ಪೆರುವಾಜೆ ಗ್ರಾಮದ ಕುಂಡಡ್ಕ ಮೂಲ ಸೌಕರ್ಯ ಅಭಿವೃದ್ಧಿ ಚಿಂತನ ಸಮಿತಿ ಇದರ ಆಶ್ರಯದಲ್ಲಿ ಕುಂಡಡ್ಕ- ಚೆನ್ನಾವರ ರಸ್ತೆ ಅಭಿವೃದ್ಧಿ ಬೇಡಿಕೆಗೆ ಸಂಬಂಧಿಸಿ ಜ.11 ರಂದು ಕುಂಡಡ್ಕದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಾರ್ವಜನಿಕ ಹಿತ ಚಿಂತನ ಸಮಿತಿ ಚೆನ್ನಾವರ, ಪಾಲ್ತಾಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಚೆನ್ನಾವರದಲ್ಲಿ ನಡೆಯಲಿರುವ ಜನಪ್ರತಿನಿದಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಪೂರಕವಾಗಿ ಈ ಸಭೆ ನಡೆಯಿತು.
ಪೆರುವಾಜೆ ಗ್ರಾ.ಪಂ.ಸದಸ್ಯ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಜನರ ಮೂಲಭೂತ ಬೇಡಿಕೆಗೆ ಪಕ್ಷಾತೀತ ನೆಲೆಯಲ್ಲಿ ನಾವು ಪ್ರಯತ್ನ ಮಾಡಬೇಕು. ರಸ್ತೆ, ಸೇತುವೆ ನಿರ್ಮಾಣಕ್ಕೆ ವಿವಿಧ ಸ್ತರದ ಜನಪ್ರತಿನಿಧಿಗಳ ಸಹಕಾರದ ಆವಶ್ಯಕತೆ ಇದ್ದು, ಸಂವಾದದಲ್ಲಿ ಮನವಿ ಸಲ್ಲಿಸೋಣ. ಜತೆಗೆ ಸಭೆಯ ನಿರ್ಧಾರದಂತೆ ನಿಗದಿತ ಅವಧಿಯೊಳಗೆ ಬೇಡಿಕೆ ಈಡೇರದಿದ್ದರೆ ಮುಂದಿನ ಹಂತದ ನಿರ್ಧಾರ ಪ್ರಕಟಿಸೋಣ ಎಂದರು.
ಚೆನ್ನಾವರ ಸಾರ್ವಜನಿಕ ಹಿತ ಚಿಂತನ ಸಮಿತಿಯ ಉಪಾಧ್ಯಕ್ಷ ಜಯಂತ ಕುಂಡಡ್ಕ ಮಾತನಾಡಿ, ಸಂವಾದದ ರೂಪುರೇಷೆಯ ಕುರಿತು ಸಭೆಗೆ ಮಾಹಿತಿ ನೀಡಿದರು.
ಚೆನ್ನಾವರ-ಕುಂಡಡ್ಕ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಗೌರಿ ಹೊಳೆಗೆ ಚೆನ್ನಾವರ ಬಳಿಯ ಸೇತುವೆ ಪುನರ್ ನಿರ್ಮಾಣಕ್ಕೆ ಪಕ್ಷಾತೀತ ಹೋರಾಟ ನಡೆಸುವುದು, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾ.ಪಂ., ಜಿ.ಪಂ., ಶಾಸಕ, ಸಂಸದರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ರಸ್ತೆ, ಸೇತುವೆ ನಿರ್ಮಾಣ ಬೇಡಿಕೆ ಈಡೇರದಿದ್ದರೆ ಮುಂಬರುವ ಜಿ.ಪಂ., ತಾ.ಪಂ.ಚುನಾವಣೆ ಬಹಿಷ್ಕರಿಸಲು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಈ ಬಗ್ಗೆ ಕುಂಡಡ್ಕ, ಚೆನ್ನಾವರ ಭಾಗದ ಪ್ರತಿ ಮನೆ ಮನೆಗೆ ಮಾಹಿತಿ ತಲುಪಿಸಲು ನಿರ್ಧರಿಸಲಾಯಿತು.
ಸಮಿತಿಗೆ ಪದಾಧಿಕಾರಿಗಳ ಆಯ್ಕೆ : ಕುಂಡಡ್ಕ ಮೂಲ ಸೌಕರ್ಯ ಅಭಿವೃದ್ಧಿ ಚಿಂತನ ಸಮಿತಿಯ ಅಧ್ಯಕ್ಷರಾಗಿ ಗ್ರಾ.ಪಂ.ಸದಸ್ಯ ಜಗನ್ನಾಥ ಪೂಜಾರಿ ಮುಕ್ಕೂರು, ಕಾರ್ಯದರ್ಶಿಯಾಗಿ ದಯಾನಂದ ರೈ ಕನ್ನೆಜಾಲು, ಉಪಾಧ್ಯಕ್ಷರಾಗಿ ಗ್ರಾ.ಪಂ.ಮಾಜಿ ಸದಸ್ಯ ಚನಿಯ ಕುಂಡಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಪ್ರತಿ ಮನೆಯ ಓರ್ವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ದಯಾನಂದ ರೈ ಕನ್ನೆಜಾಲು, ಬಾಲಕೃಷ್ಣ ರೈ ಕನ್ನೆಜಾಲು, ಚನಿಯ ಕುಂಡಡ್ಕ, ಹನೀಪ್ ಇಂದ್ರಾಜೆ, ಝುಬೈರ್ ಕುಂಡಡ್ಕ, ಸುಂದರ ಚೆನ್ನಾವರ, ವೆಂಕಟರಮಣ, ರವಿ, ರಮೇಶ್ ಕಾನಾವು, ವಸಂತ ಕೆ.ಸಿ., ಅಹ್ಮದ್ ಕುಂಞಿ, ಜೀವನ್ ರೈ ಕನ್ನೆಜಾಲು, ಮಹೇಶ್ ಕುಂಡಡ್ಕ, ಇಲಿಯಾಸ್ ಕುಂಡಡ್ಕ, ಕೃಷ್ಣಪ್ಪ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು.