ದೆಹಲಿ ಮಿತ್ರ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರ ಆಶಯದಂತೆ ಕಳಂಜ ಗ್ರಾಮದ ಸುತ್ತಮುತ್ತಲಿನ ಜನರಿಗೆ ಅವರ ಗ್ರಾಮದ ಕಿಟಕಿಯಿಂದಲೇ ಸಾಂಸ್ಕೃತಿಕ ಜಗತ್ತಿನ ದರ್ಶನ ಮಾಡುವ ವಿಶಿಷ್ಟ ಪರಿಕಲ್ಪನೆಯೊಂದಿಗೆ, ಎಲ್ಲರನ್ನೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರೊಂದಿಗೆ ಸಾಂಸ್ಕೃತಿಕವಾಗಿ ಬೆಸುಗೆ ಹಾಕುವ ಪ್ರಯತ್ನವಾಗಿ ಬೆಳ್ಳಾರೆ ಸಮೀಪದ ಕಳಂಜ ಗ್ರಾಮದ ತಂಟೆಪ್ಪಾಡಿ ಎಂಬಲ್ಲಿ ‘ನಿನಾದ ಸಾಂಸ್ಕೃತಿಕ ಕೇಂದ್ರ’ವು ರೂಪುಗೊಳ್ಳುತ್ತಿದ್ದು ಇದರ ಉದ್ಘಾಟನಾ ಸಮಾರಂಭವು ಡಿ. 05 ರ ಶನಿವಾರದಂದು ಸಂಜೆ ಗಂಟೆ 5 ಕ್ಕೆ ಸರಿಯಾಗಿ ನಿನಾದ ತಂಟೆಪ್ಪಾಡಿಯಲ್ಲಿ ಜರುಗಲಿದೆ.
ಉದ್ಘಾಟನೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀ ಅಣ್ಣಾ ವಿನಯಚಂದ್ರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ ಭಾಗವಹಿಸಲಿರುವರು.
ಇದೇ ದಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಮಾನಿಷಾದ ಎಂಬ ಕಾಲಮಿತಿ ಯಕ್ಷಗಾನ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಲಾಸಕ್ತರು ಸರ್ಕಾರದ ಮಾರ್ಗಸೂಚಿಯನ್ವಯ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ.