ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುಂಡೆ ಎಂಬಲ್ಲಿ ಕಿರು ಸೇತುವೆ ಕಾಮಗಾರಿ ಅರ್ಧದಲ್ಲಿ ಉಳಿದಿದ್ದು ಗ್ರಾಮಸ್ಥರ ಹಲವು ವರ್ಷಗಳ ಕನಸು ಕನಸಾಗಿಯೇ ಉಳಿದಿದೆ. ಸುಳ್ಯ – ಉಬರಡ್ಕ ಮುಖ್ಯ ರಸ್ತೆಯಲ್ಲಿ ಸಿಗುವ ಹುಳಿಯಡ್ಕದಿಂದ ಮಿತ್ತೂರು(ಕೆದಂಬಾಡಿ)ಗೆ ಸಂಪರ್ಕ ಸಾಧಿಸುವ ರಸ್ತೆಗೆ ಕಳೆದ ಕೆಲವು ವರುಷಗಳ ಹಿಂದೆ ಉರುಂಡೆ ಎಂಬ ಪ್ರದೇಶದಲ್ಲಿ ಉಬರಡ್ಕ ಗ್ರಾಮ ಪಂಚಾಯತಿ ವತಿಯಿಂದ ಕಿರು ಸೇತುವೆಯ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಗ್ರಾಮ ಪಂಚಾಯತಿ ವತಿಯಿಂದ ನೆರವೇರಿಸಲಾಗಿತ್ತು.
ಆದರೆ ಇದೀಗ ಶಂಕು ಶಂಕುಸ್ಥಾಪನೆ ನೆರವೇರಿ ಹಲವು ವರುಷಗಳೇ ಕಳೆದು ಹೋಗಿದೆ, ಹಲವಾರು ಚುನಾವಣೆ ಅದರ ಹೆಸರಲ್ಲಿ ನಡೆದು ಹೋಗಿದೆ. ಆದರೆ ಅದು ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಯಾವುದೇ ಸಂಬಂಧಪಟ್ಟ ವ್ಯಕ್ತಿಗಳು, ಅಧಿಕಾರಿಗಳು ಯಾವುದೇ ಗಮನವನ್ನು ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನಾದರೂ ಸ್ಥಳಿಯಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಗ್ರಾಮಸ್ಥರ ಬಹುದಿನಗಳ ಕನಸನ್ನು ಈಡೇರಿಸಬೇಕಾಗಿದೆ. ಇಂತಹ ವ್ಯವಸ್ಥೆಗಳಿಂದಾಗಿಯೇ ಜನರು ಮತದಾನ ಬಹಿಷ್ಕಾರದ ಧ್ವನಿ ಎತ್ತುತ್ತಿದ್ದಾರೆ ಆದ್ದರಿಂದ ಆಡಳಿತ ಇನ್ನಾದೂ ಅರ್ಧೈಸಿಕೊಂಡು ಕಾರ್ಯೋನ್ಮುಖವಾಗಬೇಕಿದೆ.
ಇದು ಅವೈಜ್ಞಾನಿಕವಾಗಿ ಈ ಹಿಂದೆ ನಿರ್ಮಾಣವಾಗಿದೆ. ತಿರುವು ಜಾಗದಲ್ಲಿ ಸೇತುವೆಯನ್ನು ಒಂದು ಬದಿಗೆ ನಿರ್ಮಾಣ ಮಾಡಲಾಗಿದೆ. ತಡೆಗೋಡೆ ಅಗಬೇಕಿದೆ, ಇದಕ್ಕೆ ಇನ್ನೂ ಹೆಚ್ಚಿನ ಅನುದಾನ ಬೇಕಾಗಬಹುದು. ಈ ರಸ್ತೆಗೆ ನಾನು ಅಧ್ಯಕ್ಷನಾಗಿರುವಾಗ ಕಾಂಕ್ರೀಟ್ ರಸ್ತೆ ಮಾಡಿದ್ದೇವೆ. ಇನ್ನೂ ನೂತನ ಆಡಳಿತ ರಚನೆಯಾದ ಬಳಿಕ ಈ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಮಾಜಿ ಗ್ರಾ.ಪಂ.ಅಧ್ಯಕ್ಷ, ಹಾಲಿ ಸದಸ್ಯ ಹರೀಶ್ ಉಬರಡ್ಕ ತಿಳಿಸಿದ್ದಾರೆ.