ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಘಟನೆಗಳು ದೇಣಿಗೆ ಸಂಗ್ರಹಿಸುವ ಕ್ರಮ ಸರಿಯಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಸುಳ್ಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ. ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನ್ಯಾಯಾಲಯದ ತೀರ್ಪಿನ ಪ್ರಕಾರ ಹಾಗೂ ಎಲ್ಲಾ ಅಡ್ಡಿಗಳು ನಿವಾರಣೆಯಾಗಿ ರಾಮ ಮಂದಿರ ನಿರ್ಮಾಣವಾದರೆ ಸಂತೋಷವೇ. ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಆದರೆ ಈ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಟ್ರಸ್ಟ್‌ಗೆ ವಹಿಸಲಾಗಿದೆ. ಆದರೆ ಈಗ ಕೆಲವು ಸಂಘಟನೆಗಳಿಂದಾಗಿ ದೇಣಿಗೆ ಸಂಗ್ರಹ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಸರಕಾರದ ಟ್ರಸ್ಟ್ ಇರುವಾಗ ಸಂಘಟನೆಗಳು ದೇಣಿಗೆ ಸಂಗ್ರಹಿಸುವ ಉದ್ಧೇಶ ಏನು ಎಂದು ಪ್ರಶ್ನಿಸಿದ ವೆಂಕಪ್ಪ ಗೌಡರು, ದೇಣಿಗೆ ಸಂಗ್ರಹಿಸುತ್ತಿರುವವರಲ್ಲಿ ಅಕೌಂಟೆಬಿಲಿಟಿ ಇಲ್ಲ. ಹಣ ಕೊಟ್ಟವರಿಗೆ ನೀಡಲಾಗುತ್ತಿರುವ ರಶೀದಿಯಲ್ಲಿ ಅಕೌಂಟ್ ನಂಬರ್ ಕೂಡಾ ಇಲ್ಲ. ದೇಣಿಗೆ ಸಂಗ್ರಹಣೆ ಕುರಿತಂತೆ ಈ ಸಂಘಟನೆಗಳು ಗೊಂದಲ ಹುಟ್ಟುಹಾಕುತ್ತಿವೆ. ಹಾಗಾದರೆ ಹಣ ಯಾರ ಕೈಗೆ ಹೋಗಿ ತಲುಪುತ್ತದೆ ಅಥವಾ ಇದು ಅವರ ಪಕ್ಷದ ಬಲವರ್ಧನೆಗೆ ಮಾಡುತ್ತಿರುವ ಕ್ರಮವೇ ಎಂದು ಪ್ರಶ್ನಿಸಿದರು. ಒಂದು ವೇಳೆ ದೇಣಿಗೆ ಸಂಗ್ರಹ ಮಾಡಲೇಬೇಕೆಂದಾದರೆ ಸರಕಾರಿ ಮಟ್ಟದಲ್ಲಿ ಮಾಡಲಿ. ಅಥವಾ ಡಿಜಿಟಲ್ ತಂತ್ರಜ್ಞಾನ ಇಷ್ಟು ಮುಂದುವರಿದಿರುವಾಗ ನೇರವಾಗಿ ಹಣ ಹಾಕುವಂತಹ ವ್ಯವಸ್ಥ ಮಾಡಲಿ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿಯನ್ನು ಮಂಗಳೂರಿನಲ್ಲಿ ನಡೆಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರ ವಿಕೇಂದ್ರ್ರಿಕರಣದ ಉದ್ದೇಶದಿಂದಲೇ ಗ್ರಾಮ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಿದ್ದೂ ಮೀಸಲಾತಿ ನಿಗದಿಯನ್ನು ಮಂಗಳೂರಿನಲ್ಲಿ ನಡೆಸಿರುವುದು ಸರಿಯಲ್ಲ, ಇಲ್ಲಿಂದ ಎಲ್ಲಾ ಸದಸ್ಯರು ಅಷ್ಟು ದೂರ ಹೋಗಲು ಸಾಧ್ಯವಿಲ್ಲ ಸಚಿವರೂ ಆಗಿರುವ ಅಂಗಾರರು ಇದನ್ನು ಸುಳ್ಯದಲ್ಲೇ ಮಾಡಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರಾದ ಸದಾನಂದ ಮಾವಾಜಿ, ಪರಶುರಾಮ ಚಿಲ್ತಡ್ಕ, ಧರ್ಮಪಾಲ ಕೊಯಿಂಗಾಜೆ, ಸಚಿನ್‌ರಾಜ್ ಶೆಟ್ಟಿ, ದಿನೇಶ್ ಸರಸ್ವತಿಮಹಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
- Thursday
- November 21st, 2024