಗಳಿಗೆ ಜಾಗ ಸಾಕಾಗುತ್ತಿರಲಿಲ್ಲವಂತೆ ಎಂಬ ಹಿರಿಯರ ಮಾತುಗಳು ನಮ್ಮನ್ನು ಊಹೆಗೂ ನಿಲುಕದ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹಾಗೆಯೇ ಯಕ್ಷಗಾನ ಬಯಲಾಟ ಎಂಬ ತುಳುನಾಡಿನ ಸಾಂಸ್ಕೃತಿಕ ಕಲಾಪ್ರಕಾರದ ಪ್ರದರ್ಶನಕ್ಕೆ ಹಾಗೂ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರದಲ್ಲೂ ಗೆಜ್ಜೆ ಕಟ್ಟಿ ವೇಷಧಾರಿಗಳಾಗುವ ಹೊಸಕಲಾವಿದರು ತಮ್ಮ ಕಲಾಬದುಕಿನ ದಿವ್ಯಾರಂಭವನ್ನು ಅಯ್ಯನಕಟ್ಟೆ ಜಾತ್ರೆಯಲ್ಲೇ ಮಾಡುತ್ತಿದ್ದರು ಎಂಬುದು ಹಿರಿಯರ ನೆನಪಿನ ಬುತ್ತಿ. ಹಾಗೆಯೇ ವಿವಿಧ ಯಕ್ಷಗಾನದ ಮೇಳಗಳು ಜಾತ್ರೆ ಸಂದರ್ಭದಲ್ಲಿ ಪ್ರದರ್ಶನ ನೀಡುತ್ತಿದ್ದವು ಮತ್ತು ವ್ಯಾಯಾಮ, ತಾಲೀಮು ಕಸರತ್ತುಗಳ ಪ್ರದರ್ಶನ, ಡೊಂಬರಾಟದಂತಹ ಜನಪದ ಕಲಾಪ್ರಕಾರದ ಪ್ರದರ್ಶನದ ಬಯಲು ವೇದಿಕೆಯಾಗಿಯೂ ಅಯ್ಯನಕಟ್ಟೆ ಜಾತ್ರೆ ಪ್ರಸಿದ್ಧಿಯಾಗಿತ್ತು ಎಂಬುದು ಹಿರಿಯರ ಅನುಭವದ ಮಾತುಗಳು. ಅಂತೂ ಪರಿಸರದ ಜನರ ಜನಜೀವನವು ಅಯ್ಯನಕಟ್ಟೆಯ ಜಾತ್ರೆಯೊಂದಿಗೆ ತಳಕು ಹಾಕಿಕೊಂಡಿತ್ತು ಎಂಬುದು ಊರ ಹಿರಿಯರಿಂದ ತಿಳಿದು ಬರುತ್ತದೆ.
ಬಾಳಿಲ ಗ್ರಾಮಕ್ಕೆ ಒಳಪಟ್ಟ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವ, ತೋಟದಮೂಲೆಯಿಂದ ಶ್ರೀ ರುದ್ರಚಾಮುಂಡಿ ದೈವ ಹಾಗೂ ಮೂರುಕಲ್ಲಡ್ಕದಿಂದ ಶ್ರೀ ಕೊಡಮಣಿತ್ತಾಯ ದೈವ ಮತ್ತು ಕಳಂಜ ಗ್ರಾಮಕ್ಕೆ ಒಳಪಟ್ಟ ತಂಟೆಪ್ಪಾಡಿಯಿಂದ ಶ್ರೀ ಶಿರಾಡಿ ದೈವ, ಕಳಂಜಗುತ್ತಿನ ಶ್ರೀ ಧೂಮಾವತಿ ದೈವ ಹೀಗೆ ದೈವಗಳ ಸ್ಥಾನಗಳಿಂದ ಭಂಡಾರಗಳನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆತಂದು ಕಳಂಜದ ವಿಷ್ಣುನಗರದ ಸಮೀಪದ ಕಲ್ಲಮಾಡ ಎಂಬಲ್ಲಿ ಮತ್ತು ಅಯ್ಯನಕಟ್ಟೆಯ ಗೌರಿ ಹೊಳೆಯ ತಟದಲ್ಲಿ ಜಾತ್ರೆಯು ವಿಜೃಂಭಣೆಯಿಂದ ನಡೆಯುತ್ತಿತ್ತು. ಸ್ವಾತಂತ್ರ್ಯಪೂರ್ವದಿಂದಲೂ ನಿರಂತರವಾಗಿ ನಡೆಯುತ್ತಿದ್ದ ಈ ಜಾತ್ರೆಯು ಜನವರಿ ತಿಂಗಳ 28, 29, ಹಾಗೂ 30ನೇ ದಿನಾಂಕದಂದು ನಡೆಯುತ್ತಿದ್ದುದು, 1948ರಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯ ಕಾರಣದಿಂದಾಗಿ ಜನವರಿ 31ಕ್ಕೆ ವಿಸ್ತರಿಸಲ್ಪಟ್ಟಿತ್ತು. ಆ ಬಳಿಕವೂ ಕೆಲವರ್ಷಗಳ ಕಾಲ ಜಾತ್ರೆ ನಡೆದು ಮುಂದೆ ಕಾರಣಾಂತರಗಳಿಂದ ಜಾತ್ರೆಯು ನಿಂತು ಹೋಯಿತು. ಸ್ವಾತಂತ್ರ್ಯಾನಂತರ ಅಭಿವೃದ್ಧಿ ಮತ್ತು ಆಧುನಿಕತೆಯ ಸ್ಪರ್ಶ ವೇಗ ಪಡೆದುಕೊಂಡು ಮೂಲಭೂತ ಸೌಕರ್ಯಗಳು ವಿಸ್ತಾರಗೊಳ್ಳುತ್ತಿದ್ದಂತೆ ಜನರೂ ಆಯಾ ಉದ್ದೇಶಗಳಿಗೆ ಪರವೂರಿನ ಸಂಪರ್ಕ ಹೊಂದಿ ವ್ಯವಹರಿಸತೊಡಗಿದ ಪರಿಣಾಮ ಅಯ್ಯನಕಟ್ಟೆ ಜಾತ್ರೆಗಿದ್ದ ವ್ಯಾವಹಾರಿಕ ಆಯಾಮವೂ ನಷ್ಟವಾಯಿತು. ಮತ್ತೆ ಅಯ್ಯನಕಟ್ಟೆ ಜಾತ್ರೆಯನ್ನು ನಡೆಸುವ ಪ್ರಯತ್ನದಿಂದ ಒಂದೆರಡು ವರ್ಷ ಜಾತ್ರೆ ನಡೆದು ಕೊನೆಯದಾಗಿ 1988ರಲ್ಲಿ ಜಾತ್ರೆ ನಡೆಯಿತು. ಅಂದು ಜಾತ್ರೆಗೆ ಮರುಚಾಲನೆ ನೀಡಿದ ಹಿರಿಯರೆಲ್ಲಾ ಈಗ ಇಹಲೋಕ ತ್ಯಜಿಸಿದ್ದಾರೆ. ಹಾಗೆಯೇ ಹಿಂದೆ ಜಾತ್ರಾ ವೈಭವಕ್ಕೆ ಸಾಕ್ಷಿಗಳಾಗಿದ್ದವರು ಈಗ ಇಳಿ ವಯಸ್ಸಿನ ಹಿರಿಯರಾಗಿದ್ದಾರೆ.
ಅಯ್ಯನಕಟ್ಟೆ ಜಾತ್ರೆ ಆರಂಭವಾದ ಬಗ್ಗೆ ಮತ್ತು ಸ್ಥಗಿತಗೊಂಡ ಬಗ್ಗೆ ಖಚಿತವಾದ ಮಾಹಿತಿಗಳಿಲ್ಲದಿದದ್ದರೂ, ಭೂಸುಧಾರಣಾ ಕಾಯ್ದೆ ಜಾರಿ ಬಂದ ಬಳಿಕ ಗೇಣಿಗೆ ಪಡೆದುಕೊಂಡಿದ್ದ ಕೃಷಿ ಜಮೀನುಗಳೆಲ್ಲಾ ಗೇಣಿದಾರರ ಪಾಲಾಗಿ ಜಾತ್ರೆ ನಡೆಸಲು ಆರ್ಥಿಕ ಸಂಕಷ್ಟ ಎದುರಾಗಿಯೋ ಏನೋ ಜಾತ್ರೆ ನಿಂತು ಹೋಯಿತು ಎಂದು ಅಂದಾಜಿಸಲಾಗಿದೆ. ಕಾರಣಾಂತರಗಳಿಂದ ಈ ಜಾತ್ರೆಯು ಸ್ಥಗಿತಗೊಂಡಿದ್ದರಿಂದ ದೈವಗಳು ನೆಲೆಗೊಂಡ ಸುತ್ತಲಿನ ಪರಿಸರದ ವಾಸಿಗಳಿಗೆ ದೋಷ ಬಾಧೆಗಳು ಕಾಣಲಾರಂಭಿಸಿತ್ತು. ದೈವ ನೆಲೆಯ ವ್ಯಾಪ್ತಿಗೊಳಪಟ್ಟ ಪರಿಸರದಲ್ಲಿ ಯಾವುದೇ ಅವಘಡಗಳು ಸಂಭವಿಸಿದರೂ ಅಯ್ಯನಕಟ್ಟೆ ಜಾತ್ರೆಯು ನಿಂತು ಹೋಗಿದ್ದರ ಪರಿಣಾಮ ಎಂಬ ಅಭಿಪ್ರಾಯಗಳು ಸಾಮಾನ್ಯವಾಗಿ ವ್ಯಕ್ತವಾಗತೊಡಗಿದವು. ಹಾಗಾಗಿ ದೈವಾರಾಧನೆ ಮತ್ತೆ ಮರುಹುಟ್ಟು ಪಡೆದು ವೈಭವದ ಅಯ್ಯನಕಟ್ಟೆ ಜಾತ್ರೆ ಮರುಕಳಿಸುವಂತಾಗಲು ಊರಿನ ಜನರ ಒಳಮನಸ್ಸು ಮಿಡಿಯುತ್ತಿತ್ತು. ಜಾತ್ರೆ ನಿಂತು ಹೋಗಿರುವುದರಿಂದ ಊರಿಗೆ ಒಳಿತು ಮತ್ತು ಶ್ರೇಯಸ್ಸಾಗುವುದಿಲ್ಲ ಎಂಬುದನ್ನು ಕಾಲ ಕ್ರಮೇಣ ಊರಿನ ಹಿರಿಯರು ಮನಗಂಡು, ಪ್ರಶ್ನಾ ಚಿಂತಕರು, ಊರ ಮಹನೀಯರು ಮತ್ತು ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಯಂತೆ ಊರಿನ ಹಿರಿಯರು ಮತ್ತು ಸಮಸ್ತ ದೈವ ಭಕ್ತರು ಒಟ್ಟಾಗಿ ಈ ಜಾತ್ರೆಗೆ ಮತ್ತೆ ಮರುಜೀವ ಕೊಡುವ ಒಮ್ಮತಾಭಿಪ್ರಾಯಕ್ಕೆ ಬಂದು ಮುಂದಡಿಯಿಟ್ಟು ದೈವಾರಾಧನೆಯ ಪರಿಸರಕ್ಕೊಳಪಟ್ಟವರೆಲ್ಲರ ಸಹಕಾರ ಮತ್ತು ಪರಿಶ್ರಮದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ದೈವ ಸಾನಿಧ್ಯವನ್ನು ಅಭಿವೃದ್ಧಿಪಡಿಸಿ ಜೀರ್ಣೋದ್ಧಾರದೊಂದಿಗೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು 2020 ನೇ ಇಸವಿ ಜನವರಿ 25 ರಿಂದ 27ರ ವರೆಗೆ ಹಾಗೂ ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆಯು ಜನವರಿ 27 ರಿಂದ 30ರ ವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆದು ದೈವಾರಾಧಕರ ಅದೆಷ್ಟೋ ವರ್ಷದ ಕನಸು ಸಾಕಾರಗೊಂಡಿತ್ತು. ಪೌರಾಣಿಕ ಹಿನ್ನೆಲೆಯ ಮೂಲ ವೈಭವ ಮರೆಯಾದರೂ ಜಾತ್ರೆಯು ಸಂಭ್ರಮ, ಸಡಗರದಿಂದ ಮರುಕಳಿಸುವ ಕಾಲ, ಸುಯೋಗ ದೈವಗಳ ಅನುಗ್ರಹದಿಂದ ಕೂಡಿಬಂದಿದೆ. ಅಯ್ಯನಕಟ್ಟೆಯ ಗೌರಿಯ ಹೊಳೆಯ ತಟದಲ್ಲಿ ನಡೆಯುತ್ತಿದ್ದ ದೈವಗಳ ನರ್ತನ ಸೇವೆಗಳು ಕಲ್ಲಮಾಡದ ಪಕ್ಕದಲ್ಲಿ ನಡೆಯುತ್ತದೆ. ಜಾತ್ರೆಯು ಸ್ಥಳ ಪುರಾಣದ ಅಯ್ಯನಕಟ್ಟೆ ಸ್ಥಳನಾಮದ ಜಾಗದಲ್ಲಿ ನಡೆಯುತ್ತಿಲ್ಲವಾದರೂ ಜಾತ್ರೆಗೆ ‘ಅಯ್ಯನಕಟ್ಟೆ ಜಾತ್ರೆ’ ಎಂಬ ಇತಿಹಾಸದ ಮೆರುಗನ್ನು ಶಾಶ್ವತವಾಗಿ ನೀಡಲಿದೆ. ನೂರಾರು ವರ್ಷಗಳ ಇತಿಹಾಸ ಇರುವ ಅಯ್ಯನಕಟ್ಟೆ ಜಾತ್ರೆಯು ಕೇವಲ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಇದು ಮತ ಧರ್ಮವನ್ನು ಮೀರಿದ ಆರಾಧನೆ ಮತ್ತು ನಂಬಿಕೆಯಾಗಿದ್ದು, ನಿರ್ದಿಷ್ಟ ಜಾತಿ ಸಮುದಾಯಗಳನ್ನು ಪ್ರತಿನಿಧಿಸದೆ ಸಮಷ್ಟಿಯನ್ನು ಪ್ರತಿನಿಧಿಸುವ ಜಾತ್ರೆಯಾಗಿದೆ.
ಸಾರ್ವಭೌಮತೆಯನ್ನು ಸಾಂಕೇತಿಸುವ ಉಳ್ಳಾಕುಲು ಸೃಷ್ಟಿಯು ದೇವರ ಸಂಕಲ್ಪದಂತೆ ಶಿಷ್ಟರ ರಕ್ಷಣೆಗಾಗಿಯೇ ಇದ್ದು, ತುಳುನಾಡಿನ ಇತರ ದೈವಗಳು ಉಳ್ಳಾಕುಲು ದೈವದ ಅಧೀನವಾಗಿ ಅಥವಾ ಸಪರಿವಾರ ದೈವಗಳಾಗಿ ಆರಾಧನೆ ಹೊಂದುವಂತಾಗಿದೆ. ಜೀರ್ಣೋದ್ಧಾರದೊಂದಿಗಿನ ಜಾತ್ರೆಯ ಬಳಿಕ ಎರಡನೇ ವರ್ಷದ ಅಯ್ಯನಕಟ್ಟೆ ಜಾತ್ರೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯ ಊರಿನ ಮತ್ತು ತುಳುನಾಡಿನ ದೈವ ಭಕ್ತರದ್ದಾಗಿದೆ. ಉಳ್ಳಾಕುಲು ತಮ್ಮ ಆರಾಧನಾ ಭೌಗೋಳಿಕತೆಯಲ್ಲಿ ಸಾಮಾಜಿಕ ಸ್ತರಮಾನವನ್ನು ಮೀರಿ ‘ದೇವರಿಗೆ ದೇವರು, ದೈವಗಳಿಗೆ ದೈವಗಳು’ ಎನ್ನುವ ಪರಿಕಲ್ಪನೆಯಲ್ಲಿ ಆರಾಧನೆ ಹೊಂದುತ್ತಿದ್ದು, ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ದೈವ ಸಾಕ್ಷಾತ್ಕಾರವಾಗುತ್ತದೆ ಹಾಗೂ ದೈವತ್ವದ ಬಿಂದುವೊಂದು ಭಕ್ತ ಮನಸ್ಸಿನಲ್ಲಿ ಸಿಂಧುವಾಗಿ ಜೀವನ ಪರಿಪೂರ್ಣವಾಗುತ್ತದೆ ಎನ್ನವಂತೆ ಇದೇ 26 ಮತ್ತು 27 ರಂದು ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ 28 ಮತ್ತು 29 ರಂದು ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಕೃಪಾಶೀರ್ವಾದವನ್ನು ಪಡೆಯುವ ಸುಯೋಗ ಭಕ್ತಾಧಿಗಳಿಗೆ ಒಳಿದು ಬಂದಿದೆ. ಅಗೋಚರ ಶಕ್ತಿಯಾದ ದೈವಗಳ ಕಾರಣಿಕ ಮತ್ತು ಪ್ರೇರಣೆಯಿಂದ ಮರುಹುಟ್ಟು ಪಡೆದ ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆಯು ಯಾವುದೇ ವಿಘ್ನಗಳು ಎದುರಾಗದೇ ನಿರಂತರವಾಗಿ ಜಾತಿ ಮತ ಬೇಧವಿಲ್ಲದೇ ಊರ ಸಮಸ್ತರು ಒಮ್ಮನಸ್ಸಿನಿಂದ, ಸಮರ್ಪಣಾ ಭಾವದಿಂದ ಮತ್ತು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಹೋಗುವಂತಾಗಲು ಸಕಲ ದೈವಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.