ಹಲವು ತಿಂಗಳುಗಳಿಂದ ಕೋವಿಡ್ 19 ವೈರಸ್ಸಿನ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಹಬ್ಬ ಹರಿದಿನಗಳನ್ನು ಸಡಗರದಿಂದ ಆಚರಿಸಿಕೊಳ್ಳಲು ಸಾಧ್ಯವಾಗದೆ ನಗರ ಬೀದಿಗಳು, ಗ್ರಾಮೀಣ ಭಾಗಗಳು ಮಂಕಾಗಿದ್ದವು. ಆದರೆ ಕಳೆದ ಒಂದು ವಾರಗಳಿಂದ ದೀಪಾವಳಿಯ ಸಡಗರದಲ್ಲಿ ನಾಡಿನ ಜನತೆ ಮತ್ತೊಮ್ಮೆ ಸಹಜ ಜೀವನದತ್ತ ಹೆಜ್ಜೆಯನ್ನು ಇಟ್ಟಂತೆ ಕಾಣುತ್ತಿದೆ.
ನೂತನ ಬಟ್ಟೆ ಬರೆಗಳ ತಮ್ಮ ತಮ್ಮ ಮನೆಗೆ ಬೇಕಾದ ಆಹಾರ ಸಾಮಗ್ರಿಗಳ ಖರೀದಿಗಾಗಿ ಆಗಮಿಸಿರುವುದು ನಗರ ಬೀದಿಗಳಲ್ಲಿ ಮತ್ತು ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಸರಕಾರದ ಆದೇಶ ಮತ್ತು ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು ಜಾಗರೂಕರಾಗಿ ದೀಪಾವಳಿ ಹಬ್ಬದ ಸಡಗರದಲ್ಲಿ ಪರಸ್ಪರ ಸಂತೋಷ ವಿನಿಮಯವನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ನಗರ ಪ್ರದೇಶಗಳ ವ್ಯಾಪಾರ ಕೇಂದ್ರಗಳಲ್ಲಿ ಮತ್ತೊಮ್ಮೆ ಗ್ರಾಹಕರ ಭರಾಟೆಯ ಖರೀದಿಗಳು ನಡೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಪಟಾಕಿ ಸಿಡಿಸುವ ಕಾರ್ಯಗಳಿಗೆ ಸರಕಾರವು ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದ್ದರೂ ಸಂತೋಷದ ದಿನಗಳನ್ನು ಆಚರಿಸಿಕೊಳ್ಳಲು ಸಣ್ಣಪುಟ್ಟ ಪಟಾಕಿ ಕೇಂದ್ರಗಳು ಅಲ್ಲಲ್ಲಿ ತೆರೆದಿದ್ದು ಹಬ್ಬದ ಸಂತೋಷದ ವಾತಾವರಣವನ್ನು ನಿರ್ಮಾಣಗೊಳಿಸಿದೆ. ಪಟಾಕಿ ನಿಷೇದದ ಭಯವಿದ್ದರೂ ಜನತೆ ಪಟಾಕಿ ಖರೀದಿಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಈ ಬಾರಿ ದೇವರ ಹೆಸರು ಹಾಗೂ ಚಿತ್ರವಿರುವ ಪಟಾಕಿಗಳು ಮಾಯವಾಗಿದೆ. ಬದಲಿಗೆ ನಟಿಯರ ಫೋಟೋ ರಾರಾಜಿಸುತ್ತಿದೆ.