ಸಂಘಟನೆಗಳು ಸಮಾಜಮುಖಿ ಚಿಂತನೆಯೊಂದಿಗೆ ಸಾಮಾಜಿಕ ಬದ್ಧತೆಗೆ ಪೂರಕ ಚಟುವಟಿಕೆಯಲ್ಲಿ ತೊಡಗಿದಾಗ ಅದರಿಂದ ಯಶಸ್ಸು ಸಾಧ್ಯ ಎಂದು ಪ್ರಗತಿಪರ ಕೃಷಿಕ ತಿರುಮಲೇಶ್ವರ ಭಟ್ ಕಾನಾವು ಹೇಳಿದರು.
ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಸವಣೂರು ತನುಷ್ ಎಂಟರ್ಪ್ರೈಸ್ ಇದರ ಆಶ್ರಯದಲ್ಲಿ ಆ.30 ರಂದು ನಡೆದ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತನ್ಮೂಲಕ ಸಮಾಜದ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕು. ಆ ಕಾರ್ಯ ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ ಸಂಘಟನೆಗಳು ಜಾತಿ, ಮತ, ಧರ್ಮ ಮೀರಿ ಯೋಚನೆ ಮಾಡಿದಾಗ ಸಮಾಜಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ. ಆ ಕೆಲಸ ಮುಕ್ಕೂರಿನಲ್ಲಿ ನಡೆದಿದೆ ಎಂದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ ಸರಕಾರ ಕಾಲ ಕಾಲಕ್ಕೆ ಹಲವು ಯೋಜನೆಗಳನ್ನು ಪ್ರಕಟಿಸಿ ಜಾರಿಗೊಳಿಸುತ್ತದೆ. ಅದು ಜನರಿಗೆ ತಲುಪಲು ಆಯಾ ಊರಿನಲ್ಲಿ ಸಂಘಟನೆಗಳು ಸೇತುವಾಗಬೇಕು. ಆಗ ಕಟ್ಟ ಕಡೆಯ ವ್ಯಕ್ತಿ ಕೂಡ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಸವಣೂರು ತನುಷ್ ಎಂಟರ್ಪ್ರೈಸ್ ಮಾಲಕ ಡಿ.ಜೆ.ರವಿರಾಜ್ ಮಾತನಾಡಿ ವಿವಿಧ ಕಾರಣಗಳಿಂದ ಆರೋಗ್ಯದ ಸಮಸ್ಯೆ ಇಂದು ಹೆಚ್ಚಾಗಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ನೆರವಾಗುವ ನಿಟ್ಟಿನಲ್ಲಿ ಸರಕಾರಗಳು ಆರೋಗ್ಯ ಕಾರ್ಡ್ ಮೂಲಕ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಲು ಸಹಾಯ ನೀಡುತ್ತಿದೆ. ಈ ಬಗ್ಗೆ ಮಾಹಿತಿ ತಿಳಿಯಲು, ನೋಂದಣಿ ಮಾಡಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿ ಎಂದರು.
ಸಭಾಧ್ಯಕ್ಷತೆ ವಹಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ ಕಳೆದ ಹನ್ನೊಂದು ವರ್ಷಗಳಿಂದ ಸಂಘಟನೆ ಹತ್ತಾರು ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ. ನಮ್ಮ ಮೂಲ ಉದ್ದೇಶ ಸಮಾಜಪರ ಚಟುವಟಿಕೆ. ಅದರ ಭಾಗವಾಗಿ ಈ ಅಭಿಯಾನಗಳು ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ವಕ್ಪ್ ಬೋರ್ಡ್ ಸದಸ್ಯ ಇಸ್ಮಾಯಿಲ್ ಕಾನಾವು, ಬೆಂಗಳೂರು ಎಲ್ ಆ್ಯಂಡ್ ಟಿ ಕಂಪೆನಿಯ ಪೈಬರ್ ಎಂಜಿನಿಯರ್ ಯತೀಶ್ ಕಾನಾವು ಜಾಲು, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ ಮೊದಲಾದವರು ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಕ್ಷಿತ್ ಗೌಡ ಕಾನಾವು ಸ್ವಾಗತಿಸಿ, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.