ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಯಾವುದೇ ಜಮೀನುಗಳನ್ನು ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಲೀಸ್‌ಗೆ ಕೊಡುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿ ದೇವಸ್ಥಾನದ ಹಿತರಕ್ಷಣಾ ವೇದಿಕೆ ವತಿಯಿಂದ ಇಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಎಂ.ಹೆಚ್. ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾರ್ವಜನಿಕ ಸರಕಾರಿ ದೇವಸ್ಥಾನವಾಗಿದ್ದು, ಸದ್ರಿ ದೇವಸ್ಥಾನದ ಅಧೀನದ ಎಲ್ಲಾ ಜಮೀನುಗಳು ಶ್ರೀ ದೇವಳದ ಉಪಯೋಗಕ್ಕೆ ಅವಶ್ಯಕವಾಗಿರುತ್ತದೆ. ಸದ್ರಿ ದೇವಳದ ಜಮೀನುಗಳನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ವ್ಯಕ್ತಿಗಳಿಗೆ ಲೀಸ್‌ಗೆ ನೀಡಿದಲ್ಲಿ ಅದು ದೇವಸ್ಥಾನದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಯಾವುದೇ ಜಮೀನುಗಳನ್ನು ಯಾವುದೇ ಖಾಸಗಿ ಸಂಸ್ಥೆಗೆ, ವ್ಯಕ್ತಿಗಳಿಗೆ ಲೀಸ್ ಗೆ ನೀಡುವ ಪ್ರಸ್ತಾವನೆಗೆ ಸಂಘಟನೆಯಿಂದ, ಭಕ್ತರಿಂದ ಆಕ್ಷೇಪಣೆ / ವಿರೋಧ ಇದೆ. ಇಂತಹ ಪ್ರಸ್ತಾವನೆಗಳು ಇದ್ದಲ್ಲಿ ಅದನ್ನು ಪುರಸ್ಕರಿಸಬಾರದು ಎಂದು ವಿನಂತಿಸಲಾಗಿದೆ. ಯಾವುದಾದರೂ ಪ್ರಸ್ತಾವನೆಯನ್ನು ಪುರಸ್ಕರಿಸಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವಾಲಯದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕರಿಕ್ಕಳ, ಕಾರ್ಯದರ್ಶಿ ಶ್ರೀನಾಥ್ ಟಿ.ಎಸ್., ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ ಭಟ್ ಮಾಣಿಲ ಹಾಗೂ ಯುವ ನಾಯಕ ಗುರುಪ್ರಸಾದ್ ಪಂಜ ಉಪಸ್ಥಿತರಿದ್ದರು.
- Thursday
- November 21st, 2024