ಈ ಜಗತ್ತೇ ಹಾಗೆ ಒಬ್ಬ ವ್ಯಕ್ತಿ ಏನಾದರೂ ಒಂದು ಸಾಧಿಸಬೇಕೆಂದು ಹೊರಟಾಗ ಕೆಲವರು ಆ ವ್ಯಕ್ತಿಯ ಸಾಧನೆಯ ಹಾದಿಯಲ್ಲಿ ಆತನಿಗೆ ಬೆಂಗಾವಲಾಗಿ ನಿಂತರೆ ಇನ್ನೂ ಕೆಲವರು ಆತನ ಆ ಸಾಧನೆಯ ಗುರಿಯನ್ನು ಮುಟ್ಟದಂತೆ ಮಾಡಲು ತುಂಬಾ ಪ್ರಯತ್ನಿಸುತ್ತಾರೆ.
ನಾವು ಸಾಧನೆ ಮಾಡಲು ಹೊರಟಾಗ ತುಂಬಾ ಜನ ನಮ್ಮ ಕಾಲೆಳೆಯಲೆಂದೇ ಕಾಯುತ್ತಾ ಕುಳಿತಿರುತ್ತಾರೆ. ಆದರೆ ಆ ಕಾಲೆಳೆಯಲೆಂದೇ ಕಾಯುತ್ತಾ ಕುಳಿತಿರುವವರಿಗೆ ಒಂದು ವಿಷಯ ತಿಳಿದಿಲ್ಲ. ಅದೇನೆಂದರೆ “ಸಾಧಿಸಬೇಕೆಂದು ಛಲ ತೊಟ್ಟು, ಗುರಿಯನ್ನು ತಲುಪಿಯೇ ತಲುಪುವೆ ಎಂಬ ಆತ್ಮವಿಶ್ವಾಸ ಹೊಂದಿದ ಒಬ್ಬ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಆತನ ಸಾಧನೆಯ ಹಾದಿಯಿಂದ ತಪ್ಪಿಸಲು ಹಾಗೂ ಆತನ ಸಾಧನೆಯನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ.” ಏಕೆಂದರೆ ಆ ವ್ಯಕ್ತಿಯು ತಾನು ಪಡುವ ಶ್ರಮದಲ್ಲಿ ಆ ಪರಮಾತ್ಮನನ್ನು ಕಾಣುತ್ತಾನೆ. ಹಾಗೂ ಆ ಪರಮಾತ್ಮ ಎಂದಿಗೂ ಆತನ ಕೈ ಬಿಡುವುದಿಲ್ಲ.
ನಾವು ನಮ್ಮ ಸಾಧನೆಯ ಹಾದಿಯಲ್ಲಿ ನಮಗೆ ಸಹಕರಿಸಿದ ಪ್ರತಿಯೊಬ್ಬರನ್ನೂ ಯಾವತ್ತಿಗೂ ನಾವು ನಮ್ಮ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಏಕೆಂದರೆ ನಾವು ಆ ಸಾಧನೆಯ ಗುರಿಯನ್ನು ಮುಟ್ಟಲು ಅನೇಕರು ತಮ್ಮ ಜೀವನವನ್ನೇ ಪಣಕಿಟ್ಟಿರಬಹುದು.
ನಾವು ನಮ್ಮ ಸಾಧನೆಯಲ್ಲಿ ನಮಗೆ ಸಹಕರಿಸಿದವರನ್ನು ನೆನಪಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಸಾಧನೆಯ ಹಾದಿಯಲ್ಲಿ ನಮ್ಮ ಸಾಧನೆಯನ್ನು ಹಾಳು ಮಾಡಲು ಬಂದವರನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಅವಮಾನ ಮಾಡಿದವರ ಕೈಯಿಂದಲೇ ಸನ್ಮಾನ ಮಾಡಿಸಿಕೊಳ್ಳಬೇಕು.
ಕೊನೆಯಲ್ಲಿ ಒಂದು ಮಾತು
ನೀವು ಯಾವುದಾದರೂ ಒಂದು ಸಾಧನೆ ಮಾಡಲು ಹೊರಟಾಗ ಆ ಸಾಧನೆಯ ಹಾದಿಯಲ್ಲಿ ಅವಮಾನ, ಅಪಮಾನ, ಕಷ್ಟ, ನಷ್ಟಗಳು ಸಹಜ. ಹಾಗೆಂದು ಆ ಅವಮಾನ, ಅಪಮಾನ ಗಳಿಗೆಲ್ಲಾ ಹೆದರಿ ನೀವು ನಮ್ಮ ಸಾಧನೆಯ ಹಾದಿಯಿಂದ ಹಿಂದೆ ಸರಿಯಬಾರದು. ಇವತ್ತು ನೀವು ಸಾಧನೆಯ ಹಾದಿಯಲ್ಲಿ ಚಲಿಸುವಾಗ ಅವಮಾನ, ಅಪಮಾನ ಗಳು ನಿಮಗೆ ಆಗಿರಬಹುದು. ಆದರೆ ಅದಕ್ಕೆ ಹೆದರಿ ನೀವು ನಿಮ್ಮ ಸಾಧನೆಯ ಹಾದಿಯಿಂದ ಹಿಂದೆ ಸರಿಯಬೇಡಿ ಬದಲಾಗಿ ಆ ಎಲ್ಲಾ ಅವಮಾನ, ಅಪಮಾನಗಳಿಗೂ ನೀವು ನಿಮ್ಮ ಸಾಧನೆಯ ಮೂಲಕ ಉತ್ತರಿಸಿ.
✍ಉಲ್ಲಾಸ್ ಕಜ್ಜೋಡಿ