ಸುಮಾರು 60 ವರ್ಷಗಳ ಹಿಂದೆ ನಿರ್ಮಾಣಗೊಂಡ ಕಂದ್ರಪ್ಪಾಡಿ ಅಂಚೆ ಕಛೇರಿ ಸಂಪೂರ್ಣ ಶಿಥಿಲಗೊಂಡಿದ್ದು ಕುಸಿದ ಬೀಳುವ ಹಂತ ತಲುಪಿತ್ತು. ಈ ಬಗ್ಗೆ ಗ್ರಾಮಸ್ಥರ ಮನವಿಯಂತೆ ಆ.29 ರಂದು ಅಮರ ಸುದ್ದಿ ವರದಿ ಪ್ರಕಟಿಸಿತ್ತು.
ಆ.30 ರಂದು ಶಿಥಿಲ ಸ್ಥಿತಿಯಲ್ಲಿದ್ದ ಕಂದ್ರಪ್ಪಾಡಿಯ ಅಂಚೆ ಕಚೇರಿ ಇರುವ ಕಟ್ಟಡವನ್ನು ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಯ ವತಿಯಿಂದ ಟರ್ಪಾಲು ಹಾಸಿ ತಾತ್ಕಾಲಿಕ ದುರಸ್ತಿ ಪಡಿಸಿದ್ದಾರೆ. ಶ್ರಮದಾನದಲ್ಲಿ ಯುವಕ ಮಂಡಲದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಕಾರ್ಯದರ್ಶಿ ಓಂಪ್ರಕಾಶ್ ಮುಂಡೋಡಿ, ಭವಾನಿಶಂಕರ ಮುಂಡೋಡಿ, ಪದ್ಮನಾಭ ಮೀನಾಜೆ, ಉದಯಕುಮಾರ್ ಮುಂಡೋಡಿ, ಪುನೀತ್ ರವಿ ಹಿರಿಯಡ್ಕ, ಶಿವಪ್ರಸಾದ್ ಹೆದ್ದಾರಿ, ವಿನುತ್ ಕಲ್ಲಾಜೆ, ದೀಕ್ಷಿತ್ ಮುಂಡೋಡಿ, ಲಿಖಿತ್ ಬಾಳೆಕಜೆ, ವಿಜಯ್ ಮಾಡಬಾಕಿಲು ಭಾಗವಹಿಸಿದ್ದರು.
ಈ ಬಗ್ಗೆ ಯುವಕ ಮಂಡಲದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಅಮರ ಸುದ್ದಿಗೆ ಹೇಳಿಕೆ ನೀಡಿದ್ದು “ಕಂದ್ರಪ್ಪಾಡಿ ಅಂಚೆ ಕಚೇರಿಯು ಸ್ಥಳಾಂತರಗೊಳ್ಳುವುದೆಂಬ ವದಂತಿ ಹರಡುತ್ತಿದ್ದು, ಈ ಬಗ್ಗೆ ಅಂಚೆ ಇಲಾಖೆಯ ಅಧಿಕಾರಿಗಳನ್ನು ನಮ್ಮ ಯುವಕ ಮಂಡಲದ ವತಿಯಿಂದ ಸಂಪರ್ಕಿಸಿದ್ದು, ಸದ್ರಿ ಅಂಚೆ ಕಛೇರಿಯ ಸ್ಥಳಾಂತರದ ಬಗ್ಗೆ ಯಾವುದೇ ರೀತಿಯ ಅಧಿಕೃತ ಆದೇಶ ಅಥವಾ ಸುತ್ತೋಲೆ ಇರುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ . ಈಗಾಗಲೇ ನಮ್ಮ ಯುವಕ ಮಂಡಲದ ವತಿಯಿಂದ ಕಟ್ಟಡದ ರಿಪೇರಿ ಕಾರ್ಯ ಮತ್ತು ಸ್ವಚ್ಛತಾ ಕಾರ್ಯ ನಡೆದಿದ್ದು , ಫೆಬ್ರವರಿ 2020 ರಲ್ಲೇ ತೀರ್ಮಾನಿಸಿದಂತೆ ಅಂಚೆ ಕಛೇರಿಯ ಕಟ್ಟಡವನ್ನು ದೇವಚಳ್ಳ ಯುವಕ ಮಂಡಲದ ನೇತೃತ್ವದಲ್ಲಿ ಸಂಪೂರ್ಣ ದುರಸ್ತಿ ಕಾರ್ಯ ಕೆಲವೇ ದಿನಗಳಲ್ಲಿ ನಡೆಯಲಿದ್ದು ಫಲಾನುಭವಿಗಳು , ಗ್ರಾಮಸ್ಥರು ಗೊಂದಲಕ್ಕೆ, ಆತಂಕಕ್ಕೆ ಒಳಗಾಗುವುದು ಬೇಡ. ದುರಸ್ತಿ ಕಾರ್ಯಕ್ಕೆ ಸಲಕರಣೆಗಳಿಗಾಗಿ ಗ್ರಾಮಸ್ಥರಿಂದ ಅಗತ್ಯ ಸಹಕಾರ ಪಡೆಯುತ್ತೇವೆ ಎಂದಿದ್ದಾರೆ.