ರಾಜ್ಯದ ಪ್ರಮುಖ ಶ್ರದ್ದಾಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಯಾವುದೇ ಜಾಗವನ್ನು ಯಾವುದೇ ಇಲಾಖೆ, ಸಂಸ್ಥೆಗಳಿಗೆ ಪರಭಾರೆ ಮಾಡುವುದು ಸರಿಯಲ್ಲ. ದೇವಸ್ಥಾನದ ಜಾಗವನ್ನು ಉಳಿಸಿಕೊಂಡು ದೇವಸ್ಥಾನದ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಒತ್ತಾಯಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿಯವರು ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಯಾವುದೇ ಇಲಾಖೆಗೆ ಪರಭಾರೆ ಮಾಡಿದರೂ ಅದು ದೇವಸ್ಥಾನದ ಆಸ್ತಿಯಾಗಿ ಇರುವುದಿಲ್ಲ,ಇದರಿಂದ ದೇವಸ್ಥಾನದ ಅಭಿವೃದ್ದಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ, ಈಗಾಗಲೇ ನೀಡಿರುವ ಶ್ರೀ ಸುಬ್ರಾಯ ದೇವರ ಕೆಲವು ಆಸ್ತಿಗಳು ದೇವಸ್ಥಾನದ ಕೈತಪ್ಪಿ ಹೋಗಿ ಅಭಿವೃದ್ದಿಗಾಗಿ ಕೊಟ್ಯಾಂತರ ರೂಪಾಯಿ ಬೆಲೆ ನೀಡಿ ದೇವಸ್ಥಾನವೇ ಖಾಸಗಿ ಆಸ್ತಿಯನ್ನು ಪಡೆಯುತ್ತಿರುವ ವಿಚಾರ ನಮಗೆ ತಿಳಿದಿದೆ ,ದೇವಳದ ಅತ್ಯಮೂಲ್ಯವಾದ ಅಭಿವೃದ್ದಿ ಕಾಯ೯ಗಳಿಗೆ ಅವಶ್ಯವಾದ ಆಸ್ತಿಯನ್ನು ಯಾವುದೇ ಇಲಾಖೆಯಾಗಲೀ, ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗಾಗಲಿ ಪರಭಾರೆ ಮಾಡಬಾರದು, ದೇವಸ್ಥಾನದ ಆಸ್ತಿಯನ್ನು ಕಾಪಾಡುವ,ರಕ್ಷಿಸುವ ಕೆಲಸವನ್ನು ಆಡಳಿತ ಮಾಡಬೇಕು. ಸುಬ್ರಹ್ಮಣ್ಯದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಪರ್ವತಮುಖಿ ಬಳಿಯ ಆರೋಗ್ಯ ಇಲಾಖೆಯ 4.5 ಎಕ್ರೆ ಜಾಗವನ್ನೇ ಬಳಸಿ 30 ಬೆಡ್ ಗಳ 24*7 ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮೋನಪ್ಪ ಮಾನಾಡು, ರವೀಂದ್ರ ರುದ್ರಪಾದ,ಜಯರಾಮ ಕಟ್ಟೆಮನೆ, ಉಮೇಶ್ ಕಜ್ಜೋಡಿ, ಶಶಿಧರ ಉಪಸ್ಥಿತರಿದ್ದರು.