ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಪ್ತಶ್ರೀ ಗೊಂಚಲು ಕಲ್ಮಡ್ಕ ಮತ್ತು ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಆಶ್ರಯದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ ಕಾರ್ಯಕ್ರಮದಡಿಯಲ್ಲಿ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಮತ್ತು ಕಿಶೋರಿಯರಿಗೆ ಮಾಹಿತಿ ಕಾರ್ಯಾಗಾರವು ನ.19 ರಂದು ಪಡ್ಪಿನಂಗಡಿ ಶಿವಗೌರಿ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೊಂಚಲು ಅಧ್ಯಕ್ಷೆ ಶ್ರೀಮತಿ ದೇವಿಕಾರವರು ವಹಿಸಿದ್ದರು. ಉದ್ಘಾಟನೆಯನ್ನು ಕಿಶೋರಿಯರಾದ ಕು| ತಸ್ಮಯಿ ನಡ್ಕ, ಭವ್ಯ, ರೇಷ್ಮಾ. ಸಿ, ಧನ್ಯ.ಎಂ ಇವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ತಾಲೂಕು ಸದಸ್ಯರಾದ ಶ್ರೀ ಅಬ್ದುಲ್ ಗಫೂರ್ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳ ಮತ್ತು ಸ.ಹಿ.ಪ್ರಾ.ಶಾಲೆ ಪಡ್ಪಿನಂಗಡಿಯ ಶಿಕ್ಷಕಿ ಕು|ಲಾವಣ್ಯರವರು ಕಿಶೋರಿಯರಿಗೆ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ.ಕೆ ಯವರು ‘ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ’ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ರೇಣುಕಾರವರು ಮಕ್ಕಳ ಶಿಶು ಪ್ರದರ್ಶನದ ಬಗ್ಗೆ ಮಾತನಾಡಿದರು.
6 ತಿಂಗಳಿನಿಂದ 1 ವರ್ಷದ ವರ್ಷದವರೆಗಿನ ಮಕ್ಕಳ ಶಿಶು ಪ್ರದರ್ಶನಕ್ಕೆ ಆರೋಗ್ಯ ಇಲಾಖೆಯಿಂದ ಮತ್ತು 1 ವರ್ಷದಿಂದ 2 ವರ್ಷದವರೆಗಿನ ಮಕ್ಕಳ ಶಿಶು ಪ್ರದರ್ಶನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಥಮ, ದ್ವಿತೀಯ, ತೃತೀಯ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಕಿಶೋರಿಯರು, ಸಪ್ತಶ್ರೀ ಸ್ತ್ರೀಶಕ್ತಿ ಗೊಂಚಲಿನ ಸದಸ್ಯರು, ಶಾಲಾ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಕಸ್ತೂರಿ ಸ್ವಾಗತಿಸಿ, ನಳಿನಿ ವಂದಿಸಿದರು. ಶ್ರೀಮತಿ ಕಮಲ ನಡ್ಕ ಕಾರ್ಯಕ್ರಮ ನಿರೂಪಿಸಿದರು.