ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಗೆ ಸಂಬಂಧಪಟ್ಟಂತೆ ಅಲ್ಲಿನ ತಡಗಜೆ ಗ್ರಾಮಸ್ಥರು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಚುನಾವಣಾ ಬಹಿಷ್ಕಾರದ ಮೊರೆಹೋಗಿದ್ದರು. ವಾರ್ಡಿನಲ್ಲಿ ಸುಮಾರು 25 ವರ್ಷಗಳಿಂದ ಪ್ರಮುಖ ಬೇಡಿಕೆಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳಿದ್ದರೂ ಇಲ್ಲಿನ ಪಂಚಾಯತ್ ಸದಸ್ಯರಿಂದ ಹಿಡಿದು ವಿಧಾನಸಭಾ ಸದಸ್ಯರವರೆಗೆ ಕೇವಲ ಭರವಸೆಯಲ್ಲದೆ ಸೂಕ್ತ ಸ್ಪಂದನೆ ದೊರೆಯದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ನೊಂದ ತಡಗಜೆ ಗ್ರಾಮಸ್ಥರು ಈ ಪ್ರದೇಶದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು.
ಈ ಕುರಿತಂತೆ ಚರ್ಚಿಸಲು ಡಿ.06 ರಂದು ತಡಗಜೆಯಲ್ಲಿ ಗ್ರಾಮಸ್ಥರು ಸಭೆ ಕರೆದಿದ್ದು, ಸಭೆಗೆ ಬಿಜೆಪಿ ಪಕ್ಷದ ಪರವಾಗಿ ಬಂದ ನಿವೃತ್ತ ಕಸ್ಟಮ್ಸ್ ಅಧಿಕಾರಿ ಹಾಗೂ ಸ್ಥಳಿಯರಾದ ರಾಮಕೃಷ್ಣ ಭಟ್ ಕುರುಂಬುಡೇಲುರವರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಚುನಾವಣೆ ಮುಗಿದ ತಕ್ಷಣವೇ ಈ ರಸ್ತೆಯ ಕಾಮಗಾರಿಯನ್ನು ನಾನು ಶಾಸಕರ ಅನುದಾನದಿಂದ ಮಾಡಿಸಿಕೊಡುತ್ತೇನೆ ಎಂದು ಭರವಸೆಯನ್ನು ನೀಡಿದರು. ಅವರ ಮನವಿಗೆ ಸ್ಪಂದಿಸಿ ಊರಿನ ಜನರು ಚುನಾವಣೆ ಬಹಿಷ್ಕಾರವನ್ನು ಹಿಂತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.