ಹಲ್ಲುಗಳು ಇತರ ಅಂಗಗಳಂತೆ ಶ್ರೇಷ್ಠ ಅಂಗವಾಗಿದೆ. ಅದರ ರಕ್ಷಣೆ ಅಗತ್ಯ ಎಂದು ಸುಳ್ಯ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕರುಣಾಕರ ಕೆ.ವಿ ಹೇಳಿದರು. ಇವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜ.22ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಬಾಯಿ ನಮ್ಮ ದೇಹದ ಪ್ರವೇಶ ದ್ವಾರ ಇದರ ಸ್ವಚ್ಚತೆ ಮತ್ತು ಆರೋಗ್ಯದ ರಕ್ಷಣೆಯೆ ಇಡೀ ದೇಹದ ರಕ್ಷಣೆಯಾಗಿದೆ. ಹುಳುಕು ಹಲ್ಲುಗಳನ್ನು ಸರಿ ಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ, ಹಲ್ಲುಗಳು ಕೇವಲ ಆರೋಗ್ಯ ಮಾತ್ರವಲ್ಲ ಮುಖದ ಸೌಂದರ್ಯವನ್ನು ವೃದ್ಧಿಸುತ್ತದೆ. ಆಹಾರವನ್ನು ಸರಿಯಾಗಿ ಜಗಿಯುವುದರಿಂದ ಪಚನಕ್ರಿಯೆಗೂ ಸಹಕಾರಿಯಾಗಿದೆ. ಚಿಕ್ಕ ಮಕ್ಕಳ ಹಲ್ಲುಗಳನ್ನು ಚಿಕ್ಕಂದಿನಿಂದಲೇ ರಕ್ಷಿಸಿ ಎಲ್ಲರ ಆರೋಗ್ಯವನ್ನು ಕಾಪಾಡಿಕೊಳ್ಳಿ, ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಡಾ|ಹಿಮಕರ, ಮಕ್ಕಳ ತಜ್ಞೆ ಡಾ| ರಜನಿ , ಶಸ್ತ್ರಚಿಕಿತ್ಸಾ ವಿಭಾಗದ ಡಾ| ಹರೀಶ್, ನೇತ್ರ ತಜ್ಞೆ ಡಾ| ಅರ್ಚನಾ, ದಂತ ವೈದ್ಯೆ ಹಾಗೂ ಶಿಬಿರದ ಆಯೋಜಕಿ ಡಾ| ಜೋತ್ಸ್ನಾ , ಕೆ.ವಿ.ಜಿ ದಂತ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು 142 ಜನ ಚಿಕಿತ್ಸೆಯ ಪ್ರಯೋಜನವನ್ನು ಪಡೆದುಕೊಂಡರು. ತಾಲೂಕು ಆರೋಗ್ಯ ಮಿತ್ರ ಮುರಳಿ ಚಿಕ್ಕಿನಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
- Thursday
- November 21st, 2024